ADVERTISEMENT

ದಾವಣಗೆರೆ: ದೇವರಾಜ ಅರಸು ಜಯಂತಿ ಸರಳ ಆಚರಣೆ

ಜಯಂತಿ ಆಚರಿಸಿದ ಜಿಲ್ಲಾಡಳಿತ, ದಾವಣಗೆರೆ ವಿವಿ, ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 14:00 IST
Last Updated 20 ಆಗಸ್ಟ್ 2020, 14:00 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ದೇವರಾಜ ಅರಸು ಜನ್ಮ ದಿನಾಚರಣೆ ನಡೆಯಿತು
ಜಿಲ್ಲಾಧಿಕಾರಿ ಕಚೇರಿಯಲ್ಲಿ ದೇವರಾಜ ಅರಸು ಜನ್ಮ ದಿನಾಚರಣೆ ನಡೆಯಿತು   

ದಾವಣಗೆರೆ: ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ 105ನೇ ಜನ್ಮ ದಿನಾಚರಣೆಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಗಸ್ಟ್ 20ರಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಸರಳವಾಗಿ ಆಚರಿಸಲಾಯಿತು.

ಈ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್, ಜಿಲ್ಲಾ ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಎಂ. ಉಮಾಪತಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಎಸ್‌ಪಿ ರಾಜೀವ್, ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗಂಗಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ್ ರೆಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ, ವಿವಿಧ ಅಭಿವೃದ್ಧಿ ನಿಗಮಗಳ ಜಿಲ್ಲಾ ವ್ಯವಸ್ಥಾಪಕರು, ಅಧಿಕಾರಿ ಪಾಲ್ಗೊಂಡಿದ್ದರು.

ದಾವಣಗೆರೆ ವಿವಿಯಲ್ಲಿ ಆಚರಣೆ: ಸಮಾಜದಲ್ಲಿ ಆಚಾರಣೆಯಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಹಲವು ಕಾನೂನುಗಳನ್ನು ಜಾರಿಗೆ ತರುವ ಮೂಲಕ ಹಿಂದುಳಿದ, ದುರ್ಬಲ ವರ್ಗಗಳ ಜನರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸುವಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಕೊಡುಗೆ ಅಪಾರವಾದುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅಭಿಪ್ರಾಯಪಟ್ಟರು.

ADVERTISEMENT

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಡಿ. ದೇವರಾಜ ಅರಸು ಜನ್ಮ ದಿನಾಚರಣೆ ಹಾಗೂ ಸದ್ಭವನಾ ದಿನಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಎಲ್ಲಾ ವರ್ಗಗಳ ಬಲವರ್ಧನೆಗಾಗಿ ಜೀತ ಪದ್ಧತಿಯನ್ನು ನಿರ್ಮೂಲನೆಗೊಳಿಸಿದರು. ಉಳುವವನೇ ಭೂಮಿ ಒಡೆಯ ಹಾಗೂ ಭೂಸುಧಾರಣ ಕಾಯ್ದೆಯನ್ನು ಜಾರಿಗೆ ತಂದಿದ್ದು ರಾಜ್ಯಕ್ಕೆ ಅರಸು ಅವರು ನೀಡಿದ ಮಹತ್ವದ ಕೊಡುಗೆ ಎಂದರು. ಮಲಹೊರುವ ಪದ್ಧತಿ ಹಾಗೂ ಜೀತ ಪದ್ದತಿಯನ್ನು ತೊಲಗಿಸುವ ಮೂಲಕ ಶೋಷಿತ ವರ್ಗಗಳ ಧ್ವನಿಯಾಗಿ ಅರಸು ಕಾರ್ಯ ನಿರ್ವಹಿಸಿದರು ಎಂದು ಸ್ಮರಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ನೇರವಾಗಲು ರಾಜ್ಯದಾದ್ಯಂತ ವಿದ್ಯಾರ್ಥಿನಿಲಯ ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು. ವೃದ್ದಾಪ್ಯ ವೇತನ ಜಾರಿಗೆ ತರುವ ಮೂಲಕ ಎಲ್ಲಾ ವರ್ಗಗಳ ಬಡಜನರ ಆರ್ಥಿಕ ಬಲವರ್ಧನೆಗಾಗಿ ಅರಸು ಅವರು ಶ್ರಮಿಸಿದ್ದಾರೆ ಎಂದರು.

ಕುಲಸಚಿವ ಪ್ರೊ.ಬಸವರಾಜ ಬಣಕಾರ ಸದ್ಬವನಾ ದಿನಚಾರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು. ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್. ಎಸ್, ಹಣಕಾಸು ಅಧಿಕಾರಿ ಪ್ರೊ. ಗೋಪಾಲ್ ಎಂ ಅಡಿವಿ ರಾವ್, ಹಿಂದುಳಿದ ವರ್ಗಗಳ ಘಟಕದ ಸಂಯೋಜನಾಧಿಕಾರಿ ಕುಮಾರ್ ಸಿದ್ದಮಲ್ಲಪ್ಪ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.