
ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ದೇಸಿಕಲರವವನ್ನು ಭತ್ತದ ತೆನೆಯಿಂದ ಕಾಳು ಬೇರ್ಪಡಿಸಿ ಉದ್ಘಾಟಿಸಲಾಯಿತು
–ಪ್ರಜಾವಾಣಿ ಚಿತ್ರ
ದಾವಣಗೆರೆ: ಮನೆಯ ಅಗತ್ಯಕ್ಕೆ ಮಹಿಳೆಯೊಬ್ಬರು ಬಾವಿಯಿಂದ ನೀರು ಸೇದುತ್ತಿದ್ದರು. ಯುವತಿಯರು ಜೋಕಾಲಿಯನ್ನೇ ದಿಟ್ಟಿಸುತ್ತಿದ್ದರು. ಬುಗುರು, ಲಗೋರಿ, ಹುಲಿಮನೆ ಆಟಕ್ಕೂ ಮೈದಾನ ಸಜ್ಜಾಗಿತ್ತು. ಗುಡಿಸಲು, ದನದ ಕೊಟ್ಟಿಗೆಯ ಸಮೀಪದಲ್ಲೇ ಬೀಸುವ ಕಲ್ಲು, ಆಗಷ್ಟೇ ಹೆಣೆದ ಬುಟ್ಟಿ ರೈತರನ್ನು ಕಾಯುತ್ತಿತ್ತು.
ಇದು ಯಾವುದೋ ಹಳ್ಳಿಯ ವಾತಾವರಣವಲ್ಲ. ನಗರದ ಎ.ವಿ. ಕಮಲಮ್ಮ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೃಷ್ಟಿಯಾಗಿದ್ದ ಗ್ರಾಮೀಣ ಪರಿಸರ. ಪಾರಂಪರಿಕ, ಸಾಂಸ್ಕೃತಿಕ ದಿನಾಚರಣೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ದೇಸಿಕಲರವ’ ಕೃಷಿ ಬದುಕು ಪ್ರತಿಬಿಂಬಿಸಿತು.
ಭತ್ತದ ತೆನೆಯಿಂದ ಕಾಳು ಬೇರ್ಪಡಿಸಿ ರಾಶಿ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಆಕರ್ಷಕವಾಗಿತ್ತು. ವಿದ್ಯಾರ್ಥಿನಿಯರು ಸಾಂಸ್ಕೃತಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಲಂಗಾ–ದಾವಣಿ, ಸೀರೆ, ಉತ್ತರ ಕರ್ನಾಟಕದ ವೇಷಭೂಷಣ ಗಮನ ಸೆಳೆಯುತ್ತಿದ್ದವು. ಲಂಬಾಣಿ, ಮರಾಠ ಹಾಗೂ ಕೊಡವ ಉಡುಗೆಯಲ್ಲಿದ್ದ ವಿದ್ಯಾರ್ಥಿನಿಯರು ಮಿಂಚಿದರು.
‘ಹಲವು ಧರ್ಮ, ಸಂಸ್ಕೃತಿ, ವೇಷಭೂಷಣ ಹೊಂದಿದ ದೇಶ ಭಾರತ. ಇದರ ಪ್ರತಿರೂಪವನ್ನು ಕಾಲೇಜು ವಿದ್ಯಾರ್ಥಿನಿಯರಲ್ಲಿ ಕಾಣುತ್ತಿದ್ದೇವೆ. ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಸಮೂಹಕ್ಕೆ ಹೆಚ್ಚು ಜವಾಬ್ದಾರಿಗಳಿವೆ’ ಎಂದು ಎವಿಕೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕಮಲ ಸೊಪ್ಪಿನ್ ಅಭಿಪ್ರಾಯಪಟ್ಟರು.
‘ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿ ಕೂಡ ರೂಪಾಂತರಗೊಳ್ಳುತ್ತಿದೆ. ವಿವಿಧತೆಯಲ್ಲಿ ಏಕತೆ ಹೊಂದಿದ ನೆಲದ ಪರಂಪರೆಯನ್ನು ಉಳಿಸಬೇಕಿದೆ. ಮೂಲಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಪ್ರಯತ್ನಗಳು ಫಲನೀಡುತ್ತವೆ’ ಎಂದು ಹೇಳಿದರು.
‘ಆಧುನಿಕ ಜಗತ್ತಿಗೆ ತೆರೆದುಕೊಂಡಿದ್ದರೂ ಸಂಸ್ಕೃತಿಯನ್ನು ಉಳಿಸುವ ಗುರುತರ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ. ಮೂಲ ಸಂಸ್ಕೃತಿಯನ್ನು ಯಾರೊಬ್ಬರೂ ಮರೆಯಬಾರದು. ಸಂಸ್ಕೃತಿ ಮರೆತರೆ ಒಂದು ಜನಾಂಗವೇ ಸರ್ವನಾಶವಾಗುವ ಅಪಾಯವಿದೆ’ ಎಂದು ಡಿಆರ್‌ಎಂ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಪ್ರೊ.ಎಂ.ಪಿ. ರೂಪಶ್ರೀ ಕಳವಳ ವ್ಯಕ್ತಪಡಿಸಿದರು.
ಎವಿಕೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರವಿ ಬಣಕಾರ, ಪ್ರಾಧ್ಯಾಪಕರಾದ ಈ. ಸುರೇಶ್, ಬಿ.ಜೆ. ರುದ್ರೇಶ್, ಅನ್ಬರ್ ಅಹಮ್ಮದ್ ಬೆಟಗೇರಿ, ವೀಣಾ ಎನ್., ರಣಧೀರ, ಸುನೀಲ್ ಕುಮಾರ್ ಎನ್.ಬಿ., ಉಷಾ ಎಂ.ಆರ್., ಗುರುರಾಜ್ ಕೆ., ನಾಗವೇಣಿ ಜೆ.ಜಿ., ಸೂರ್ಯಪ್ರಸಾದ್, ವಿದ್ಯಾರ್ಥಿನಿಯರ ಸಂಘದ ಕಾರ್ಯದರ್ಶಿಗಳಾದ ದೀಪಾ ಸಿ.ಕೆ., ತೇಜಸ್ವಿನಿ ಆರ್, ಐಶ್ವರ್ಯ ಎಸ್.ವಿ. ಉಪಸ್ಥಿತರಿದ್ದರು.
ಭಾರತೀಯ ಸಂಸ್ಕೃತಿ ನಮ್ಮ ಹೆಮ್ಮೆ. ದೇಶದ ಪ್ರತಿಯೊಬ್ಬರೂ ಸಂಸ್ಕೃತಿಯ ವಾರಸುದಾರರು. ಈ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ.-ಪ್ರೊ.ಜಿ.ಸಿ. ನೀಲಾಂಬಿಕಾ, ಪ್ರಾಂಶುಪಾಲೆ ಎಂಎಸ್‌ಬಿ ಕಾಲೇಜು
ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಶುಕ್ರವಾರ ನಡೆದ ದೇಸಿಕಲರವದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಪ್ರಾಧ್ಯಾಪಕಿಯೊಬ್ಬರು ಬಾವಿಯಿಂದ ನೀರು ಮೇಲೆತ್ತಿ ಗಮನ ಸೆಳೆದರು
ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಶುಕ್ರವಾರ ನಡೆದ ದೇಸಿಕಲರವದಲ್ಲಿ ಬಂಜಾರ ಉಡುಗೆಯಲ್ಲಿ ಕಂಗೊಳಿಸಿದ ವಿದ್ಯಾರ್ಥಿನಿ
ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ದೇಸಿಕಲರವದಲ್ಲಿ ಸಾಂಪ್ರದಾಯಿಕ ಸೀರೆ ತೊಟ್ಟು ಸೆಲ್ಫಿ ತೆಗೆದುಕೊಂಡ ವಿದ್ಯಾರ್ಥಿನಿಯರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.