ಪ್ರತಿಭಟನೆ(ಪ್ರಾತಿನಿಧಿಕ ಚಿತ್ರ)
ಹರಿಹರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಬೆಂಗಳೂರು ಚಲೋ, ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುಮ್ಮನೂರ್ ಬಸವರಾಜ್ ತಿಳಿಸಿದರು.
‘ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದು ಸೇರಿದಂತೆ 11 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 22ರಂದು ಬೆಳಿಗ್ಗೆ 11 ಕ್ಕೆ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘2 ವರ್ಷಗಳಿಂದ ಮಳೆಯಾಗದ ಕಾರಣ ರೈತರು ಸಂಪೂರ್ಣ ಕಂಗಾಲಾಗಿದ್ದು, ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಕ್ರಮ ಕೈ ಬಿಟ್ಟು ಮೊದಲಿನಂತೆ ಉಚಿತ ವಿದ್ಯುತ್ ನೀಡಬೇಕು. ಆಲಮಟ್ಟಿ ಜಲಾಶಯ ಅಭಿವೃದ್ಧಿ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.
‘ಹರಿಹರ ತಾಲ್ಲೂಕಿನ ಭೈರನಪಾದ ಏತ ನೀರಾವರಿ ಯೋಜನೆ ಆರಂಭಿಸಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ತಾಲ್ಲೂಕಿನಲ್ಲಿ ನಿಯಮ 50 ಮತ್ತು 57ರಡಿಯಲ್ಲಿ ಅರ್ಜಿ ಹಾಕಿ ಹಲವಾರು ವರ್ಷಗಳಿಂದ ಕಾಯುತ್ತಿರುವ ರೈತರಿಗೆ ಸಭೆ ನಡೆಸಿ ತೀರ್ಮಾನಿಸಿ ಹಕ್ಕುಪತ್ರ ವಿತರಿಸಬೇಕು. ಅರಣ್ಯ ಹಕ್ಕು ಸಮಿತಿ ಜಾರಿಗೆ ತರವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ’ ಎಂದರು.
ದಾವಣಗೆರೆ ಜಿಲ್ಲೆಯಿಂದ ಸುಮಾರು 400 ಜನರು ಭಾಗವಹಿಸುವ ನಿರೀಕ್ಷೆ ಇದೆ. ತಾಲ್ಲೂಕಿನ ಎಲ್ಲ ರೈತರು ಭಾಗವಹಿಸಬೇಕು ಎಂದು ಕೋರಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸುನಿಲ್, ಪದಾಧಿಕಾರಿಗಳಾದ ಭಗತ್ ಸಿಂಗ್, ಹನುಮಂತಪ್ಪ, ಮಲ್ಲಿಕಾರ್ಜುನ್, ಸಿ.ಹನುಮಂತಪ್ಪ, ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.