ADVERTISEMENT

ಪ್ರಜಾಪ್ರತಿನಿಧಿಗಳಿಗೂ ಬೇಕು ಸಂಗೀತ ತರಬೇತಿ

ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 1:57 IST
Last Updated 7 ಫೆಬ್ರುವರಿ 2021, 1:57 IST
ದಾವಣಗೆರೆಯ ಮಾಗನೂರು ಬಸಪ್ಪ ಸಭಾಂಗಣದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತು, ವೀರೇಶ್ವರ ಪುಣ್ಯಾಶ್ರಮದ ಜಿಲ್ಲಾ ಘಟಕದ ಉದ್ಘಾಟನೆಯನ್ನು ಡಾ.ಸರ್ವಮಂಗಳ ಶಂಕರ್ ನೆರವೇರಿಸಿದರು. ಸಾಣೇಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗದ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಇದ್ದರು. 
ದಾವಣಗೆರೆಯ ಮಾಗನೂರು ಬಸಪ್ಪ ಸಭಾಂಗಣದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತು, ವೀರೇಶ್ವರ ಪುಣ್ಯಾಶ್ರಮದ ಜಿಲ್ಲಾ ಘಟಕದ ಉದ್ಘಾಟನೆಯನ್ನು ಡಾ.ಸರ್ವಮಂಗಳ ಶಂಕರ್ ನೆರವೇರಿಸಿದರು. ಸಾಣೇಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗದ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಇದ್ದರು.    

ದಾವಣಗೆರೆ: ಪ್ರಜಾಪ್ರತಿನಿಧಿಗಳು ಸಮಾಜಮುಖಿ ಕೆಲಸ ಮಾಡಬೇಕಾದರೆ ಗ್ರಾಮ ಪಂಚಾಯಿತಿ ಸದಸ್ಯರಿಂದ ಸಂಸದರವರೆಗೂ ಕಲೆ, ಸಾಹಿತ್ಯ ಹಾಗೂ ಸಂಗೀತದ ತರಬೇತಿ ನೀಡುವ ಅಗತ್ಯವಿದೆ ಎಂದು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ಮಾಗನೂರು ಬಸಪ್ಪ ಸಭಾಂಗಣದಲ್ಲಿ ಶನಿವಾರ ಗದಗದ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತು, ವೀರೇಶ್ವರ ಪುಣ್ಯಾಶ್ರಮದ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಂಗೀತಕ್ಕೆ ವ್ಯಕ್ತಿಯ ಮನೋವಿಕಾಸ ಮಾಡುವ ಶಕ್ತಿ ಇದ್ದು, ಪ್ರಜಾಪ್ರತಿನಿಧಿಗಳಲ್ಲಿ ಅವಗುಣಗಳು ಕಡಿಮೆಯಾಗಿ ಸದ್ಗುಣಗಳು ಹೆಚ್ಚಿ ಅವರು ಸಮಾಜಮುಖಿ ಕೆಲಸ ಮಾಡಲು ಸಾಧ್ಯ.ರಕ್ತದ ಕಲೆಗಳನ್ನು ಅಳಿಸಿ ಹಾಕಿ, ಶಾಂತಿಯ ಸಂದೇಶ ಸಾರಲು‌ ಸಂಗೀತ, ಸಾಹಿತ್ಯ ಹಾಗೂ ಕಲೆಗಳು ನೆರವಾಗುತ್ತವೆ. ಯಾರಿಗೆ ಇವುಗಳ ಒಲವು ಇರುವುದಿಲ್ಲವೋ ಅವರು ಪಶುಗಳಿಗೆ ಸಮಾನ’ ಎಂದು ಹೇಳಿದರು.

ADVERTISEMENT

‘ಸಂಗೀತಗಾರರು ಈಗ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಾರೆ. ಆದರೆ, ಅವರೆಲ್ಲರೂ ಅರಮನೆ ಸಂಗೀತಗಾರರಷ್ಟೇ. ನಮಗೆ ಬೇಕಿರುವುದು ಬಯಲು ಸಂಗೀತಗಾರರೆ ಹೊರತು ಆಸ್ಥಾನ ಸಂಗೀತಗಾರರಲ್ಲ. ಸಂಗೀತ ಯಾವುದೇ ಒಬ್ಬ ವ್ಯಕ್ತಿಗೆ ಮೀಸಲು ಅಲ್ಲ. ಅದು ಸಾಧನೆ ಮಾಡಿದವರ ಕೈವಶವಾಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳಿಗೆ ಸಂಗೀತ ಸಂಸ್ಕಾರ ನೀಡಿ’ ಎಂದು ಸಲಹೆ ನೀಡಿದರು.

‘ತಮ್ಮ ಮಕ್ಕಳು ರ‍್ಯಾಂಕ್‌ ಬರಬೇಕೆಂಬ ಉದ್ದೇಶದಿಂದ ಪೋಷಕರು ನೃತ್ಯ, ಕಲೆ, ಸಾಹಿತ್ಯ, ಸಂಗೀತದಿಂದ ಅವರನ್ನು ದೂರವಿಟ್ಟು, ಕೇವಲ ಮನೆಪಾಠಕ್ಕೆ ಮೀಸಲಾಗಿಡುತ್ತಿದ್ದಾರೆ. ಅದರ ಮಧ್ಯೆ ಅಂತರ್ಬೋಧ ಆಗಬೇಕೆಂಬುದನ್ನು ಮರೆಯುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವುದರ ಜೊತೆಗೆ ಪೋಷಕರುಸಂಸ್ಕಾರವಂತರಾಗಬೇಕು’ ಎಂದು ಕಿವಿಮಾತು ಹೇಳಿದರು.

‘ರಂಗಭೂಮಿ ಮತ್ತು ಸಂಗೀತಕ್ಕೂ ವಿಶೇಷ ಸಂಪರ್ಕವಿದೆ. ನಾಟಕದಲ್ಲಿ ನೃತ್ಯ, ಸಂಗೀತ, ಕಲೆ ಇವೆಲ್ಲವೂ ಸಮ್ಮಿಳಿತಗೊಂಡಿರುತ್ತದೆ. ಬದುಕಲ್ಲಿ ಎಲ್ಲರೂ ನಟರೇ. ಆದರೆ, ಆ ನಟನೆಯಲ್ಲಿ ಮೋಸ, ವಂಚನೆ, ದ್ರೋಹ, ಸುಳ್ಳು ಇವು ಇರಬಾರದು. ಮನೋಲ್ಲಾಸ ನೀಡುವ ಬದುಕಿನ ಸಹಜ ನಟನೆ ಆಗಬೇಕು’ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಸರ್ವಮಂಗಳ ಶಂಕರ್, ‘ಸಂಗೀತ ವಿಶಿಷ್ಟ ಕಲೆ. 64 ಕಲೆಗಳಲ್ಲಿ ಇದು ಮೇರು ಶಿಖರದಂತೆ ಇದೆ.ಸಂಗೀತದ ನಾದ ಎಲ್ಲರನ್ನೂ ರಂಜಿಸುತ್ತದೆ. ಶಿಶುಗಳನ್ನು ಮುಗ್ದರನ್ನಾಗಿಸುವ, ಪಶುಗಳನ್ನು ಸೆಳೆಯುವ, ವಿಷವನ್ನು ಮಣಿಸುವ ಶಕ್ತಿ ಸಂಗೀತಕ್ಕಿದೆ’ ಎಂದು ಹೇಳಿದರು.

ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಶಶಿಕಲಾ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ತಿನ ಅಧ್ಯಕ್ಷೆ ಪಂಕಜಾಕ್ಷಿ ಎಂ.ಬಕ್ಕೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಶಿಕ್ಷಕ ಶಿವಬಸವ ಸ್ವಾಮಿ ಚರಂತಿಮಠ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ, ಚನ್ನವೀರಶಾಸ್ತ್ರೀ ಹಿರೇಮಠ, ಎ.ಎಚ್. ಶಿವಮೂರ್ತಿ, ಎಂ.ಬಿ. ನಾಗರಾಜ ಕಾಕನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.