ADVERTISEMENT

ದಾವಣಗೆರೆ: ಬೀಜ ಭಂಡಾರ ಸೇರಿದ ದೇಸಿ ತಳಿಗಳು

ಜಿಲ್ಲೆಯ 207 ಪ್ರಭೇದದ ಬೀಜಗಳು ಕೃಷಿ ಇಲಾಖೆಗೆ ಹಸ್ತಾಂತರ; ಭತ್ತದ ಪಾಲು ಅಧಿಕ

ಅಮೃತ ಕಿರಣ ಬಿ.ಎಂ.
Published 17 ನವೆಂಬರ್ 2025, 7:12 IST
Last Updated 17 ನವೆಂಬರ್ 2025, 7:12 IST
ದೇಸಿ ತಳಿಯ ಭತ್ತದ ಬೆಳೆಯನ್ನು ಪರಿಶೀಲಿಸುತ್ತಿರುವ ಆಸಕ್ತರು 
ದೇಸಿ ತಳಿಯ ಭತ್ತದ ಬೆಳೆಯನ್ನು ಪರಿಶೀಲಿಸುತ್ತಿರುವ ಆಸಕ್ತರು    

ದಾವಣಗೆರೆ: ನಶಿಸಿ ಹೋಗುತ್ತಿರುವ ದೇಸಿ ಬೀಜಗಳನ್ನು ಸಂರಕ್ಷಿಸುವ ಹಾಗೂ ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಆರಂಭಿಸಿರುವ ಸಮುದಾಯ ಬೀಜ ಬ್ಯಾಂಕ್‌ಗೆ ಜಿಲ್ಲೆಯ 207 ವಿಧದ ದೇಸಿ ಬೀಜಗಳು ಈವರೆಗೆ ಸೇರ್ಪಡೆಯಾಗಿವೆ. ತಮ್ಮ ಪೂರ್ವಜರಿಂದ ಬಂದಿರುವ ದೇಸಿ ತಳಿಗಳನ್ನು ಜತನದಿಂದ ಕಾಪಿಟ್ಟುಕೊಂಡಿರುವ ರೈತರಿಂದ ಪಡೆದ ಸ್ಥಳೀಯ ಬೀಜಗಳನ್ನು ಸಂಗ್ರಹಿಸಿರುವ ಕೃಷಿ ಇಲಾಖೆ, ಬೀಜ ಭಂಡಾರವನ್ನು ಭರ್ತಿಗೊಳಿಸುತ್ತಿದೆ.

ದೇಶಿ ಬೀಜಗಳ ಪೈಕಿ ಭತ್ತಕ್ಕೆ ಸಂಬಂಧಿಸಿದ 196 ತಳಿಗಳನ್ನು ಸಂಗ್ರಹಿಸಲಾಗಿದ್ದು, ಬಹುತೇಕವನ್ನು ಹರಿಹರ ತಾಲ್ಲೂಕಿನಲ್ಲಿ ಸಂಗ್ರಹಿಸಲಾಗಿದೆ. ಉಳಿದಂತೆ, ಸಿರಿಧಾನ್ಯಗಳಾದ ನವಣೆ, ಸಾವೆ, ರಾಗಿ, ಹಾಗೂ ಹೆಸರುಕಾಳು, ಮೆಣಸಿನಕಾಯಿ ಬೀಜಗಳನ್ನು ರೈತರಿಂದ ಪಡೆದು ಬೀಜ ಬ್ಯಾಂಕ್‌ಗೆ ಸೇರಿಸಲಾಗಿದೆ.

ಕುಂಬಳೂರಿನ ಶರಣ ಮುದ್ದಣ ಸಾವಯವ ಕೃಷಿಕರ ಬಳಗವು ಜಿಲ್ಲೆಯಲ್ಲಿ ಬೆಳೆಯುವ ಅಪರೂಪದ ತಳಿಯ ಅತಿಹೆಚ್ಚು ಬೀಜಗಳನ್ನು ಇಲಾಖೆಗೆ ನೀಡಿದ್ದು, ಬೀಜೋತ್ಪಾದನೆಗೆ ನೆರವಾಗಿದೆ. 150ಕ್ಕೂ ಹೆಚ್ಚು ದೇಸಿ ಭತ್ತದ ತಳಿಯ ಮಾದರಿಗಳನ್ನು ಹಸ್ತಾಂತರಿಸಿದೆ. ಮುದ್ದಣ ಬಳಗ ಹೊರತುಪಡಿಸಿ, ಜಿಲ್ಲೆಯ ಇನ್ನೂ ಆರು ರೈತರು ತಮ್ಮಲ್ಲಿರುವ ಅಪರೂಪದ ತಳಿಯ ಬೀಜಗಳನ್ನು ಬೀಜ ಭಂಡಾರಕ್ಕೆ ನೀಡಿದ್ದಾರೆ. ಹರಿಹರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಸಂಜೀವರೆಡ್ಡಿ ಮೆಣಸಿನಕಾಯಿ ತಳಿಯ ಮಾದರಿಯನ್ನು ಹಸ್ತಾಂತರಿಸಿದ್ದಾರೆ. ಚನ್ನಗಿರಿ ತಾಲ್ಲೂಕಿನ ಕೆಂಪನಳ್ಳಿಯ ಸುಷ್ಮಾ ಜಿ. ಹಾಗೂ ಹೊನ್ನಾಳಿ ತಾಲ್ಲೂಕಿನ ಯರೇಹಳ್ಳಿ ಗ್ರಾಮದ ಎಂ.ಬಿ. ಹನುಮಂತಪ್ಪ ಅವರು ಭತ್ತದ ತಳಿಗಳನ್ನು ಕೊಟ್ಟಿದ್ದಾರೆ.

ADVERTISEMENT

ಭತ್ತದ ಅಪರೂಪದ ತಳಿಗಳಾದ ದೊಡ್ಡ ಬೈರನಲ್, ಹಾಲುಬ್ಲಿ, ಕಿಚಡಿ, ನವರ, ಗಂಧಸಾಲೆ, ಕುಂಬಳಸಾಲೆ, ಅಂದನೂರು ಸಣ್ಣ, ಸಿಂಧೂರ ಮಧುಸಾಲೆ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಷ್ಟೇ ಗುರುತಿಸಿಕೊಂಡಿರುವುದು ವಿಶೇಷ. ಇಲ್ಲಿನ ಹವಾಗುಣಕ್ಕೆ ಒಗ್ಗುವ ಈ ತಳಿಗಳು ಕೆಲವೇ ರೈತರ ಬಳಿ ದೊರೆತಿವೆ. ವೆಲ್ವೆಟ್ ಬೀನ್ಸ್, ಪೆರೇರಿಯಾ ಸೇರಿದಂತೆ ಹಸಿರೆಲೆ ಗೊಬ್ಬರದ ಹತ್ತಾರು ಪ್ರಭೇದದ ಬೀಜಗಳೂ ಸ್ಥಳೀಯವಾಗಿ ಮಹತ್ವ ಪಡೆದಿವೆ ಎಂದು ದೇಸಿ ಬೀಜಗಳನ್ನು ಸಂಗ್ರಹಿಸಿರುವ ಅಂದನೂರು ಅಂಜನೇಯ ಮಾಹಿತಿ ನೀಡಿದರು.

ಜಿಲ್ಲೆಯ ರೈತರಿಂದ ಸಂಗ್ರಹಿಸಿರುವ ನೂರಾರು ತಳಿಯ ಬೀಜಗಳನ್ನು ಕೃಷಿ ಇಲಾಖೆಯು ಬೆಂಗಳೂರಿನ ಜಿಕೆವಿಕೆ ಸೇರಿದಂತೆ ಇಲಾಖೆಗೆ ಸೇರಿದ ವಿವಿಧ ತಾಕುಗಳಲ್ಲಿ ಬೆಳೆಯಲು ಮುಂದಾಗಿದೆ. ಹವಾಮಾನಕ್ಕೆ ಒಗ್ಗದ ಕೆಲವು ಬೀಜಗಳು ಮೊಳೆತಿಲ್ಲ. ಆದರೂ ಅವುಗಳನ್ನು ಮತ್ತೆ ಚೆಲ್ಲಿ, ಬೀಜೋತ್ಪಾದನೆ ಮಾಡಲಾಗುತ್ತಿದೆ. ಒಂದು ವೇಳೆ ರೈತರ ಬಳಿಯಿರುವ ಅಪರೂಪದ ತಳಿಗಳು ನಾಶವಾದರೂ, ಅವುಗಳ ಮಾದರಿಗಳು ಕೃಷಿ ಇಲಾಖೆಯ ಸಮುದಾಯ ಬೀಜ ಬ್ಯಾಂಕ್‌ನಲ್ಲಿ ಭದ್ರವಾಗಿ ಇರಲಿವೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ತಿಳಿಸಿದರು.

ದೇಸಿ ತಳಿಯ ಬೀಜಗಳು

ಬೀಜ ಸಂರಕ್ಷಣೆಯಲ್ಲಿ ಅವಿರತ ಯತ್ನ

ಸರ್ಕಾರವು ಬೀಜ ಸಂರಕ್ಷಣೆಗೆ ಮುಂದಾಗುವುದಕ್ಕೂ ಮುನ್ನ ರಾಜ್ಯದ ನೂರಾರು ರೈತರು ರೈತ–ಸಂಘಗಳು ಹಾಗೂ ರೈತ ಉತ್ಪಾದಕ ಕಂಪನಿಗಳು ಬೀಜ ಸಂರಕ್ಷಣೆಯಲ್ಲಿ ತೊಡಗಿವೆ. ಕುಂಬಳೂರಿನ ಶರಣ ಮುದ್ದಣ ಸಾವಯವ ಕೃಷಿಕರ ಬಳಗವು ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿದೆ. ಪ್ರತಿ ವರ್ಷ 40 ಕ್ವಿಂಟಲ್‌ ಬೀಜವನ್ನು ಈ ಬಳಗವು ಆಸಕ್ತ ರೈತರಿಗೆ ಪೂರೈಸುತ್ತಿದೆ. ಒಂದು ಕೆ.ಜಿ ಬೀಜ ಪಡೆದವರು ಎರಡು ಕೆ.ಜಿ ಬೀಜವನ್ನು ವಾಪಸ್ ನೀಡಬೇಕು ಎಂಬ ಕರಾರಿನೊಂದಿಗೆ ನೀಡಲಾಗುತ್ತಿದೆ. ಜಿಲ್ಲೆಯ ರೈತರಿಗೆ ಉಚಿತವಾಗಿ ನೀಡಲಾಗುತ್ತದೆ. ಇದರಲ್ಲಿ ಲಾಭದ ಉದ್ದೇಶವಿಲ್ಲ. ಆದರೆ ಇತರೆ ಜಿಲ್ಲೆ ಹಾಗೂ ರಾಜ್ಯದ ರೈತರಿಗೆ ದೇಸಿ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ. ಸರ್ಕಾರದ ನೆರವಿನ ನಿರೀಕ್ಷೆಯಿಲ್ಲದೇ ಕೇವಲ ಸ್ಥಳೀಯ ದೇಸಿ ಬೀಜಗಳ ಸಂರಕ್ಷಣೆ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದೇವೆ ಎಂದು ಬಳಗದ ಅಧ್ಯಕ್ಷ ಅಂದನೂರು ಅಂಜನೇಯ ತಿಳಿಸಿದರು.

ಬೀಜ ಭಂಡಾರ ಸೇರುತ್ತಿವೆ ಸ್ಥಳೀಯ ತಳಿಗಳು

ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದಡಿ ಕಣ್ಮರೆಯಾಗುತ್ತಿರುವ ಸ್ಥಳೀಯ ಬೆಳೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸುವುದಾಗಿ 2024ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ಇಂತಹ ದೇಸೀ ತಳಿಗಳನ್ನು ಸಂರಕ್ಷಿಸುವವರಿಗೆ ಪ್ರೋತ್ಸಾಹಧನ ನೀಡುವುದಾಗಿ ಪ್ರಕಟಿಸಿತ್ತು. ದೇಸಿ ತಳಿಗಳ ಸಂರಕ್ಷಣೆ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎನಿಸಿದ್ದು ರಾಜ್ಯದ ಎಲ್ಲ ಜಿಲ್ಲೆಗಳಿಂದ ಸ್ಥಳೀಯ ಬೀಜಗಳನ್ನು ಸಂಗ್ರಹಿಸಲಾಗುತ್ತಿದೆ.

ಸೂಕ್ತ ದರ ಮಾರುಕಟ್ಟೆ ಅಗತ್ಯ

ಹೈಬ್ರೀಡ್ ತಳಿಗಳಿಗೆ ಹೋಲಿಸಿದರೆ ದೇಸಿ ತಳಿಗಳು ಹೆಚ್ಚು ಇಳುವರಿ ನೀಡುವುದಿಲ್ಲ. ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲ. ಈ ಕಾರಣಗಳಿಗೆ ಬಹುಪಾಲು ರೈತರು ದೇಸಿ ತಳಿಗಳನ್ನು ಬೆಳೆಯಲು ಮುಂದಾಗುವುದಿಲ್ಲ. ಆದರೆ ಸ್ಥಳೀಯ ತಳಿಗಳು ಅತಿಹೆಚ್ಚು ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತವೆ. ಈ ಧಾನ್ಯಗಳಿಂದ ಮಾಡಿದ ಆಹಾರವು ದೇಹಕ್ಕೆ ಅಧಿಕ ಬಲ ನೀಡುತ್ತವೆ. ರಾಸಾಯನಿಕ ಗೊಬ್ಬರ ಹಾಗೂ ರಾಸಾಯನಿಕ ಔಷಧ ಬಳಸದೇ ಬೆಳೆದ ದೇಸಿ ತಳಿಯ ಬೆಳೆಗಳಿಗೆ ಸರ್ಕಾರವು ಸೂಕ್ತ ದರ ನಿಗದಿಪಡಿಸಿ ಮಾರುಕಟ್ಟೆಯನ್ನು ಸೃಷ್ಟಿಸಿದರೆ ಅವು ಮುಂದಿನ ಪೀಳಿಗೆಗೆ ಉಳಿಯುತ್ತವೆ ಎಂದು ರೈತರೊಬ್ಬರು ಅಭಿಪ್ರಾಯಪಟ್ಟರು.

ರಾಸಾಯನಿಕಮುಕ್ತ ಸುಸ್ಥಿರ ಕೃಷಿ ಅಗತ್ಯ. ಆಹಾರ ವಿಷಯುಕ್ತವಾಗಿರುವ ಈ ಸಮಯದಲ್ಲಿ ದೇಸಿ ತಳಿಗಳನ್ನು ಬಳಸಬೇಕಿದೆ.
–ಅಂದನೂರು ಆಂಜನೇಯ, ಅಧ್ಯಕ್ಷ, ಶರಣ ಮುದ್ದಣ ಸಾವಯವ ಕೃಷಿಕರ ಬಳಗ
ಜಿಲ್ಲೆಯ ಏಳು ರೈತರಿಂದ ಸಂಗ್ರಹಿಸಿದ 207 ಸ್ಥಳೀಯ ಬೀಜಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ಬೀಜೋತ್ಪಾದನೆ ಕೆಲಸ ಪ್ರಗತಿಯಲ್ಲಿದೆ.
–ಜಿಯಾವುಲ್ಲಾ ಕೆ., ಕೃಷಿ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.