
ದಾವಣಗೆರೆ: ಎಲ್ಲೆಂದರಲ್ಲಿ ಬಿಸಾಡುವ ಆಹಾರ ತ್ಯಾಜ್ಯ.. ಆಹಾರವನ್ನು ಹುಡುಕುತ್ತಾ ಬೀದಿ–ಬೀದಿ ಅಲೆಯುವಾಗ ಎದುರಾಗುವ ಜನರ ಮೇಲೆ ದಾಳಿ ನಡೆಸುತ್ತಿರುವ ಬೀದಿನಾಯಿಗಳು.. ಈ ಎರಡೂ ಸಮಸ್ಯೆ ನಿವಾರಣೆಗೆ ಪಾಲಿಕೆ ಹೊಸ ಯೋಜನೆ ರೂಪಿಸಿದೆ. ಬೀದಿನಾಯಿಗಳಿಗೆ ಆಹಾರ ನೀಡುವ ‘ಫೀಡಿಂಗ್ ಪಾಯಿಂಟ್’ಗಳನ್ನು ನಗರದೆಲ್ಲೆಡೆ ಗುರುತಿಸಿದೆ.
ಬೀದಿನಾಯಿಗಳಿಗೆ ಎಲ್ಲ ಕಡೆಯೂ ಸುಲಭವಾಗಿ ಆಹಾರ ಲಭ್ಯವಾದರೆ ಅವುಗಳ ಉಪಟಳ ಕಡಿಮೆಯಾಗಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಅದರ ನಿರ್ದೇಶನದಂತೆ ಮಹಾನಗರ ಪಾಲಿಕೆ ಆಡಳಿತವು ಬೀದಿನಾಯಿಗಳಿಗೆ ಆಹಾರ ನೀಡುವ ಪ್ರತ್ಯೇಕ ತಾಣಗಳನ್ನು ನಗರದಾದ್ಯಂತೆ ಗೊತ್ತುಪಡಿಸಿದೆ.
ಪಾಲಿಕೆ ವ್ಯಾಪ್ತಿಯ 45 ವಾರ್ಡ್‌ಗಳ ರಸ್ತೆ ಬದಿ ಹಾಗೂ ಸರ್ಕಾರಕ್ಕೆ ಸೇರಿದ ಖಾಲಿ ಜಾಗಗಳಲ್ಲಿ ‘ಫೀಡಿಂಗ್ ಪಾಯಿಂಟ್’ಗೆ ಸ್ಥಳ ಗುರುತಿಸಿ, ಅಲ್ಲಿ ಫಲಕಗಳನ್ನು ಅವಳಡಿಸಲಾಗಿದೆ. ಖಾಸಗಿ ಜಾಗವನ್ನು ಇದಕ್ಕೆ ಬಳಸಿಕೊಂಡಿಲ್ಲ. ಆಯಾ ಭಾಗದ ಸಾರ್ವಜನಿಕರು ಪಾಲಿಕೆ ನಿಗದಿಪಡಿಸಿದ ಸ್ಥಳದಲ್ಲೇ ನಾಯಿಗಳಿಗೆ ಆಹಾರ ಹಾಕಬೇಕಿದೆ. ಬೇರೆಕಡೆ ಆಹಾರ ನೀಡಿದರೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ. ವಾರ್ಡ್‌ಗೆ ಎರಡು ಜಾಗ ಗುರುತಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಸದ್ಯ ವಾರ್ಡ್‌ಗೆ ತಲಾ ಒಂದು ಕಡೆ ಜಾಗ ಗೊತ್ತು ಮಾಡಲಾಗಿದೆ.
‘ಈ ಸ್ಥಳಗಳನ್ನು ನಗರದ ಪೌರಕಾರ್ಮಿಕರು ದಿನವೂ ಸ್ವಚ್ಛಗೊಳಿಸಲಿದ್ದಾರೆ. ಜನರು ಇಂತಹ ಸ್ಥಳಗಳನ್ನು ಕಸ ಎಸೆಯುವ ತಾಣಗಳನ್ನಾಗಿ ಮಾಡಬಾರದು. ಫೀಡಿಂಗ್ ಪಾಯಿಂಟ್‌ಗಳ ಬಗ್ಗೆ ಜನರಲ್ಲಿ ಜಾಗೃತಿ ಹಾಗೂ ಅವುಗಳ ಬಳಕೆ ಬಗ್ಗೆ ಅರಿವು ಮೂಡಿಸಲಾಗುವುದು. ಈ ಸ್ಥಳಗಳ ಜಿಪಿಎಸ್ ಮ್ಯಾಪಿಂಗ್ ಮಾಡಿ, ಸಾರ್ವಜನಿಕರಿಗೆ ಮಾಹಿತಿ ತಿಳಿಸಲಾಗುವುದು’ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ಶ್ರೀನಿವಾಸ್ ಟಿ. ತಿಳಿಸಿದ್ದಾರೆ.
ಆದರೆ ಪಾಲಿಕೆ ನಿಗದಿಪಡಿಸಿರುವ ಸ್ಥಳಗಳ ಬಗ್ಗೆ ಕೆಲವು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸ್ಥಳಗಳು ಹೆಚ್ಚಿನ ಸಂಖ್ಯೆಯ ಬೀದಿನಾಯಿಗಳ ಜಮಾವಣೆಗೆ ಕಾರಣವಾಗಲಿದ್ದು, ದಾರಿಯಲ್ಲಿ ಓಡಾಡುವ ಜನರಿಗೆ ತೊಂದರೆ ನೀಡುವ ಸಾಧ್ಯತೆ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಗುರುತಿಸಿರುವ ಹಲವು ತಾಣಗಳಲ್ಲಿ ಬೀದಿನಾಯಿಗಳೇ ಓಡಾಡುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಕೆಲವು ಸ್ಥಳಗಳನ್ನು ವಾಣಿಜ್ಯ ಪ್ರದೇಶಗಳ ಬಳಿ ಗುರುತಿಸಿದ್ದು, ಇದರಿಂದ ಅಂಗಡಿಗಳಿಗೆ ಹೋಗಿಬರುವ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇಲ್ಲಿನ ಮಹಾನಗರ ಪಾಲಿಕೆ ಆಡಳಿತವು ಬೀದಿನಾಯಿಗಳ ಆರೈಕೆ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ನಗರದ ಹೊರವಲಯದಲ್ಲಿ ಸೂಕ್ತ ಸ್ಥಳವೊಂದನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಶ್ವಾನಗಳ ಆರೈಕೆ ಕೇಂದ್ರ ಕಟ್ಟಡದ ವಿನ್ಯಾಸವನ್ನು ಮಾರ್ಗಸೂಚಿಗಳ ಪ್ರಕಾರವೇ ರೂಪಿಸಲಾಗುತ್ತದೆ. ಪ್ರಾಣಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ನಡೆಸುವ ಸೌಲಭ್ಯವನ್ನೂ ಕಟ್ಟಡ ಒಳಗೊಂಡಿರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶಾಲೆ ಆಸ್ಪತ್ರೆ ಬಸ್ ನಿಲ್ದಾಣ ಮೊದಲಾದ ಸೂಕ್ಷ್ಮ ಹಾಗೂ ಜನನಿಬಿಡ ಸ್ಥಳಗಳಲ್ಲಿ ಇರುವ ನಾಯಿಗಳನ್ನು ಮೊದಲ ಪ್ರಾಶಸ್ತ್ಯ ನೀಡಿ ಸೆರೆಹಿಡಿದು ಇಲ್ಲಿ ಇಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ನಡೆಸಲು ಪಾಲಿಕೆಗೆ ₹80 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಫುಡ್ ಜೋನ್‌ಗಳಲ್ಲಿ ಬೀದಿ ನಾಯಿಗಳಿಗೆ ಪಾಲಿಕೆ ಆಹಾರ ನೀಡುವುದಿಲ್ಲ. ಸ್ವಯಂ ಆಸಕ್ತಿ ಇರುವ ಸಾರ್ವಜನಿಕರು ಗೊತ್ತುಪಡಿಸಿದ ಸ್ಥಳದಲ್ಲಿ ಆಹಾರವನ್ನು ಹಾಕಲು ಅವಕಾಶವಿದೆ–ಶ್ರೀನಿವಾಸ್ ಟಿ., ಪಾಲಿಕೆಯ ಪರಿಸರ ಎಂಜಿನಿಯರ್
ನಾಯಿಗಳಿಗೆ ಆಹಾರ ನೀಡುವ ಜಾಗ ಎಂಬ ಫಲಕ ಅಳವಡಿಸಿದ್ದಾರೆ. ಆದರೆ ಪಾಲಿಕೆಯವರು ಈ ಬಗ್ಗೆ ಜನರಿಗೆ ಮಾಹಿತಿ ನೀಡಿಲ್ಲ. ಇದುವರೆಗೂ ಜನರು ಆಹಾರ ತಂದು ಹಾಕಿರುವುದನ್ನೇ ನೋಡಿಲ್ಲ–ರಮೇಶ್ ಯು., ಸರಸ್ವತಿ ನಗರದ ನಿವಾಸಿ
ಸಮೀಪದ ದೇವಸ್ಥಾನದ ಬಳಿ ನಾಯಿಗಳು ಹೆಚ್ಚಾಗಿ ಇರುತ್ತವೆ. ಅಲ್ಲಿ ಫಲಕ ಹಾಕುವ ಬದಲು ಪಾಲಿಕೆಯವರು ಗೂಡಂಗಡಿ ಬಳಿ ಹಾಕಿದ್ದಾರೆ. ಇಲ್ಲಿ ನಾಯಿಗಳಿಗೆ ಯಾರೂ ಆಹಾರ ಹಾಕುತ್ತಿಲ್ಲ–ಕೊಟ್ರೇಶ್ ನಿಟುವಳ್ಳಿ, ನಿವಾಸಿ (ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.