ADVERTISEMENT

ದಾವಣಗೆರೆ: ವಲಸೆ ಕಾರ್ಮಿಕರಿಗೆ ವಸತಿ ಸಮುಚ್ಚಯ

ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ನಿರ್ಮಾಣ, ಏಪ್ರಿಲ್‌ಗೆ ಲೋಕಾರ್ಪಣೆಯಾಗುವ ಸಾಧ್ಯತೆ

ಜಿ.ಬಿ.ನಾಗರಾಜ್
Published 12 ಫೆಬ್ರುವರಿ 2026, 7:24 IST
Last Updated 12 ಫೆಬ್ರುವರಿ 2026, 7:24 IST
ದಾವಣಗೆರೆಯ ಜೆ.ಎಚ್. ಪಟೇಲ್‌ ನಗರದಲ್ಲಿ ಕಟ್ಟಡ ಕಾರ್ಮಿಕರಿಗೆ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜೆ.ಎಚ್. ಪಟೇಲ್‌ ನಗರದಲ್ಲಿ ಕಟ್ಟಡ ಕಾರ್ಮಿಕರಿಗೆ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕೆಲಸ ಅರಸಿ ಜಿಲ್ಲಾ ಕೇಂದ್ರಕ್ಕೆ ವಲಸೆ ಬರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸುವ ಸುಸಜ್ಜಿತ ಸಮುಚ್ಚಯಗಳು ನಗರದ ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ₹ 18 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ‘ಶ್ರಮಿಕ ನಿವಾಸ’ ಯೋಜನೆಯಡಿ ಈ ಸೌಲಭ್ಯ ಕಲ್ಪಿಸುತ್ತಿದೆ. 528 ಜನ ಕಾರ್ಮಿಕರಿಗೆ ಆಶ್ರಯ ಒದಗಿಸುವ ಸಾಮರ್ಥ್ಯ ಹೊಂದಿರುವ ಎರಡು ವಸತಿ ಸಮುಚ್ಚಯಗಳು ನಿರ್ಮಾಣವಾಗುತ್ತಿವೆ. ಒಂದು ಸಮುಚ್ಚಯದ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಏಪ್ರಿಲ್‌ಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.

ಶಾಮನೂರು ಬಳಿ ಇರುವ ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಗೆ ಸೇರಿದ 2 ಎಕರೆಯಲ್ಲಿ ಕಾರ್ಮಿಕರ ವಸತಿ ಉದ್ದೇಶಕ್ಕೆ ಒಂದಷ್ಟು ಭೂಮಿಯನ್ನು ಬಳಸಿಕೊಳ್ಳಲಾಗಿದೆ. ಪ್ರತಿ ಸಮುಚ್ಚಯದಲ್ಲಿ 264 ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ 2 ಕಟ್ಟಡಗಳು ನಿರ್ಮಾಣವಾಗುತ್ತಿವೆ. ಒಂದು ಸಮುಚ್ಚಯ ಸಿದ್ಧವಾಗಿದ್ದು, ಬಣ್ಣ ಹಾಗೂ ಒಳಾಂಗಣ ವಿನ್ಯಾಸ ಮಾತ್ರ ಬಾಕಿ ಇದೆ. ಮತ್ತೊಂದು ಸಮುಚ್ಚಯ 2ನೇ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದೆ.

ADVERTISEMENT

ಸೌಲಭ್ಯಗಳು ಏನೇನು?: ಪ್ರತಿ ಸಮುಚ್ಚಯವು ನೆಲಮಹಡಿ ಹಾಗೂ 2 ಅಂತಸ್ತಿನ ಕಟ್ಟಡ ಒಳಗೊಂಡಿದೆ. ಇವು ಅಪಾರ್ಟ್‌ಮೆಂಟ್‌ ಮಾದರಿಯ ಕಟ್ಟಡಗಳಾಗಿದ್ದು, ಕಾರ್ಮಿಕರು ತಂಗಲು ಡಾರ್ಮೆಟರಿ ವ್ಯವಸ್ಥೆ ಇರಲಿದೆ. 25ಕ್ಕೂ ಹೆಚ್ಚು ಮಂಚಗಳನ್ನು ಇಡಬಹುದಾದ ವಿಶಾಲವಾದ ಹಾಲ್‌ಗಳಿವೆ. ಪುರುಷ ಮತ್ತು ಮಹಿಳೆಯರಿಗೆ ತಂಗಲು ಪ್ರತ್ಯೇಕ ವ್ಯವಸ್ಥೆ ಇದೆ. ಅಡುಗೆ ಮಾಡಿಕೊಳ್ಳಲು ವ್ಯವಸ್ಥೆ, ಶೌಚಾಲಯ, ಸ್ನಾನಗೃಹಗಳನ್ನು ಸಮುಚ್ಚಯ ಒಳಗೊಂಡಿದೆ. ನೆಲಮಹಡಿಯಲ್ಲಿ ಮಾತ್ರ ಡೈನಿಂಗ್‌ ಹಾಲ್‌ ಇರಲಿದೆ.

‘ಕಾರ್ಮಿಕ ಕಲ್ಯಾಣ ಮಂಡಳಿ ರೂಪಿಸಿದ ನಿಯಮಾವಳಿಗಳ ಪ್ರಕಾರ ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಗಾಳಿ, ಬೆಳಕು ಇರುವಂತೆ ವಿನ್ಯಾಸ ಮಾಡಲಾಗಿದೆ. ಸಾಮೂಹಿಕ ಶೌಚಾಲಯ ಹಾಗೂ ಸ್ನಾನಗೃಹಗಳು ಇವೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ದಿನವೊಂದಕ್ಕೆ ₹ 50 ಬಾಡಿಗೆ: ಕೆಲಸ ಅರಸಿ ಮಧ್ಯ ಕರ್ನಾಟಕದ ದಾವಣಗೆರೆಗೆ ಬರುವ ಕಟ್ಟಡ ಕಾರ್ಮಿಕರಿಗೆ ವಸತಿಯದೇ ದೊಡ್ಡ ಸಮಸ್ಯೆ. ತಿಂಗಳು, ದಿನಗಳ ಲೆಕ್ಕದಲ್ಲಿ ಕೆಲಸ ಮಾಡುವ ಕಾರ್ಮಿಕರು ವಾಸಕ್ಕೆ ಬಾಡಿಗೆ ಮನೆ, ಕೊಠಡಿಗಳನ್ನು ಪಡೆಯುವುದು ಕಷ್ಟ. ಕುಟುಂಬ ಸಮೇತ ಬರುವ ಕಾರ್ಮಿಕರು ನಿರ್ಮಾಣ ಹಂತದ ಕಟ್ಟಡಗಳ ಬಳಿಯೇ ವಾಸ್ತವ್ಯ ಹೂಡುತ್ತಿದ್ದಾರೆ. ಮೂಲಸೌಲಭ್ಯಗಳ ಕೊರತೆಯ ನಡುವೆಯೇ ಜೀವನ ಸಾಗಿಸುತ್ತಿದ್ದಾರೆ. ಇದನ್ನು ಮನಗಂಡ ಕಾರ್ಮಿಕ ಕಲ್ಯಾಣ ಮಂಡಳಿ ತಾತ್ಕಾಲಿಕ ವಾಸ್ತವ್ಯಕ್ಕೆ ವಸತಿ ಸಮುಚ್ಚಯಗಳನ್ನು ನಿರ್ಮಿಸುತ್ತಿದೆ.

ಈ ಸಮುಚ್ಚಯಗಳಲ್ಲಿ ತಂಗಲು ಕಟ್ಟಡ ಕಾರ್ಮಿಕರಿಗೆ ಮಾತ್ರ ಅವಕಾಶವಿದೆ. ಕಾರ್ಮಿಕರು ದಿನವೊಂದಕ್ಕೆ ₹ 50 ಪಾವತಿಸಿ ಕಟ್ಟಡದಲ್ಲಿ ವಾಸ್ತವ್ಯ ಹೂಡಬಹುದು. ಬೆಂಗಳೂರು, ಶಿವಮೊಗ್ಗ, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳಲ್ಲಿ ಇಂತಹ ವಸತಿ ಸಮುಚ್ಚಯಗಳು ಕಾರ್ಮಿಕರಿಗೆ ಈಗಾಗಲೇ ಸೇವೆ ಒದಗಿಸುತ್ತಿವೆ.

ದಾವಣಗೆರೆಯ ಜೆ.ಎಚ್. ಪಟೇಲ್‌ ನಗರದಲ್ಲಿ ಕಟ್ಟಡ ಕಾರ್ಮಿಕರಿಗೆ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜೆ.ಎಚ್. ಪಟೇಲ್‌ ನಗರದಲ್ಲಿ ಕಟ್ಟಡ ಕಾರ್ಮಿಕರಿಗೆ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜೆ.ಎಚ್. ಪಟೇಲ್‌ ನಗರದಲ್ಲಿ ಕಟ್ಟಡ ಕಾರ್ಮಿಕರಿಗೆ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯ –ಪ್ರಜಾವಾಣಿ ಚಿತ್ರ
ಹೊರ ರಾಜ್ಯ ಜಿಲ್ಲೆ ಹಾಗೂ ಬೇರೆ ತಾಲ್ಲೂಕುಗಳಿಂದ ವಲಸೆ ಬರುವ ಕಟ್ಟಡ ಕಾರ್ಮಿಕರು ಇಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದುಕೊಳ್ಳಲು ಅವಕಾಶವಿದೆ
-ಎಸ್‌.ಆರ್‌. ಅರವಿಂದ್‌, ಜಿಲ್ಲಾ ಕಾರ್ಮಿಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.