ADVERTISEMENT

ಸೂಳೆಕೆರೆಯನ್ನು ನೀರಾವರಿ ನಿಗಮದ ವ್ಯಾಪ್ತಿಗೆ ಸೇರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 3:17 IST
Last Updated 4 ಮಾರ್ಚ್ 2026, 3:17 IST
ತ್ಯಾವಣಿಗೆ ಸಮೀಪದ ಕಾರಿಗನೂರು ಗ್ರಾಮದಲ್ಲಿ ತೇಜಸ್ವಿ ಪಟೇಲ್ ರೈತ ಮುಖಂಡರೊಂದಿಗೆ ಸಭೆ ನಡೆಸಿದರು
ತ್ಯಾವಣಿಗೆ ಸಮೀಪದ ಕಾರಿಗನೂರು ಗ್ರಾಮದಲ್ಲಿ ತೇಜಸ್ವಿ ಪಟೇಲ್ ರೈತ ಮುಖಂಡರೊಂದಿಗೆ ಸಭೆ ನಡೆಸಿದರು   

ತ್ಯಾವಣಿಗೆ: ಸೂಳೆಕೆರೆಯನ್ನು ಕರ್ನಾಟಕದ ನೀರಾವರಿ ನಿಗಮದ ವ್ಯಾಪ್ತಿಗೆ ಸೇರಿಸುವುದು ಅನಿವಾರ್ಯವಾಗಿದೆ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು.

ತ್ಯಾವಣಿಗೆ ಸಮೀಪದ ಕಾರಿಗನೂರು ಗ್ರಾಮದ ಉಡುಸ್ಲಾಂಬಿಕಾ ದೇವಿ ದೇವಸ್ಥಾನದ ಆವರಣದಲ್ಲಿ ರೈತ ಮುಖಂಡರ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘2008ರಲ್ಲಿ ಭದ್ರಾ ನಾಲೆ ಆಧುನೀಕರಣಗೊಂಡಾಗ ಸೂಳೆಕೆರೆ ಬಿಟ್ಟು ಭದ್ರಾ ಯೋಜನೆಯನ್ನು ನೀರಾವರಿ ನಿಗಮದ ವ್ಯಾಪ್ತಿಗೆ ಸೇರಿಸಿದಾಗಿನಿಂದಲೂ ಸೂಳೆಕೆರೆಗೆ ನಿಗದಿತ ಅನುದಾನ ಬರುತ್ತಿಲ್ಲ. ಪ್ರತಿ ಹಂಗಾಮಿನಲ್ಲೂ ಕಾಲುವೆಗಳ ಹೂಳು ತೆಗೆಸುವುದು ಕಷ್ಟಸಾಧ್ಯವಾಗಿದೆ. ಸೂಳೆಕೆರೆ ನೀರನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ. ಆದರೆ, ಜವಾಬ್ದಾರಿ ತೆಗೆದುಕೊಳ್ಳಲು ಯಾವ ಇಲಾಖೆಯೂ ಸಿದ್ಧವಿಲ್ಲ’ ಎಂದು ಆರೋಪಿಸಿದರು.

ADVERTISEMENT

‘1950ಕ್ಕೂ ಮುನ್ನ ಸೂಳೆಕೆರೆ ಅಂಗಳವನ್ನು ಅಮೃತ್ ಮಹಲ್ ಕಾವಲ್ ಎಂದು ನಿಗದಿ ಪಡಿಸಿರುವುದು ದಾಖಲೆಗಳಿಂದ ಇತ್ತೀಚಿಗಷ್ಟೇ ತಿಳಿದುಬಂದಿದ್ದು, ಸೂಳೆಕೆರೆ ಸೇರಿ ಶಿವಕೊಳೆನೂರು, ರುದ್ರಾಪುರ ಗ್ರಾಮದ ಕೆಲ ಜಮೀನುಗಳ ಪಹಣಿಯಲ್ಲಿ ಅಮೃತ್ ಮಹಲ್ ಕಾವಲ್ ನಮೂದಿಸಲಾಗಿದೆ. ಇದನ್ನು ಬದಲಾವಣೆ ಮಾಡಿ ಸೂಳೆಕೆರೆಯನ್ನು ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಗೆ ಸೇರಿಸಲು ಎಲ್ಲ ಗ್ರಾಮಗಳ ರೈತ ಮುಖಂಡರ ಜೊತೆ ಸಭೆ ನಡೆಸಿ ಹೋರಾಟ ಮಾಡುವುದು ಅನಿರ್ವಾಯವಾಗಿದೆ ಎಂದರು.

ರೈತರಾದ ಅರೇಹಳ್ಳಿ ಶಿವಕುಮಾರ್, ಕತ್ತಲಗೆರೆ ಗಜೇಂದ್ರ, ಮಂಜಪ್ಪ, ದೇವೇಂದ್ರಪ್ಪ, ಪಂಚಯ್ಯ, ಹನುಮಂತಪ್ಪ, ಅಖಾಡದರ ಲಕ್ಷ್ಮಣ್, ಮಂಜುನಾಥ್, ಮಹಾರುದ್ರಯ್ಯ, ಜಿ.ಸಿ. ಮಂಜುನಾಥ್, ಅಶ್ರಫ್, ಮುರುಗೇಶ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.