ದಾವಣಗೆರೆ: ಕಳವು ಪ್ರಕರಣವೊಂದರಲ್ಲಿ ಜಪ್ತಿ ಮಾಡಿದ ಚಿನ್ನಾಭರಣವನ್ನು ನ್ಯಾಯಾಲಯದ ಅನುಮತಿ ಪಡೆದು ಮಧ್ಯಪ್ರದೇಶದಿಂದ ತಂದಿದ್ದ ಬಡಾವಣೆ ಠಾಣೆಯ ಎಸ್‌ಐ ಬಿ.ಆರ್. ನಾಗರಾಜಪ್ಪ, ಮರುದಿನವೇ ಕೌಟುಂಬಿಕ ಕಲದಿಂದ ಮನನೊಂದು ನಾಪತ್ತೆಯಾಗಿದ್ದರು.
ಕಳವು ಪ್ರಕರಣವೊಂದರಲ್ಲಿ ಮಧ್ಯಪ್ರದೇಶದಲ್ಲಿ ಸಿಕ್ಕಿಬಿದ್ದ ಆರೋಪಿಗಳು ದಾವಣಗೆರೆಯಲ್ಲಿ ಕೃತ್ಯ ಎಸಗಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಬಡಾವಣೆ ಠಾಣೆಯ ಪೊಲೀಸರು, ಸ್ವತ್ತು ವಶಕ್ಕೆ ಎಸ್‌ಐ ನಾಗರಾಜಪ್ಪ ನೇತೃತ್ವದಲ್ಲಿ ತೆರಳಿದ್ದರು. ವಿಶೇಷ ಕರ್ತವ್ಯ ಮುಗಿಸಿ ಜೂನ್ 30ರಂದು ಬೆಳಿಗ್ಗೆ 11ಕ್ಕೆ ಮನೆಗೆ ಮರಳಿದ್ದ ಅವರು, ಜುಲೈ 1ರ ನಸುಕಿನಲ್ಲಿ ಮನೆ ತೊರೆದಿದ್ದರು.
‘ಜೂನ್ 30ರ ರಾತ್ರಿ 9 ಗಂಟೆಯ ಹೊತ್ತಿಗೆ ಕೌಟುಂಬಿಕ ವಿಚಾರವಾಗಿ ಪತಿಯೊಂದಿಗೆ ಗಲಾಟೆ ನಡೆಯಿತು. ಇದರಿಂದ ಬೇಸರ ಮಾಡಿಕೊಂಡ ಅವರು ನಸುಕಿನ 2 ಗಂಟೆಯ ಹೊತ್ತಿಗೆ ಮನೆಯಿಂದ ಹೊರಹೋಗಿದ್ದರು. ಮನೆಗೂ ಮರಳದೇ ಕರ್ತವ್ಯಕ್ಕೂ ಹಾಜರಾಗದೇ ಇರುವುದು ಆತಂಕ ಮೂಡಿಸಿದೆ. ಕಾಣೆಯಾಗಿರುವ ಪತಿಯನ್ನು ಹುಡುಕಿಕೊಡಿ’ ಎಂದು ಪತ್ನಿ ಕೆ.ಇ. ಲಲಿತಾ ಅವರು ಕೆಟಿಜೆ ನಗರ ಠಾಣೆಗೆ ಜುಲೈ 2ರಂದು ದೂರು ನೀಡಿದ್ದರು.
ದಾವಣಗೆರೆ ತಾಲ್ಲೂಕಿನ ಜವಳಘಟ್ಟ ಗ್ರಾಮದ ನಾಗರಾಜಪ್ಪ, 1993ರಲ್ಲಿ ಪೊಲೀಸ್ ಇಲಾಖೆ ಸೇರಿದ್ದರು. ಕಾನ್‌ಸ್ಟೆಬಲ್ ಆಗಿ ಚಿತ್ರದುರ್ಗದಿಂದ ಕರ್ತವ್ಯ ಆರಂಭಿಸಿದ ಅವರು ಹಲವು ಠಾಣೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆಯ ಸಂಚಾರ ಪೊಲೀಸ್ ಠಾಣೆ, ಬಸವನಗರ ಠಾಣೆಯಲ್ಲಿ ಕೆಲಸ ಮಾಡಿ ಎಎಸ್‌ಐ ಆಗಿ ಬಡ್ತಿ ಪಡೆದಿದ್ದರು. ಇತ್ತೀಚೆಗೆ ಬಡಾವಣೆ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ನಿವೃತ್ತಿಯ ಅಂಚಿನಲ್ಲಿದ್ದರು.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಲಲಿತಾ ಅವರನ್ನು ನಾಗರಾಜಪ್ಪ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ನಿಟುವಳ್ಳಿಯ ಪೊಲೀಸ್ ವಸತಿ ಗೃಹದಲ್ಲಿ ನೆಲೆಸಿದ್ದರು. ಇಬ್ಬರು ಮಕ್ಕಳ ಪೈಕಿ ಪುತ್ರಿಯ ವಿವಾಹವಾಗಿದೆ. 8 ತಿಂಗಳ ತುಂಬು ಗರ್ಭಿಣಿಯಾಗಿರುವ ಪುತ್ರಿ ಹೆರಿಗೆಗೆ ಇತ್ತೀಚೆಗೆ ತವರು ಮನೆಗೆ ಬಂದಿದ್ದಾರೆ. ಪುತ್ರಿಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ನಾಗರಾಜಪ್ಪ, ಜೀವನ ಅಂತ್ಯಗೊಳಿಸಿಕೊಂಡಿದ್ದು ಕುಟುಂಬವನ್ನು ದುಃಖದ ಮಡುವಿಗೆ ತಳ್ಳಿದೆ.
‘ಪತಿಗೆ ಆರೋಗ್ಯ ಸಮಸ್ಯೆ ಇತ್ತು. ರಕ್ತದೊತ್ತಡ, ಮಧುಮೇಹ ಸೇರಿ ಹಲವು ಕಾಲಿಯಿಂದ ಬಳಲುತ್ತಿದ್ದರು. ಮಧ್ಯಪ್ರದೇಶದಿಂದ ಮರಳಿದ ದಿನ ರಾತ್ರಿ ಮನೆಯ ಕೊಠಡಿಯಲ್ಲಿ ಮಲಗಿದ್ದರು. ಬೆಳಿಗ್ಗೆ ಹೊತ್ತಿಗೆ ಅವರು ಮನೆಯಲ್ಲಿ ಕಾಣಲಿಲ್ಲ. ಮುಂಬಾಗಿಲನ್ನು ಹೊರಗಿನಿಂದ ಚಿಲಕ ಹಾಕಲಾಗಿತ್ತು. ಹಿಂಬಾಗಿಲು ಮೂಲಕ ಮನೆಯಿಂದ ಹೊರಬಂದು ಪತಿಗೆ ದೂರವಾಣಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ’ ಎಂದು ನಾಗರಾಜಪ್ಪ ಅವರ ಪತ್ನಿ ಲಲಿತಾ ಮಾಧ್ಯಮದ ಎದುರು ದುಃಖ ತೋಡಿಕೊಂಡರು.
‘ಮಗ, ಅಳಿಯ, ಅಕ್ಕನ ಮಕ್ಕಳೊಂದಿಗೆ ಸೇರಿ ಪತಿಗೆ ಎಲ್ಲೆಡೆ ಹುಡಕಾಟ ನಡೆಸಿದೆವು. ಪೊಲೀಸರ ಬಳಿಯೂ ವಿಚಾರಿಸಿದೆವು. ಒಂದು ದಿನ ಕಳೆದರೂ ಪತಿ ಮನೆಗೆ ಮರಳಲಿಲ್ಲ. ಆತಂಕಗೊಂಡು ಜುಲೈ 2ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದೆವು. ಭಾನುವಾರ ಬೆಳಿಗ್ಗೆ 8ಕ್ಕೆ ದೂರವಾಣಿ ಕರೆ ಮಾಡಿದ ಪೊಲೀಸರು ತುಮಕೂರಿನಲ್ಲಿ ಮೃತಪಟ್ಟಿರುವ ಮಾಹಿತಿ ನೀಡಿದರು’ ಎಂದು ಕಣ್ಣೀರು ಸುರಿಸಿದರು.
ತುಮಕೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಬಡಾವಣೆಯ ಠಾಣೆಯ ಎಸ್‌ಐ ಬಿ.ಆರ್.ನಾಗರಾಜಪ್ಪ (59) ಅವರ ಮೃತದೇಹವನ್ನು ಭಾನುವಾರ ಸಂಜೆ ದಾವಣಗೆರೆಗೆ ತರಲಾಯಿತು. ಮನೆಯ ಮುಂದೆ ಕೆಲ ಹೊತ್ತು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಕುಟುಂಬದ ಆಕ್ರಂದನ ಮನಕಲಕುವಂತಿತ್ತು. ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂಭಾಗದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
‘ನಾಗರಾಜಪ್ಪ ಕರ್ತವ್ಯಕ್ಕೆ ರಜೆ ಹಾಕಿದ್ದು ಅಪರೂಪ. ಪತಿ–ಪತ್ನಿ ಸ್ನೇಹಿತರಂತೆ ಇದ್ದರು. ಜವಳಘಟ್ಟ ಗ್ರಾಮದ 1 ಎಕರೆ ಜಮೀನಿನಲ್ಲಿ ಇತ್ತೀಚೆಗೆ ತೋಟ ಮಾಡಿದ್ದರು. ರಜೆಯ ದಿನಗಳಲ್ಲಿ ದಂಪತಿ ಸಮೇತ ಗ್ರಾಮಕ್ಕೆ ಬಂದು ಕೆಲಸ ಮಾಡುತ್ತಿದ್ದರು’ ಎಂದು ಸಂಬಂಧಿಕರೊಬ್ಬರು ಕಂಬನಿ ಮಿಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.