ದಾವಣಗೆರೆ: ಧರ್ಮಸ್ಥಳದ ಮಂಜುನಾಥ ಸ್ವಾಮಿ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಂಚಿಕೊಳ್ಳುತ್ತಿರುವುವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಭಕ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಆಕ್ರೋಶ ಹೊರಹಾಕಿದರು. ‘ಜೈ ಧರ್ಮಸ್ಥಳ’, ‘ಧರ್ಮಸ್ಥಳದ ಜೊತೆಗೆ ನಾವಿದ್ದೇವೆ’ ಎಂಬ ಭಿತ್ತಿಚಿತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿದರು.
ಜಯದೇವ ವೃತ್ತದಿಂದ ಹೊರಟ ಮೆರವಣಿಗೆ ಅಶೋಕ ರಸ್ತೆ, ಗಾಂಧಿ ವೃತ್ತ, ಪಿ.ಬಿ. ರಸ್ತೆಯ ಮೂಲಕ ಉಪವಿಭಾಗಾಧಿಕಾರಿ ಕಚೇರಿ ತಲುಪಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಕರಾವಳಿ ಭಾಗದ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಬಿಜೆಪಿ, ಕಾಂಗ್ರೆಸ್ ಮುಖಂಡರು ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.
ಧರ್ಮಸ್ಥಳದ ಮಂಜುನಾಥಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ ದೇಗುಲಕ್ಕೆ 8 ಶತಮಾನಗಳ ಇತಿಹಾಸವಿದೆ. ಕ್ಷೇತ್ರಕ್ಕೆ ರಾಜ್ಯ, ಹೊರರಾಜ್ಯದ ಸಾವಿರಾರು ಭಕ್ತರು ನಿತ್ಯ ಭೇಟಿ ನೀಡುತ್ತಿದ್ದಾರೆ. ಇಂತಹ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ.ಜಯಂತ್ ಹಾಗೂ ಎಂ.ಡಿ.ಸಮೀರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಇವರ ಬಗ್ಗೆ ಸುಳ್ಳು ಆರೋಪಗಳನ್ನು ಹೊರಿಸಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಇದರಿಂದ ಕ್ಷೇತ್ರದ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಈ ಪ್ರಯತ್ನ ಕೈಗೂಡುವುದಿಲ್ಲ ಎಂದು ಆಕ್ರೋಶ ವ್ಯಕ್ತಡಿಸಿದರು.
ಅನಾಮಿಕ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿರುವುದನ್ನು ಭಕ್ತರು ಸೇರಿದಂತೆ ಎಲ್ಲರೂ ಸ್ವಾಗತಿಸಿದ್ದೇವೆ. ಎಲ್ಲ ಆಯಾಮಗಳಿಂದ ನಡೆಯುತ್ತಿರುವ ತನಿಖೆ ಅರ್ಥಪೂರ್ಣವಾಗಿ ಕೊನೆಗೊಳ್ಳುವುದನ್ನು ಎದುರು ನೋಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿಯೂ ಕೆಲ ಶಕ್ತಿಗಳು ಕ್ಷೇತ್ರದ ಬಗ್ಗೆ ಸುಳ್ಳು ಆರೋಪ ಮಾಡುತ್ತಿವೆ. ಇದಕ್ಕೆ ಎಲ್ಲಿಂದ ಪ್ರಚೋದನೆ ಸಿಗುತ್ತಿದೆ ಎಂಬುದನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಮಾಜಿ ಉಪಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್, ವಿಶ್ವ ಹಿಂದೂ ಪರಿಷತ್ ಮುಖಂಡ ಸತೀಶ್ ಪೂಜಾರಿ, ಕುಸುಮ್ ಶ್ರೇಷ್ಠಿ ಪಾಲ್ಗೊಂಡಿದ್ದರು.
ಧಾರ್ಮಿಕ ಕ್ಷೇತ್ರದಲ್ಲಿ ಧರ್ಮಸ್ಥಳದ ಕಾರ್ಯ ದೊಡ್ಡದು. ಇದನ್ನು ಸಹಿಸದ ಶಕ್ತಿಗಳು ಅಪಪ್ರಚಾರ ಮಾಡುವ ಹುನ್ನಾರ ನಡೆಸುತ್ತಿವೆ. ವೀರೇಂದ್ರ ಹೆಗ್ಗಡೆ ಅವರ ತೇಜೋವಧೆ ಸಲ್ಲದುಮಹಾಂತ ರುದ್ರೇಶ್ವರ ಸ್ವಾಮೀಜಿ, ಹೆಬ್ಬಾಳ ಮಠ
ಹಿಂದೂ ಧರ್ಮೀಯರ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ 800 ವರ್ಷಗಳ ಇತಿಹಾಸವಿದೆ. ಕ್ಷೇತ್ರದ ಮೇಲೆ ಮಾಡುತ್ತಿರುವ ಆರೋಪದಿಂದ ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆಪಿ. ಉಷಾ, ಭಕ್ತೆ
‘ಬದುಕು ಶ್ರೀಮಂತಗೊಳಿಸಿದ ಕ್ಷೇತ್ರ’
‘ಸರ್ಕಾರ ಮಾಡದೇ ಇರುವ ಕಾರ್ಯವನ್ನು ಧರ್ಮಸ್ಥಳದ ಕ್ಷೇತ್ರ ಸಾಧಿಸಿದೆ. ಗ್ರಾಮೀಣ ಪ್ರದೇಶದ ಜನರ ಬದುಕನ್ನು ಶ್ರೀಮಂತಗೊಳಿಸುವ ಕೆಲಸವನ್ನು ವೀರೇಂದ್ರ ಹೆಗ್ಗಡೆ ಮಾಡುತ್ತಿದ್ದಾರೆ’ ಎಂದು ಆವರಗೊಳ್ಳ ಪುರುವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
‘ಕೊಲೆಗೀಡಾದ ಸೌಜನ್ಯಾಗೆ ನ್ಯಾಯ ಸಿಗಬೇಕು ಎಂಬುದು ಎಲ್ಲರ ಅಪೇಕ್ಷೆ. ಆದರೆ, ಇದೇ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸನಾತನ ಹಿಂದೂ ಧರ್ಮಕ್ಕೆ ಕೊಡಲಿ ಪೆಟ್ಟು ನೀಡುವ ಹುನ್ನಾರ ಸಹಿಸಲು ಸಾಧ್ಯವಿಲ್ಲ. ಕ್ಷೇತ್ರದ ಪಾವಿತ್ರ್ಯತೆ ಹಾಳು ಮಾಡುವುದು ತಪ್ಪು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.