ADVERTISEMENT

ರೋಗ ಬಾಧೆ: ಈರುಳ್ಳಿ ನಾಶಮಾಡಿದ ರೈತರು

ಈರುಳ್ಳಿ ಬೆಳೆಗೆ ವಿಚಿತ್ರ ರೋಗ: ಕಂಗಾಲಾದ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 12:21 IST
Last Updated 2 ಆಗಸ್ಟ್ 2020, 12:21 IST
ಹರಪನಹಳ್ಳಿ ತಾಲ್ಲೂಕಿನ ದಡಗಾರನಹಳ್ಳಿಯಲ್ಲಿ ರೈತ ಹಾಲೇಶಪ್ಪ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್ ಹರಿಸಿ ನಾಶಪಡಿಸುತ್ತಿರುವುದು
ಹರಪನಹಳ್ಳಿ ತಾಲ್ಲೂಕಿನ ದಡಗಾರನಹಳ್ಳಿಯಲ್ಲಿ ರೈತ ಹಾಲೇಶಪ್ಪ ಈರುಳ್ಳಿ ಬೆಳೆಯನ್ನು ಟ್ರ್ಯಾಕ್ಟರ್ ಹರಿಸಿ ನಾಶಪಡಿಸುತ್ತಿರುವುದು   

ಹರಪನಹಳ್ಳಿ: ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಈರುಳ್ಳಿ ಬೆಳೆ ವಿಚಿತ್ರ ರೋಗಕ್ಕೆ ತುತ್ತಾಗಿದ್ದರಿಂದ ಬೇಸತ್ತ ರೈತರು ತಮ್ಮ ಹೊಲದಲ್ಲಿ ಬೆಳೆದಿದ್ದ ಬೆಳೆಯನ್ನು ನಾಶಪಡಿಸುತ್ತಿದ್ದಾರೆ.

ತಾಲ್ಲೂಕಿನ ದಡಗಾರನಹಳ್ಳಿ ಗ್ರಾಮದ ರೈತ ಹಾಲೇಶಪ್ಪ ತಮ್ಮ ಒಂದು ಎಕರೆ ಜಮೀನಿನಲ್ಲಿ ಸೊಂಪಾಗಿ ಬೆಳೆದಿದ್ದ ಈರುಳ್ಳಿಯನ್ನು ಶನಿವಾರ ಟ್ರ್ಯಾಕ್ಟರ್‍ ಹರಿಸಿ ನಾಶಮಾಡಿದರು. ಬೆಳೆಗೆ ತಗುಲಿದ ರೋಗ ವಾಸಿಯಾಗದಿದ್ದರೆ ಗ್ರಾಮದಲ್ಲಿ ಬೆಳೆದ ಪ್ರತಿಯೊಬ್ಬ ಬೆಳೆಗಾರರು ತಮ್ಮ ಹೊಲದ ಈರುಳ್ಳಿ ಬೆಳೆಯನ್ನು ನಾಶಪಡಿಸುವುದು ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

‘ಬಿತ್ತನೆ ಮಾಡಿ ಮೂರು ತಿಂಗಳು ಆಗಿತ್ತು, ಗಿಡಗಳು ಹುಲುಸಾಗಿ ಬೆಳೆದು ಉತ್ತಮವಾಗಿದ್ದವು. ಎರಡೂವರೆ ತಿಂಗಳಲ್ಲಿ ಇಳುವರಿ ಬರುವ ನಿರೀಕ್ಷೆಯಿತ್ತು. ಆದರೆ, ವಿಚಿತ್ರವಾಗಿ ಬಂದಿರುವ ರೋಗಕ್ಕೆ ತುತ್ತಾದ ಗಿಡಗಳು ಒಣಗಿ, ಈರುಳ್ಳಿ ಗಡ್ಡೆ ಕೊಳೆಯಲು ಶುರುವಾಯಿತು. ಇದು ಗಿಡದಿಂದ ಗಿಡಕ್ಕೆ ಬಂದು ಈರುಳ್ಳಿ ಹೊಲವನ್ನೇ ಆವರಿಸಿದೆ. ಇದರ ಜೊತೆಗೆ ಬಿತ್ತನೆ ಮಾಡಿರುವ ಇತರೆ ಬೆಳೆಗಳಿಗೆ ಹಾನಿಯಾಗಬಾರದು. ನಾಶಕ್ಕೆ ಮುಂದಾಗಿದ್ದೇನೆ’ ಎಂದುರೈತ ಹಾಲೇಶಪ್ಪ ನೊಂದು ನುಡಿದರು.

ADVERTISEMENT

‘ಇಳುವರಿ ತನಕ ಕಾಯ್ದು ಕುಳಿತರೆ ಸಾವಿರಾರು ರೂಪಾಯಿ ನಷ್ಟ ಅನುಭವಿಸಬೇಕಾಗುತ್ತದೆ.ಒಂದು ಎಕರೆಗೆ ₹ 30 ಸಾವಿರ ಖರ್ಚು ಮಾಡಿ ಈರುಳ್ಳಿ ಬೀಜ ಬಿತ್ತನೆ ಮಾಡಿದ್ದೆವು. ಈ ಬಾರಿ ವರುಣ ಕೃಪೆ ತೋರಿದ್ದ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದೆವು. ಆದರೆ, ಈ ರೋಗ ಅದಕ್ಕೆ ತಣ್ಣೀರು ಎರಚಿತು. ಹಾಗಾಗಿ ಬೆಳೆ ಕೆಡಿಸಿ, ರಾಗಿ ಅಥವಾ ಹೂವು ಬೆಳೆಯುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ’ ಎಂದು ಯುವ ರೈತ ಕರಿಬಸಪ್ಪ ಅಳಲು ತೋಡಿಕೊಂಡರು.

ಹಾನಿಯಾದ ಈರುಳ್ಳಿ ಬೆಳೆಗೆ ಪರಿಹಾರ ಒದಗಿಸಬೇಕು ಎಂದು ಈರುಳ್ಳಿ ಬೆಳೆಗಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.