
ದಾವಣಗೆರೆ: ‘ಮನಸ್ಸಿಗೆ ಉಲ್ಲಾಸ ನೀಡಿ, ಓದಿಗೆ ಹೊಸ ಚೈತನ್ಯ ನೀಡುವ ಶಕ್ತಿ ಕಲೆಗಿದೆ. ಕ್ರೀಡೆ, ಚಿತ್ರಕಲೆ, ಸಂಗೀತ, ನೃತ್ಯದಂತಹ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಉಲ್ಲಾಸಮಯ ಜೀವನ ನಡೆಸಬಹುದು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾಲಯಲ್ಲಿ ಶನಿವಾರ ಏರ್ಪಡಿಸಿದ್ದ ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಶಿವಗಂಗೋತ್ರಿ ಯುವಜನೋತ್ಸವ’ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಓದಿನ ನಡುವೆ ಇಷ್ಟದ ಸಂಗೀತ ಕೇಳುತ್ತಿದ್ದಂತೆ ಮನಸ್ಸಿಗೆ ಮುದ ಸಿಗುತ್ತದೆ. ಹಾಗೆಯೇ ಪದವಿ ಅಧ್ಯಯನದ ಪಠ್ಯದ ಕಲಿಕೆಯ ಜೊತೆಗೆ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಂತಹ ಪಠ್ಯೇತರ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಇದರಿಂದ ಏಕಾಗ್ರತೆ ಹೆಚ್ಚಿ, ಆತ್ಮವಿಶ್ವಾಸದಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದು ಹೇಳಿದರು.
‘ಭಾರತವು ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯನ್ನು ಒಳಗೊಂಡಿದೆ. ವೈವಿಧ್ಯಮಯ ಕಲೆ, ಸಂಸ್ಕೃತಿ, ಕಲಾಕೌಶಲ, ವೃತ್ತಿ ಕೌಶಲಗಳು ವ್ಯಕ್ತಿತ್ವವನ್ನು ವಿಕಸನಗೊಳಿಸಲು ಅನುಕೂಲವಾಗಿವೆ. ಯಾವುದೇ ರೀತಿಯ ಸಮಸ್ಯೆ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವೂ ಕಲೆಗಿದೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಗೀತ ಕಲಾವಿದೆ ಸುಶೀಲಾ ಜೋಶಿ ಹಾಡು ಹಾಡಿದರು.
ಕುಲಸಚಿವ ಎಸ್.ಬಿ.ಗಂಟಿ ಮಾತನಾಡಿ, ‘ವ್ಯಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಶಕ್ತಿಯು ಕಲೆ, ಸಂಗೀತಕ್ಕಿದೆ’ ಎಂದು ಹೇಳಿದರು.
ಸ್ನಾತಕೋತ್ತರ ವಿದ್ಯಾರ್ಥಿ ಕೂಟದ ಅಧ್ಯಕ್ಷ ಸತೀಶ ವಲ್ಲೇಪುರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿ ಕೂಟದ ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ, ಶಿಕ್ಷಣ ನಿಕಾಯದ ಡೀನ್ ಪ್ರೊ.ಕೆ.ವೆಂಕಟೇಶ, ಪ್ರೊ.ಅಶೋಕಕುಮಾರ ಪಾಳೇದ, ಪ್ರೊ.ಮಲ್ಲಿಕಾರ್ಜುನ ಕೆ. ಉಪಸ್ಥಿತರಿದ್ದರು. ಆಸೀಫುಲ್ಲಾ, ಜಿ.ನೀಲಮ್ಮ, ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.