ADVERTISEMENT

ದಾವಣಗೆರೆ | ದೆಹಲಿ ಪಯಣ: ವಿಶೇಷ ನಿಗಾದಲ್ಲಿ 25 ಮಂದಿ

ಸೂಪರ್‌ವೈಸ್‌ಡ್‌ ಕ್ವಾರಂಟೈನ್‌ ಸೆಂಟರ್‌ನಲ್ಲಿ ನಿಗಾ * ಸೋಂಕಿನ ಲಕ್ಷಣಗಳು ಪತ್ತೆಯಾಗಿಲ್ಲ: ಡಿ.ಸಿ.

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 10:29 IST
Last Updated 3 ಏಪ್ರಿಲ್ 2020, 10:29 IST
ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ರಚಿಸಲಾಗಿರುವ ಪರದೆ ಕಟ್ಟಿದ ಫ್ಲೂ ಕಾರ್ನರ್‌ ಮುಂದೆ ಪರಿಕ್ಷೇಗಾಗಿ ನಿಂತಿರುವುದು (ಎಡಚಿತ್ರ). ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಮತ್ತು ಶುಚಿತ್ವ ಕಾಪಾಡಲು ದಾವಣಗೆರೆಯ ಸರ್ಕಾರಿ ನೌಕರರ ಭವನದ ಮುಂಭಾಗದಲ್ಲಿ ಪಾಲಿಕೆ ಸಿಬ್ಬಂದಿಯೊಂದಿಗೆ ತಹಶೀಲ್ದಾರ್ ಸಂತೋಷಕುಮಾರ್ ಅವರು ರಾಸಾಯನಿಕ ಸಿಂಪಡಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ರಚಿಸಲಾಗಿರುವ ಪರದೆ ಕಟ್ಟಿದ ಫ್ಲೂ ಕಾರ್ನರ್‌ ಮುಂದೆ ಪರಿಕ್ಷೇಗಾಗಿ ನಿಂತಿರುವುದು (ಎಡಚಿತ್ರ). ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಮತ್ತು ಶುಚಿತ್ವ ಕಾಪಾಡಲು ದಾವಣಗೆರೆಯ ಸರ್ಕಾರಿ ನೌಕರರ ಭವನದ ಮುಂಭಾಗದಲ್ಲಿ ಪಾಲಿಕೆ ಸಿಬ್ಬಂದಿಯೊಂದಿಗೆ ತಹಶೀಲ್ದಾರ್ ಸಂತೋಷಕುಮಾರ್ ಅವರು ರಾಸಾಯನಿಕ ಸಿಂಪಡಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ದೆಹಲಿಗೆ ಫೆಬ್ರುವರಿಯಲ್ಲಿ ಹೋಗಿ ಬಂದಿದ್ದ ಚನ್ನಗಿರಿಯ 11 ಮಂದಿ ಒಳಗೊಂಡಂತೆ 25 ಮಂದಿಯನ್ನು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗಾಗಿ ದಾಖಲಿಸಲಾಗಿದೆ.

ಚನ್ನಗಿರಿ ನಗರದ 8 ಮಂದಿ, ಹೊನ್ನಬಾಗಿ ಗ್ರಾಮ, ಅಗರಬನ್ನಿಹಟ್ಟಿ ಗ್ರಾಮ ಹಾಗೂ ಕೆರೆಬಿಳಚಿ ಗ್ರಾಮದ ತಲಾ ಒಬ್ಬರು ದೆಹಲಿಗೆ ಹೋಗಿ ಫೆಬ್ರುವರಿ 28ರಂದು ವಾಪಸ್ಸಾಗಿದ್ದರು. ದೆಹಲಿಗೆ ಕಳೆದ ಎರಡು ತಿಂಗಳುಗಳಲ್ಲಿ ಯಾರೆಲ್ಲ ಬಂದು ಹೋಗಿದ್ದಾರೋ ಅವರ ಮೊಬೈಲ್‌ ಸಂಖ್ಯೆ, ವಿಳಾಸವನ್ನು ಆಯಾ ಜಿಲ್ಲೆಗಳ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಗೆ ಕಳುಹಿಸಿಕೊಡಲಾಗುತ್ತದೆ. ಅದರಂತೆ ಈ 11 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಇದಲ್ಲದೇ ಐ.ಜಿ. ಕಚೇರಿ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ನೀಡಿದ ಪಟ್ಟಿಯಂತೆ 14 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಎಲ್ಲ 25 ಮಂದಿ ವಿವಿಧ ಕಾರಣಗಳಿಗೆ ದೆಹಲಿಗೆ ಹೋಗಿ ಬಂದವರು. ಆದರೆ ತಬ್ಲಿಗಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ರಾಘವನ್‌ ಮಾಹಿತಿ ನೀಡಿದ್ದಾರೆ.

ಎಲ್ಲರನ್ನು ಸೂಪರ್‌ವೈಸ್‌ಡ್‌ ಕ್ವಾರಂಟೈನ್‌ ಸೆಂಟರ್‌ನಲ್ಲಿ ನಿಗಾ ಇಡಲಾಗಿದೆ. ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ವೈದ್ಯರು, ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಎರಡು ಮಾದರಿ ಪ್ರಯೋಗಾಲಯಕ್ಕೆ: ನೋವೆಲ್‌ ಕೊರೊನಾ ವೈರಸ್‌ ಸೋಂಕಿಗೆ ಸಂಬಂಧಿಸಿದಂತೆ ಹೊಸ ಪೊಸಿಟಿವ್‌ ಪ್ರಕರಣಗಳು ದಾಖಲಾಗಿಲ್ಲ. ಗುರುವಾರ ಇಬ್ಬರ ಮಾದರಿಗಳನ್ನು ಪ್ರಯೋಗಾಲಯಕ್ಕೆ
ಕಳುಹಿಸಲಾಗಿದೆ.

ವಿದೇಶಗಳಿಗೆ ಹೋಗಿ ಬಂದು ಅವಲೋಕನದಲ್ಲಿದ್ದವರಲ್ಲಿ 28 ದಿನಗಳ ಅವಲೋಕನದ ಅವಧಿಯನ್ನು ಗುರುವಾರ ಮತ್ತೆ 18ಜನ ಪೂರೈಸಿದ್ದಾರೆ. ಹಾಗಾಗಿ ಅವಧಿ ಪೂರೈಸಿದವರ ಸಂಖ್ಯೆ 47ಕ್ಕೆ ಏರಿದೆ. ಒಟ್ಟು 262 ಮಂದಿ 14 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 348 ಮಂದಿ ವಿದೇಶಕ್ಕೆ ಹೋಗಿ ಬಂದವರು ಇದ್ದರು. ಗುರುವಾರ ಮತ್ತೆ 25 ಮಂದಿ ಸೇರ್ಪಡೆಗೊಂಡಿದ್ದಾರೆ. 65 ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ. 29 ಜನರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. 24 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಫೆಬ್ರುವರಿಯಲ್ಲಿ ದೆಹಲಿಗೆ ಹೋಗಿ ಬಂದ 11 ಮಂದಿಯನ್ನು ಸೂಪರ್‌ವೈಸ್‌ಡ್‌ ಕ್ವಾರಂಟೈನ್‌ ಸೆಂಟರ್‌ನಲ್ಲಿ ನಿಗಾ ಇಡಲಾಗಿದೆ.

ಜಿಲ್ಲೆಯಲ್ಲಿ ಈವರೆಗೆ ಮೂರು ಮಂದಿಯಲ್ಲಿ ಮಾತ್ರ ಈ ವರೆಗೆ ಸೋಂಕು ಪತ್ತೆಯಾಗಿದೆ. ಉಳಿದಂತೆ ಪರೀಕ್ಷೆಗೆ ಕಳುಹಿಸಲಾದ 45 ಮಾದರಿಗಳು ನೆಗೆಟಿವ್‌ ಆಗಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ತಿಳಿಸಿದ್ದಾರೆ.

ಅಂಧರ ಶಿಕ್ಷಣ ಸಮಿತಿಯಿಂದ ಅಕ್ಕಿ ದಾನ: ದಾವಣಗೆರೆಯ ಪಂಡಿತಾರಾಧ್ಯ ಪಂಚಾಕ್ಷರ ಗವಾಯಿ ಅಂಧರ ಶಿಕ್ಷಣ ಸಮಿತಿಯಿಂದ ನಿರಾಶ್ರಿತರಿಗೆ ನೀಡಲು 25 ಕೆ.ಜಿಗಳ 10 ಚೀಲ ಅಕ್ಕಿಯನ್ನು ತಹಶೀಲ್ದಾರ್‌ ಸಂತೋಷಕುಮಾರ್ ಮೂಲಕ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.