
ದಾವಣಗೆರೆ: ಜಿಲ್ಲೆಯನ್ನು ಮಾದಕವಸ್ತು ಮುಕ್ತ ಮಾಡುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನಗಳನ್ನು ಇನ್ನಷ್ಟು ತ್ವರಿತಗೊಳಿಸಲಾಗುವುದು. ಹೊರ ರಾಜ್ಯಗಳಿಂದ ಮಾದಕವಸ್ತು ಬರುವುದನ್ನು ತಡೆಯಲು ಹೆಚ್ಚಿನ ನಿಗಾ ಇಡಲಾಗುವುದು ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಆಶ್ವಾಸನೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ಉಮಾ ಪ್ರಶಾಂತ್ ಅವರಿಂದ ಬುಧವಾರ ಅಧಿಕಾರ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮಾದಕ ವಸ್ತುಗಳ ಮಾರಾಟ ಜಾಲವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಶಿಸ್ತುಬದ್ಧ ತನಿಖೆ ನಡೆದಿದೆ. ಇಡೀ ಕರ್ನಾಟಕವನ್ನು ಮಾದಕವಸ್ತು ಮುಕ್ತ ಜಿಲ್ಲೆ ಮಾಡಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ’ ಎಂದರು.
‘ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಮರಳು ಅಕ್ರಮ ದಂಧೆ, ಕಳ್ಳಸಾಗಣೆ ನಿಯಂತ್ರಿಸುವಲ್ಲಿ ಜಿಲ್ಲೆಯ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಅಕ್ರಮದಲ್ಲಿ ತೊಡಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.
‘ಪೊಲೀಸರ ಕುರಿತು ಜನರಲ್ಲಿ ಇನ್ನೂ ಭೀತಿ ಇದೆ. ಈ ಭಯವನ್ನು ಹೋಗಲಾಡಿಸುವ ಪ್ರಯತ್ನ ಆಗಬೇಕಿದೆ. ಜನರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನಗಳು ನಡೆಯಬೇಕಿದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಒತ್ತು ನೀಡಲಾಗುವುದು. ಸೈಬರ್ ಅಪರಾಧಗಳ ಕುರಿತು ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಕಾನೂನು ಎದುರು ಎಲ್ಲರೂ ತಲೆಬಾಗಬೇಕಾಗುತ್ತದೆ. ಕಾನೂನು ಎತ್ತಿ ಹಿಡಿಯುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಲಿದೆ. ಇತ್ತೀಚೆಗೆ ಪೊಲೀಸರ ಮೇಲೆ ನಡೆದ ಹಲ್ಲೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಲೋಪ ಆಗದಂತೆ ತನಿಖೆ ನಡೆಸಿ ತಾರ್ಕಿಕ ಅಂತ್ಯ ಕಾಣಿಸಲಾಗುತ್ತದೆ. ಪೊಲೀಸರಿಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಸಹಕಾರವೂ ಮುಖ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.