ADVERTISEMENT

ವಾರ್ಡ್‌ ಸಮಿತಿ ರಚಿಸಲು ನಿರ್ಧಾರ

ಪಾಲಿಕೆ: ಮುಂದುವರಿದ ಸಾಮಾನ್ಯಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 4:29 IST
Last Updated 8 ಏಪ್ರಿಲ್ 2021, 4:29 IST
ದಾವಣಗೆರೆಯ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಮೇಯರ್ ಎಸ್ ಟಿ ವಿರೇಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.
ದಾವಣಗೆರೆಯ ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಮೇಯರ್ ಎಸ್ ಟಿ ವಿರೇಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.   

ದಾವಣಗೆರೆ: ವಾರ್ಡ್‌ವಾರು ಸಮಿತಿಗಳನ್ನು ಸರ್ಕಾರ ಸೂಚಿಸಿದೆ. ಹಾಗಾಗಿ ಎಲ್ಲ ವಾರ್ಡ್‌ಗಳಲ್ಲಿ 10 ಮಂದಿ ಇರುವ ಸಮಿತಿ ರಚಿಸಲು ಬುಧವಾರ ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ನಡೆದ ಮುಂದುವರಿದ ಸಾಮಾನ್ಯಸಭೆಯಲ್ಲಿ ನಿರ್ಧರಿಸಲಾಯಿತು.

ಸ್ಥಳೀಯ ನಿವಾಸಿಗಳಾಗಿರುವ ಇಬ್ಬರು ಎಸ್‌ಸಿ, ಎಸ್‌ಟಿ, ಮೂವರು ಮಹಿಳೆಯರು, ಮೂವರು ಸಾಮಾನ್ಯ, ಸಂಘಸಂಸ್ಥೆಯವರು ಸೇರಿ 10 ಮಂದಿ ಇರಬೇಕು. ಅದಕ್ಕೊಂದು ಅರ್ಜಿ ನಮೂನೆ ಇದೆ. ಆಸಕ್ತರು ಅರ್ಜಿ ಸಲ್ಲಿಸುತ್ತಾರೆ. ಸಲ್ಲಿಸದೇ ಇದ್ದರೆ ಅರ್ಜಿ ಹಾಕಿಸುವ ಕೆಲಸವನ್ನು ಪಾಲಿಕೆ ಸದಸ್ಯರು ಮಾಡಬೇಕು ಎಂದು ಆಯುಕ್ತ ವಿಶ್ವನಾಥ ಮುದಜ್ಜಿ ಮನವಿ ಮಾಡಿಕೊಂಡರು.

ಹಿಂದಿನ ಸಭೆ ಫೆ.19ರಂದು ಆಗಿನ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದಿತ್ತು. ಅದರ ಮುಂದಿನ ಭಾಗ ಮತ್ತೊಬ್ಬರ ಅಧ್ಯಕ್ಷತೆಯಲ್ಲಿ ನಡೆಸಲು ಅವಕಾಶ ಇದೆಯೇ ಎಂದು ಕೆ. ಚಮನ್‌ಸಾಬ್‌ ಪ್ರಶ್ನಿಸಿದರು. ಪಾಲಿಕೆ ಕಾಯ್ದೆಯನ್ನು ಉಲ್ಲೇಖಿಸಿದ ಅಧಿಕಾರಿಗಳು ಅವಕಾಶ ಇದೆ ಎಂದು ಸ್ಪಷ್ಟನೆ ನೀಡಿದರು.

ADVERTISEMENT

ವಾಟರ್‌ಮನ್‌ಗಳಿಗೆ ಉದ್ಯೋಗ ಕೊಡಿ: 27 ಮಂದಿ ವಾಟರ್‌ಮನ್‌ಗಳು ಮೂರು ವರ್ಷ ಯಾವುದೇ ವೇತವವಿಲ್ಲದೇ ದುಡಿದಿದ್ದಾರೆ. ಅವರನ್ನು ಗುತ್ತಿಗೆ ಆಧಾರದಲ್ಲಿಯಾದರೂ ತೆಗೆದುಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಮನವಿ ಮಾಡಿದರು.

27ರಲ್ಲಿ 18 ಮಂದಿ ಮಾತ್ರ ಬರುತ್ತಿದ್ದರು. ಈಗ ಅದರಲ್ಲಿಯೂ ಕೆಲವು ಬರುತ್ತಿಲ್ಲ ಎಂದು ಆಯುಕ್ತರು ತಿಳಿಸಿದರು. ಮೂರು ವರ್ಷ ಕಾದು ಒಬ್ಬೊಬ್ಬರೇ ಬಿಡುತ್ತಿದ್ದಾರೆ. ಎಲ್ಲ 27 ಮಂದಿಯನ್ನು ಪಾರ್ಕ್‌ ನಿರ್ವಹಣೆ ಸಹಿತ ಯಾವುದಾದರೂ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ನಾಗರಾಜ್‌ ಆಗ್ರಹಿಸಿದರು. ಮುಂದೆ ಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಅವರಿಗೆ ಆದ್ಯತೆ ನೀಡಲು ಮೇಯರ್‌ ಎಸ್‌.ಟಿ. ವೀರೇಶ್‌ ಅಧಿಕಾರಿಗಳಿಗೆ ಸೂಚಿಸಿದರು.

ಹಮಾರ ಜವಾನ ಎಂದು ಪಾರ್ಕ್‌ಗಳಿರುವ ಪ್ರದೇಶಗಳಲ್ಲಿ ಮತ್ತೊಂದು ಪಾರ್ಕ್‌ ಮಾಡುವುದು ಅರ್ಥವಿಲ್ಲ ಎಂದು ನಾಗರಾಜ್‌ ಆಕ್ಷೇಪವೆತ್ತಿದರು. ಹಮಾರ ಜವಾನ ಪಾರ್ಕ್‌ನಲ್ಲಿ ಸೈನಿಕರ, ಯುದ್ಧ ಸಾಮಗ್ರಿಗಳ ಪ್ರತಿಮೆಗಳು ಇರುತ್ತವೆ ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ತಿಳಿಸಿದರು.

ಸೈನಿಕ ವೃತ್ತಕ್ಕೆ ಕರ್ನಲ್‌ ರವೀಂದ್ರನಾಥ್‌ ಅವರ ಹೆಸರು ಇಡಲು ನಿರ್ಧರಿಸಲಾಗಿತ್ತು. ಆದರೆ ಈಗ ಸೋಮನಾಥ ವೃತ್ತ ಎಂದು ಯಾವುದೋ ಹೆಸರು ಇಡಲು ತೀರ್ಮಾನಿಸಿರುವುದು ಸರಿಯಲ್ಲ ಎಂದು ನಾಗರಾಜ್‌ ತಿಳಿಸಿದಾಗ, ‘ನಾವು ಕೈಗೊಂಡ ತೀರ್ಮಾನವಲ್ಲ. 2011–12ರಲ್ಲಿಯೇ ಪಾಲಿಕೆಯಲ್ಲಿ ತೀರ್ಮಾನ ಕೈಗೊಂಡು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಸರ್ಕಾರಕ್ಕೆ ಕಳುಹಿಸಿ ಒಪ್ಪಿಗೆ ಪಡೆಯಲಾಗಿತ್ತು’ ಎಂದು ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್‌ ಮಾಹಿತಿ ನೀಡಿದರು.

ಕರ್ನಲ್‌ ರವೀಂದ್ರನಾಥ್‌ ಹೆಸರನ್ನೇ ಇಡಲು ಕ್ರಮ ಕೈಗೊಳ್ಳಿ ಎಂದು ನಾಗರಾಜ್‌, ಮಂಜುನಾಥ್‌ ಒತ್ತಾಯಿಸಿದಾಗ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ಭರವಸೆ ನೀಡಿದರು.

15ನೇ ಹಣಕಾಸು ಅನುದಾನದಲ್ಲಿ ಕೆಲಸಗಳನ್ನು ಇನ್ನೂ ತೆಗೆದುಕೊಂಡಿಲ್ಲ. ಕೇವಲ 70 ಕೆಲಸಗಳು ನಡೆಯುತ್ತಿವೆ. ಇನ್ನೂ 140ಕ್ಕೂ ಅಧಿಕ ಕೆಲಸಗಳು ನಡೆಯುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕರು ತಿಳಿಸಿದಾಗ, ವರ್ಕ್‌ ಆರ್ಡರ್‌ ನೀಡಲಾಗಿದೆ. ಬ್ಯಾಂಕ್‌ ಗ್ಯಾರಂಟಿ ನೀಡದವರಿಗೆ ಮಾತ್ರ ವರ್ಕ್‌ ಆರ್ಡರ್‌ ನೀಡಿಲ್ಲ ಎಂದು ಆಯುಕ್ತರು ಸ್ಪಷ್ಟನೆ ನೀಡಿದರು. ಬ್ಯಾಂಕ್‌ ಗ್ಯಾರಂಟಿ ನೀಡಿ ನಾಲ್ಕು ತಿಂಗಳು ಕಳೆದರೂ ನೀಡಿಲ್ಲ ಎಂದು ನಾಗರಾಜ್‌ ತಿಳಿಸಿದರು. ಈ ಬಗ್ಗೆ ಗಮನಹರಿಸಲಾಗುವುದು ಎಂದು ಎಸ್‌.ಟಿ. ವೀರೇಶ್‌ ತಿಳಿಸಿದರು.

ಡೋರ್‌ ನಂಬರ್‌ ನೀಡುವಾಗ ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಬ್ರೋಕರ್‌ಗಳನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಒಂದು ಖಾತೆ ಬದಲಾವಣೆಗೆ 45 ದಿನಗಳಿಂದ ಎರಡು ವರ್ಷಗಳ ವರೆಗೂ ಸಮಯ ತೆಗೆದುಕೊಂಡ ಉದಾಹರಣೆಗಳಿವೆ. ಆದರೆ ಬ್ರೋಕರ್‌ಗಳಿಗೆ 24 ಗಂಟೆಯಲ್ಲಿ ಮಾಡಿ ಕೊಡಲಾಗುತ್ತಿದೆ ಎಂದು ಕೆ. ಚಮನ್‌ಸಾಬ್‌ ದೂರಿದರು.

ಸಭೆಯಲ್ಲಿ ಶಾಸಕ ಎಸ್‌.ಎ. ರವೀಂದ್ರನಾಥ್‌, ಉಪಮೇಯರ್‌ ಶಿಲ್ಪಾ ಜಯಪ್ರಕಾಶ್‌, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ಬರ್ಮುಡ ಹಾಕಿಕೊಂಡು ಸಭೆಗೆ ಬಂದ ಸದಸ್ಯ

ಬುಧವಾರ ಪಾಲಿಕೆಯ ಸಭಾಂಗಣದಲ್ಲಿ ನಡೆದ ತುರ್ತು ಸಭೆ ಮತ್ತು ಸಾಮಾನ್ಯಸಭೆಗೆ ನಾಲ್ಕನೇ ವಾರ್ಡ್‌ನ ಸದಸ್ಯ ಅಹ್ಮದ್‌ ಕಬೀರ್‌ಖಾನ್‌ ಬರ್ಮುಡ ಚಡ್ಡಿಯಲ್ಲೇ ಹಾಜರಾಗಿ ಅಚ್ಚರಿ ಮೂಡಿಸಿದರು.

ಸಭ್ಯತೆಯಲ್ಲ: ಮೇಯರ್‌, ವಿರೋಧಪಕ್ಷದ ನಾಯಕ

‘ನಾನು ಸಭೆಯ ವಿಚಾರದ ಬಗ್ಗೆ ಮಗ್ನನಾಗಿದ್ದೆ. ಕಬೀರ್‌ಖಾನ್‌ ಬರ್ಮುಡದಲ್ಲಿ ಬಂದಿರುವುದನ್ನು ಗಮನಿಸಿಲ್ಲ. ಒಂದು ಸಭೆ ಅಂದರೆ ಘನತೆ, ಗಾಂಭೀರ್ಯದಿಂದ ಕೂಡಿರಬೇಕು. ಬರ್ಮುಡಾ ಚಡ್ಡಿ ಹಾಕಿಕೊಂಡು ಬರಬಾರದು. ಇದು ವಸ್ತ್ರ ಸಂಹಿತೆ, ಕಾನೂನು ಮುಂತಾದವುಗಳಿಗಿಂತಲೂ ಸಭ್ಯತೆಯ ಪ್ರಶ್ನೆ’ ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ಪ್ರತಿಕ್ರಿಯಿಸಿದ್ದಾರೆ.

‘ಕಬೀರ್‌ಖಾನ್‌ ಮನೆಯ ಪಕ್ಕದವರಿಗೆ ಅಪಘಾತವಾಗಿತ್ತು. ಆಸ್ಪತ್ರೆಗೆ ಹೋಗಿದ್ದರು. ಸಭೆಗೆ ಬರಲಾಗುವುದಿಲ್ಲ ಎಂದು ತಿಳಿಸಿದ್ದರು. ಐದು ನಿಮಿಷದಲ್ಲಿ ಫ್ರೆಷ್‌ಅಪ್‌ ಆಗಿ ಬಾರಪ್ಪ ಅಂದಿದ್ದೆ. ಹಾಗೆ ಅರ್ಜಂಟಲ್ಲಿ ಬಂದಿರಬೇಕು. ಬರ್ಮುಡಾದಲ್ಲೇ ಬಂದಿರುವುದನ್ನು ನಾನು ಗಮನಿಸಿಲ್ಲ. ಆದರೆ ಸಭೆಗೆ ಹಾಗೆ ಬರಬಾರದು’ ಎಂದು ವಿರೋಧ ಪಕ್ಷದ ನಾಯಕ ಎ. ನಾಗರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.