ADVERTISEMENT

ದಾವಣಗೆರೆ ವಿವಿ: ಜುಲೈನಲ್ಲಿ ಪದವಿ ಪರೀಕ್ಷೆ

ಅಂತರಕ್ಕೆ ಆದ್ಯತೆ, ಮಾಸ್ಕ್, ಸ್ಯಾನಿಟೈಸರ್ ಬಳಕೆ: ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ

​ಪ್ರಜಾವಾಣಿ ವಾರ್ತೆ
Published 12 ಮೇ 2020, 14:25 IST
Last Updated 12 ಮೇ 2020, 14:25 IST
 ಪ್ರೊ.ಎಸ್.ವಿ ಹಲಸೆ
 ಪ್ರೊ.ಎಸ್.ವಿ ಹಲಸೆ   

ದಾವಣಗೆರೆ: ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಮತ್ತು ಯುಜಿಸಿ ಮಾರ್ಗಸೂಚಿ ಮತ್ತು ಸಲಹೆಗಳನ್ನು ಆಧರಿಸಿ ಜುಲೈನಲ್ಲಿ ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲು ದಾವಣಗೆರೆ ವಿಶ್ವವಿದ್ಯಾಲಯ ಸಿದ್ಧತೆ ಮಾಡಿಕೊಂಡಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಭರವಸೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಅಧ್ಯಕ್ಷರು, ಸಂಯೋಜನಾಧಿಕಾರಿಗಳು, ಸಿಂಡಿಕೇಟ್ ಸದಸ್ಯರು ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರ ಜೊತೆ ವಿಡಿಯೊ ಕಾನ್ಫರೆನ್ಸ್ ನಡೆಸಿ, ಎಲ್ಲರ ಸಲಹೆ ಸಂಗ್ರಹಿಸಿದ ನಂತರ ಮಾತನಾಡಿದರು.

‘ಜೂನ್ ತಿಂಗಳಲ್ಲಿ ಮೂರು ವಾರ ರಜಾರಹಿತ ನಿರಂತರ ತರಗತಿ ನಡೆಸಿ ಬಾಕಿ ಇರುವ ಪಠ್ಯಕ್ರಮ ಪೂರ್ಣಗೊಳಿಸಿ, ಪಾಠದ ಪುನರಾವಲೋಕನ ಮಾಡಲಾಗುವುದು. ಇದೇ ಅವಧಿಯಲ್ಲಿ ಪ್ರಾಯೋಗಿಕ ತರಬೇತಿ, ಕಿರು ಸಂಶೋಧನಾ ವರದಿ, ಪ್ರೊಜೆಕ್ಟ್, ಆಂತರಿಕ ಪರೀಕ್ಷೆ, ಪ್ರಾಯೋಗಿಕ ಅಧ್ಯಯನ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಒಂದು ವಾರ ಪರೀಕ್ಷಾ ಸಿದ್ಧತೆಗೆ ಅವಕಾಶ ನೀಡಿ, ಜುಲೈನಲ್ಲಿ ಪರೀಕ್ಷೆ ಹಮ್ಮಿಕೊಳ್ಳಲಾಗುವುದು’ ಎಂದರು.

ADVERTISEMENT

‘ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮೊದಲು ಪರೀಕ್ಷೆ ನಡೆಸಿ, ಶೀಘ್ರ ಫಲಿತಾಂಶ ಪ್ರಕಟಿಸಲಾಗುವುದು. ಇದೇ ಸಂದರ್ಭ ಹಿಂಬಾಕಿ (ಬ್ಯಾಕ್‍ಲಾಗ್) ವಿಷಯಗಳ ಪರೀಕ್ಷೆಯನ್ನೂ ನಡೆಸಲಾಗುವುದು. ಜುಲೈ ಅಂತ್ಯದೊಳಗೆ ಪರೀಕ್ಷಾ ಫಲಿತಾಂಶ ಪ್ರಕಟಿಸಿ, ವಿದ್ಯಾರ್ಥಿಗಳ ಭವಿಷ್ಯದ ದಾರಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದು ವಿವರಿಸಿದರು.

‘ಎಂಬಿಎ, ಬಿ.ಇಡಿ, ಬಿಪಿಇಡಿ, ಎಂಇಡಿ ಮತ್ತು ಎಂಪಿಇಡಿ ಪದವಿಗಳ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 4ರಿಂದ 6 ವಾರಗಳ ಕಾಲ ಪಾಠ ಪ್ರವಚನ, ಪ್ರಾಯೋಗಿಕ ತರಗತಿ, ಆಂತರಿಕೆ ಪರೀಕ್ಷೆ, ಬೋಧನಾ ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ವಿದ್ಯಾರ್ಥಿಗಳ ಎಲ್ಲ ಗೊಂದಲ, ಆತಂಕ ನಿವಾರಿಸಿ, ಆತ್ಮವಿಶ್ವಾಸ ಮೂಡಿಸುವ ಮತ್ತು ಅವರಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಸಕಾರಾತ್ಮಕ ವಾತಾವರಣ ನಿರ್ಮಿಸಲಾಗುವುದು. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯದ ಎಲ್ಲ ಪ್ರಾಧ್ಯಾಪಕರು ವಿದ್ಯಾರ್ಥಿ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುವರು’ ಎಂದು ಭರವಸೆ ನೀಡಿದರು.

‘ಸ್ನಾತಕ ಪದವಿಯ 3 ಮತ್ತು 5ನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್‍ಗೆ ಆಗಸ್ಟ್ 1ರಿಂದ ಹಾಗೂ ಒಂದನೇ ಸೆಮಿಸ್ಟರ್‍ಗೆ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 1ರಿಂದ ತರಗತಿಗಳು ಆರಂಭವಾಗಲಿವೆ. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಮುಂದಿನ ಆದೇಶದವರೆಗೆ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಲಾಕ್‍ಡೌನ್‍ಗಿಂತ ಮುಂಚೆ ಪದವಿ ಕಾಲೇಜಿನಲ್ಲಿ ಶೇ 75ರಿಂದ 80ರಷ್ಟು ಪಠ್ಯಕ್ರಮ ಮುಗಿದಿತ್ತು. ಲಾಕ್‍ಡೌನ್ ಅವಧಿಯಲ್ಲಿ ಬಹುತೇಕ ಪಠ್ಯದ ಪಾಠ ಪೂರ್ಣಗೊಂಡಿದೆ. ಸ್ನಾತಕೋತ್ತರ ಪದವಿಯಲ್ಲಿ ಶೇ. 55ರಿಂದ 65ರಷ್ಟು ಪಠ್ಯಕ್ರಮ ಲಾಕ್‍ಡೌನ್‍ಗಿಂತ ಮುನ್ನ ಮುಗಿದಿತ್ತು. ಈಗ ಶೇ 85ರಿಂದ 90 ಪಠ್ಯಕ್ರಮ ಮುಗಿದಿದ್ದು, ಉಳಿದದ್ದನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಅದಾಗ್ಯೂ ತಾಂತ್ರಿಕ ಕಾರಣದಿಂದ ಪಾಠಕ್ಕೆ ಹಾಜರಾಗಲು ಸಾಧ್ಯವಾಗದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗದಂತೆ ಪುನರಾವರ್ತನೆ ಮಾಡಲಾಗುವುದು’ ಎಂದು ವಿವರಿಸಿದರು.

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಕುಲಸಚಿವ ಪ್ರೊ. ಬಸವರಾಜ ಬಣಕಾರ, ಪರೀಕ್ಷಾಂಗ ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ, ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್, ಡೀನ್‍ರಾದ ಪ್ರೊ. ವಿ. ಕುಮಾರ್, ಪ್ರೊ. ಕೆ.ಬಿ. ರಂಗಪ್ಪ, ಡಾ. ಕೆ.ವೆಂಕಟೇಶ್, ಸಿಂಡಿಕೇಟ್ ಸದಸ್ಯರಾದ ಡಾ. ಎಚ್.ಬಿ. ಗಣಪತಿ, ಡಾ. ಎಸ್. ಶ್ರೀಧರ, ವಿಜಯಲಕ್ಷ್ಮಿ ಹಿರೇಮಠ, ಡಾ. ಜಿ.ಪಿ. ರಾಮನಾಥ್, ಎಸ್. ಮಂಜಣ್ಣ, ಎಸ್.ಆರ್. ಕಲ್ಲೇಶಿ, ಜಿ.ಎಂ. ಪವನ್, ಎಂ. ಆಶಿಷ್‍ರೆಡ್ಡಿ, ಇನಾಯತ್‍ಉಲ್ಲಾ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ವಿಭಾಗಗಳ ಅಧ್ಯಕ್ಷರು, ಸಂಯೋಜನಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.