ದಾವಣಗೆರೆ: ಯುವ ಮನಸುಗಳ ಸಾಂಸ್ಕೃತಿಕ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾದ ರಾಜ್ಯಮಟ್ಟದ ಯುವಜನೋತ್ಸವಕ್ಕೆ ದೇವನಗರಿಯ ಬಾಪೂಜಿ ಎಂಬಿಎ ಕಾಲೇಜು ಮೈದಾನ ಸಜ್ಜಾಗಿದೆ. ಎರಡು ದಿನ ಹಮ್ಮಿಕೊಂಡಿರುವ ಈ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಬೆಳಿಗ್ಗೆ 11ಕ್ಕೆ ಚಾಲನೆ ನೀಡಲಿದ್ದಾರೆ.
8,000 ಆಸನಗಳ ಜರ್ಮನ್ ಟೆಂಟ್ ಸಭಾಂಗಣವನ್ನು ಎಂಬಿಎ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿದೆ. ಪ್ರಧಾನ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ಮುಕ್ತಾಯವಾದ ಬಳಿಕ ಏಳು ಸಮನಾಂತರ ವೇದಿಕೆಗಳಲ್ಲಿ ಸ್ಪರ್ಧೆಗಳು ಆರಂಭವಾಗಲಿವೆ. ಬಿಐಟಿ ಕಾಲೇಜು, ಎಸ್.ಎಸ್.ನ್ಯಾಷನಲ್ ಪಬ್ಲಿಕ್ ಶಾಲೆ ಹಾಗೂ ದೃಶ್ಯ ಕಲಾ ಕಾಲೇಜು ಆವರಣದಲ್ಲಿ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ.
ರಾಜ್ಯದ ಎಲ್ಲ ಜಿಲ್ಲೆಗಳಿಂದ 1,200ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಜನಪದ ನೃತ್ಯ, ಜನಪದ ಗೀತೆ, ವಿಜ್ಞಾನ ವಸ್ತು ಪ್ರದರ್ಶನ, ಕಥೆ, ಕವನ ರಚನೆ, ಚಿತ್ರಕಲೆ ಹಾಗೂ ಚರ್ಚೆ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ನಾಲ್ಕು ಸ್ಥಳಗಳಲ್ಲಿ ಆಯೋಜಿಸಿರುವ ಉತ್ಸವಗಳಿಗೆ ತೆರಳಲು ‘ಹಾಪ್ ಆನ್ ಹಾಪ್ ಆಫ್’ ಬಸ್ ಸೇವೆ ಕಲ್ಪಿಸಲಾಗಿದೆ. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮತ್ತು ತಂಡ ಸಾಂಸ್ಕೃತಿಕ ಕಾರ್ಯಕ್ರಮ ಭಾನುವಾರ ಸಂಜೆ 8ಕ್ಕೆ ನಡೆಯಲಿದೆ. ಸೋಮವಾರ ಮಧ್ಯಾಹ್ನ 4ಕ್ಕೆ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ.
ಕಲಾತಂಡಗಳ ಮೆರವಣಿಗೆ
ಯುವಜನೋತ್ಸವದ ಚಾಲನೆಗೂ ಮುನ್ನ ಕಲಾತಂಡಗಳ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಕರ್ನಲ್ ಎಂ.ಬಿ.ರವೀಂದ್ರನಾಥ್ ವೃತ್ತದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಭಾನುವಾರ ಬೆಳಿಗ್ಗೆ 9ಕ್ಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಕೇಂದ್ರ ಯುವಜನ ಸೇವಾ ಇಲಾಖೆಯ ದಕ್ಷಿಣ ವಲಯದಿಂದ ಪಂಜಾಬಿನ ಬಾಂಗ್ಡಾ, ಒಡಿಶಾದ ಸಂಭಾಲ್ಪುರಿ, ಮಹಾರಾಷ್ಟ್ರದ ಲಾವಣಿ, ಕೇರಳದ ಕಥಕ್ಕಳಿ ಹಾಗೂ ಥಯಂ, ಮಧ್ಯಪ್ರದೇಶದ ಬರೇಡಿ ನೃತ್ಯ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ರಾಜ್ಯದ ವಿವಿಧೆಡೆಯಿಂದ 15 ಕಲಾತಂಡಗಳು ಆಗಮಿಸುತ್ತಿದ್ದು, ಸ್ಪರ್ಧಾಳುಗಳು ಪಾಲ್ಗೊಳ್ಳಲಿದ್ದಾರೆ.
ಪಾರಂಪರಿಕ ಶೈಲಿಯ ಊಟ
ರಾಜ್ಯದ ವಿವಿಧೆಡೆಯಿಂದ ಬರುತ್ತಿರುವ ಸ್ಪರ್ಧಾಳುಗಳಿಗೆ ದಾವಣಗೆರೆ ಪಾರಂಪರಿಕ ಶೈಲಿಯ ಊಟ ನೀಡಲಾಗುತ್ತಿದೆ. ಬೆಣ್ಣೆದೋಸೆ, ನರ್ಗಿಸ್ ಮಂಡಕ್ಕಿ, ಮಾದ್ಲಿ ಹಾಗೂ ಮಾಂಸಾಹಾರ ಕೂಡ ನೀಡುತ್ತಿರುವುದು ವಿಶೇಷ.
ಊಟಕ್ಕೆ ಬೇಳೆ ಮತ್ತು ಕಾಯಿ ಹೋಳಿಗೆ, ಜೋಳದ ರೊಟ್ಟಿ, ಬದನೆಕಾಯಿ ಪಲ್ಯ, ಮಿರ್ಚಿ, ಅಕ್ಕಿರೊಟ್ಟಿ, ಗೋದಿ ಪಾಯಸ, ಜಿಲೇಬಿ, ಮಸಾಲಾ ಪರೋಟ, ತಿಂಡಿಗೆ ಬೆಣ್ಣೆ ದೋಸೆ, ಸಂಜೆ ನರ್ಗಿಸ್ ಮಂಡಕ್ಕಿ ಹಾಗೂ ರಾತ್ರಿಗೆ ಚಿಕನ್ ಮಸಾಲಾ, ಚಿಕನ್ ಕಬಾಬ್, ರೂಮಾಲ್ ರೋಟಿ, ಫಿಶ್ ಫ್ರೈ, ಚಿಕನ್ ಬಿರಿಯಾನಿ ನೀಡಲಾಗುತ್ತಿದೆ.
‘ಎಸ್.ಎಸ್.ನ್ಯಾಷನಲ್ ಪಬ್ಲಿಕ್ ಶಾಲಾ ಆವರಣದಲ್ಲಿ 10 ಸಾವಿರ ಜನರ ಊಟಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಬಾಪೂಜಿ ಸಮುದಾಯ ಭವನದಲ್ಲಿ ಸ್ಪರ್ಧಾಳುಗಳು, ತೀರ್ಪುಗಾರರು ಹಾಗೂ ಅತಿಥಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಪರ್ಧಾಳುಗಳ ಹಾಸ್ಟೆಲ್‌ಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜಲಕ್ರೀಡೆ, ವಾಲ್ ಕ್ಲೈಂಬಿಂಗ್ ಆಕರ್ಷಣೆ
ಯುವಜನೋತ್ಸವದ ಅಂಗವಾಗಿ ಮೂರು ದಿನ ಜಲ ಸಾಹಸ ಕ್ರೀಡೆ, ವಾಲ್ ಕ್ಲೈಂಬಿಂಗ್ ಹಾಗೂ ಹಗ್ಗದ ಚಟುವಟಿಕೆಗಳ ತರಬೇತಿಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಯುವಸಮೂಹದಲ್ಲಿ ಜಲಸಾಹಸದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದೆ.
ಕುಂದುವಾಡ ಮತ್ತು ಕೊಂಡಜ್ಜಿ ಕೆರೆಯಲ್ಲಿ ಈ ಕ್ರೀಡೆಗಳು ನಡೆಯಲಿವೆ. ಹೆಸರು ನೋಂದಣಿ ಮಾಡಿಕೊಂಡವರಿಗೆ ಮಾತ್ರ ಅವಕಾಶವಿದೆ. ಕೃತಕ ಗೋಡೆ ಹತ್ತುವ ತರಬೇತಿ ಕೂಡ ಎಂಬಿಎ ಕಾಲೇಜು ಮೈದಾನದಲ್ಲಿ ಸಿಗಲಿದೆ. ಭಾನುವಾರದಿಂದ ಮಂಗಳವಾದವರೆಗೆ ಈ ಕ್ರೀಡೆಗಳು ನಡೆಯಲಿವೆ.
‘ಜಲ ಸಾಹಸ ಕ್ರೀಡೆಗಳ ತರಬೇತಿಗೆ ಜನರಲ್ ತಿಮ್ಮಯ್ಯ ಅಕಾಡೆಮಿ ತರಬೇತುದಾರರು ಬರುತ್ತಿದ್ದಾರೆ. ಕುಂದವಾಡ ಕೆರೆಯಲ್ಲಿ ಕಯಾಕಿಂಗ್, ಕೆನೋಯಿಂಗ್ ಕ್ರೀಡೆಗಳನ್ನು ನಡೆಸಲಾಗುತ್ತದೆ. ಜಟ್‌ಸ್ಕಿ ಸೇರಿ ಇತರ ಕ್ರೀಡೆಗಳನ್ನು ಕೊಂಡಜ್ಜಿ ಕೆರೆಯಲ್ಲಿ ಆಯೋಜಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
1,500 ಪೊಲೀಸರ ನಿಯೋಜನೆ
ರಾಜ್ಯ ಮಟ್ಟದ ಯುವಜನೋತ್ಸವ ಹಾಗೂ ಕನಕಜಯಂತಿ ಒಂದೇ ದಿನ ನಡೆಯುತ್ತಿರುವುದರಿಂದ ಭದ್ರತೆ ಹಾಗೂ ಸುಗಮ ಸಂಚಾರಕ್ಕೆ ಸುಮಾರು 1,500 ಪೊಲೀಸರನ್ನು ನಿಯೋಜಿಸಲಾಗಿದೆ.
‘ಎರಡು ದೊಡ್ಡ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಎಂಬಿಎ ಕಾಲೇಜು ಮೈದಾನ ಹಾಗೂ ಹೈಸ್ಕೂಲ್ ಮೈದಾನಕ್ಕೆ ಪ್ರತ್ಯೇಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆ ಸುಗಮ ಸಂಚಾರಕ್ಕೂ ಒತ್ತು ನೀಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.