ಸಾಸ್ವೆಹಳ್ಳಿ: ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ಉಕ್ತಿಯನ್ನು ಬಹುತೇಕ ಶಾಲೆಗಳಲ್ಲಿ ಬರೆಯಿಸಿರುವುದನ್ನು ಕಾಣುತ್ತೇವೆ. ಆದರೆ, ಸಮೀಪದ ಬೀರಗೊಂಡನಹಳ್ಳಿ ಗ್ರಾಮದ ಶಾಲಾ ಆವರಣದಲ್ಲಿ ಮೂಗು ಹಿಡಿದು ಒಳಗೆ ಬಾ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂರೂವರೆ ಎಕರೆ ಮೈದಾನವನ್ನು ಹೊಂದಿದ್ದು, ಸ್ಥಳೀಯರು ತಿಪ್ಪೆಗೆ, ಕಣಕ್ಕೆ ಮೀಸಲು ಮಾಡಿಕೊಂಡಿದ್ದಾರೆ. ಗ್ರಾಮದ ಕೆಲ ಪ್ರಭಾವಿಗಳು ಶಾಲಾ ಜಾಗವನ್ನು ಒತ್ತುವರಿ ಮಾಡಿ ಅಡಿಕೆ ಒಣಗಿಸಲು ಶೆಡ್ ನಿರ್ಮಾಣ ಮಾಡಿದ್ದಾರೆ. ಅಡಿಕೆ ಸಿಪ್ಪೆ, ಮನೆಕಟ್ಟಲು ಮಣ್ಣು, ಜಲ್ಲಿ ಕಲ್ಲಿನ ರಾಶಿ ಹಾಕಲಾಗಿದೆ. ಇದರಿಂದ ನಿತ್ಯವೂ ವಿದ್ಯಾರ್ಥಿಗಳ ಆಟ– ಪಾಠಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಶಾಲಾ ಆವರಣ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಹಲವು ಸಲ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಶಾಲೆಯ ತಗತಿಗಳು ನಡೆಯುವ ದಿನಗಳಲ್ಲಿ ಆವರಣ ಸ್ವಚ್ಛಗೊಳಿಸಲು ನಿತ್ಯವೂ ಸಹಕರಿಸುತ್ತೇವೆ. ಸದ್ಯ ಶಾಲೆಗೆ ರಜೆ ಇದ್ದು, ಮತ್ತೆ ಆರಂಭ ಆಗುವುದರೊಳಗೆ ಶಾಲಾ ಮೈದಾನವನ್ನು ಸ್ವಚ್ಛಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಮನವಿ ಮಾಡುತ್ತಾರೆ ಗ್ರಾಮದ ರೈತ ಮುಖಂಡ ಬಿ.ವೈ. ಪರಮೇಶ್ವರಪ್ಪ.
ಶಾಲೆಯ ಮೈದಾನದಲ್ಲಿ ಅಡಿಕೆ ಸಿಪ್ಪೆ, ಮಣ್ಣು, ಕಲ್ಲಿನ ರಾಶಿ ಹಾಕಿರುವುದರಿಂದ ಹಾವುಗಳು ಸೇರಿಕೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಇದೇ ಮೈದಾನದಲ್ಲಿ ಆಟವಾಡುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಲ್ಲದೇ ಓದಿನ ಕಡೆ ಗಮನ ಕೊಡಲು ಕಷ್ಟವಾಗುತ್ತದೆ. ಆದಕಾರಣ ರಜಾ ಅವಧಿಯಲ್ಲಿಯೇ ಮೈದಾನವನ್ನು ಸ್ವಚ್ಛಗೊಳಿಸಬೇಕು ಎಂದು ಟಿ.ಬಿ.ಗಣೇಶ್ ಮತ್ತು ಬಿ.ವೈ. ಚಂದ್ರಶೇಖರಪ್ಪ ಒತ್ತಾಯಿಸಿದರು.
ಉಪ ಲೋಕಾಯುಕ್ತ, ನ್ಯಾಯಮೂರ್ತಿ ಪಿ.ವೀರಪ್ಪ ಅವರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಅವರಿಗೂ ಈ ಕುರಿತು ದೂರು ನೀಡಲಾಗುವುದುಎಂದು ಎಚ್ಚರಿಸಿದರು.
‘ಎಂಟಕ್ಕೂ ಹೆಚ್ಚು ಜನ ಶಾಲೆಯ ಆವರಣದಲ್ಲಿ ತಿಪ್ಪೆ ಹಾಕಿದ್ದಾರೆ. ಈ ಶಾಲೆಯ ಇ–ಸ್ವತ್ತು ಇಲ್ಲದ ಕಾರಣ ನಾವು ಬಿಗಿ ಮಾಡಲು ಆಗುತ್ತಿಲ್ಲ. ಶಾಲೆಯ ಜಾಗವನ್ನು ಅಳತೆ ಮಾಡಿ ಹದ್‌ಬಸ್ತ್ ಮಾಡುವಂತೆ ತಹಶೀಲ್ದಾರ್‌ಗೆ ಅರ್ಜಿ ನೀಡಿದ್ದೇವೆ’ ಎಂದು ಮುಖ್ಯಶಿಕ್ಷಕ ನಾರಾಯಣಪ್ಪ ಜಿ.ಎಸ್. ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.