ADVERTISEMENT

‘ದಾವಣಗೆರೆ ವಿ.ವಿ: ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ’

ಕನ್ನಡ ಅಧ್ಯಯನ ವಿಭಾಗಕ್ಕೆ ಡಾ.ಎಂ. ಚಿದಾನಂದಮೂರ್ತಿ ಹೆಸರು ನಾಮಕರಣ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 6:03 IST
Last Updated 28 ನವೆಂಬರ್ 2020, 6:03 IST
ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಿಂದ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಆಚರಣೆ ನೆರವೇರಿಸಲಾಯಿತು.
ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಿಂದ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಆಚರಣೆ ನೆರವೇರಿಸಲಾಯಿತು.   

ದಾವಣಗೆರೆ: ‘ವಿಶ್ವವಿದ್ಯಾಲಯಗಳು ಜ್ಞಾನ ಸಂಪನ್ನ ಕೇಂದ್ರಗಳಾಗಿದ್ದು, ಇಲ್ಲಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ನಡೆದಾಡುವ ವಿಶ್ವಕೋಶಗಳಾಗಿದ್ದಾರೆ. ಮಧ್ಯಕರ್ನಾಟಕದಲ್ಲಿ ತಲೆಯೆತ್ತಿ ನಿಂತಿರುವ ದಾವಣಗೆರೆ ವಿಶ್ವವಿದ್ಯಾಲಯವು ಕಡಿಮೆ ಕಾಲಾವಧಿ
ಯಲ್ಲಿ ಹೆಚ್ಚಿನ ಸಾಧನೆ ಮಾಡಿ, ಹೊಸ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಮುಂಚೂಣಿಯಲ್ಲಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಎಂ.ಜಿ. ಈಶ್ವರಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಡೆದ 65ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಕನ್ನಡ ಅಧ್ಯಯನ ವಿಭಾಗಕ್ಕೆ ಡಾ.ಎಂ. ಚಿದಾನಂದಮೂರ್ತಿ ಅವರ ಹೆಸರಿಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಜೆ.ಎಂ ನಾಗಯ್ಯ ವಿಶೇಷ ಉಪನ್ಯಾಸ ನೀಡಿ, ‘ಡಾ.ಎಂ. ಚಿದಾನಂದಮೂರ್ತಿಯವರು ಅವರು ವಿಜ್ಞಾನದ ಮೂಲ ವಿದ್ಯಾರ್ಥಿಯಾಗಿದ್ದರೂ ತೀನಂಶ್ರೀ, ಕುವೆಂಪು, ಜಿ.ಎಸ್. ಶಿವರುದ್ರಪ್ಪ ಅವರಿಂದ ಪ್ರಭಾವಕ್ಕೆ ಒಳಗಾಗಿ ಕನ್ನಡ ಸಾಹಿತ್ಯದ ಕಡೆಗೆ ಒಲವು ತೋರಿದರು. ಇವರು ಕನ್ನಡ ನಾಡು, ನುಡಿಯ ಹೋರಾಟಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟರು. ‘ಮೂರ್ತಿ ಚಿಕ್ಕದಾದರೂ, ಕೀರ್ತಿದೊಡ್ಡದು’ ಎಂಬ ನಾಣ್ಣುಡಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ’ ಎಂದು
ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ‘ನಾವೆಲ್ಲರೂ ಕನ್ನಡ ನಾಡು ನುಡಿಗೆ ಸೇವೆಗೆ ಕಂಕಣಬದ್ಧರಾಗಬೇಕು. ಪ್ರಾಧ್ಯಾಪಕರಿಗೆ ಅಧ್ಯಯನ, ಅಧ್ಯಾಪನ, ಸಂಶೋಧನೆ ಮತ್ತು ಪ್ರಕಟಣೆಗಳು ಜೀವನದ ಧ್ಯೇಯವಾಗಬೇಕು’ ಎಂದು ಸಲಹೆ ನೀಡಿದರು.

2020ರ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದ ದಾವಣಗೆರೆ, ಚಿತ್ರದುರ್ಗ ವ್ಯಾಪ್ತಿಯ ಪ್ರೊ.ಎಂ.ಜಿ.ಈಶ್ವರಪ್ಪ, ತಿಪ್ಪೇಸ್ವಾಮಿ ಆರ್, ಎಚ್. ಷಡಕ್ಷರಪ್ಪ ಅವರನ್ನು ಸನ್ಮಾನಿಸಲಾಯಿತು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಸವರಾಜ ಬಣಕಾರ ಸ್ವಾಗತಿಸಿದರು. ಕನ್ನಡ ಅಧ್ಯಯನ ವಿಭಾಗದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರದುರ್ಗದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಚ್. ವಿಶ್ವನಾಥ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರೊ. ಗೋಪಾಲ ಎಂ. ಅಡಿವಿರಾವ್‍, ಡಾ. ಜೆ.ಕೆ.ರಾಜು, ಡಾ. ಗಾಯತ್ರಿ ದೇವರಾಜ್, ಡಾ. ವೆಂಕಟೇಶ, ಡಾ.ಎನ್.ಎಸ್‍. ಗುಂಡೂರ, ಡಾ. ಶಿವಕುಮಾರ ಕಣಸೋಗಿ, ಡಾ. ಜೋಗಿನಕಟ್ಟೆ ಮಂಜುನಾಥ, ಡಾ. ಜಯರಾಮಯ್ಯ, ಡಾ. ವಿಜಯಕುಮಾರ, ಇದ್ದರು. ಡಾ. ಭೀಮಾಶಂಕರ ಜೋಷಿ ನಿರೂಪಿಸಿದರು. ಡಾ. ಮಹಾಂತೇಶ ಪಾಟೀಲ ವಂದಿಸಿದರು. ಡಾ.ಬಸವರಾಜ ಬಿ. ಅತಿಥಿಗಳನ್ನು ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.