ADVERTISEMENT

ಜಿಲ್ಲಾ ಕಸಾಪವನ್ನು ರಾಜ್ಯದಲ್ಲೇ ಮಾದರಿಯಾಗಿಸುವೆ: ವಾಮದೇವಪ್ಪ

ಅಧಿಕಾರ ಸ್ವೀಕರಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಾಮದೇವಪ್ಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 2:31 IST
Last Updated 26 ನವೆಂಬರ್ 2021, 2:31 IST
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಬಿ. ವಾಮದೇವಪ್ಪ ಅವರು ಗುರುವಾರ ಅಧಿಕಾರ ವಹಿಸಿಕೊಳ್ಳುವ ಮುಂಚೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಬಿ. ವಾಮದೇವಪ್ಪ ಅವರು ಗುರುವಾರ ಅಧಿಕಾರ ವಹಿಸಿಕೊಳ್ಳುವ ಮುಂಚೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು   

ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜ್ಯದಲ್ಲೇ ಮಾದರಿಯಾಗಿ ಮಾಡುವ ಗುರಿ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಅವರಿಂದ ಪರಿಷತ್ ಅಧ್ಯಕ್ಷ ಸ್ಥಾನದ ಕಾರ್ಯಭಾರ ಸ್ವೀಕರಿಸಿದ ನಂತರ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾಲ್ಲೂಕು ಹಾಗೂ ಹೋಬಳಿ ಘಟಕಗಳಲ್ಲಿ ಕನ್ನಡ ಭವನಗಳ ನಿರ್ಮಾಣ, ಆನ್‌ಲೈನ್ ಮೂಲಕ ಸದಸ್ಯತ್ವ ನೋಂದಣಿ, ತಾಲ್ಲೂಕು ಘಟಕಗಳಲ್ಲಿ ವ್ಯವಸ್ಥಿತ ಕಾರ್ಯಪಡೆಗಳ ರಚನೆ, ವಿಶ್ವ ಕನ್ನಡ ಸಮ್ಮೇಳನ ನಡೆಸುವ ಗುರಿ ಇದೆ ಎಂದು ವಿವರಿಸಿದರು.

ADVERTISEMENT

ಮಹಲಿಂಗ ರಂಗ ಪ್ರಶಸ್ತಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡುವ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಸದಸ್ಯತ್ವ ಪಡೆಯುವ ಶುಲ್ಕ ಕಡಿಮೆ ಮಾಡಲು ರಾಜ್ಯ ಪರಿಷತ್ತು ಜೊತೆ ಚರ್ಚಿಸುವುದಾಗಿ ಹೇಳಿದರು.

ಪರಿಷತ್ತಿನ ಸದಸ್ಯರ ಜೊತೆ ಚರ್ಚಿಸಿ ಪರಿಷತ್ತು ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು. ಸಾಹಿತ್ಯ ಪರಿಷತ್ತಿಗೆ ಕನ್ನಡವೇ
ಜಾತಿ – ಧರ್ಮ ಹಾಗೂ ವ್ಯವಸ್ಥೆ ಆಗಿದೆ. ಹೀಗಾಗಿ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಲಾಗುವುದು ಎಂದು ತಿಳಿಸಿದರು.

ಚುನಾವಣೆಗೆ ಮುಂಚೆ ತರಳಬಾಳು ಮಠದ ಶಿವಪ್ರಕಾಶ ಸ್ವಾಮೀಜಿ ಅವರು ಅನುಭವ ಮಂಟಪದಲ್ಲಿ ಕರೆದಿದ್ದ ಆಕಾಂಕ್ಷಿಗಳ ಸಭೆಯಲ್ಲಿ ಒಬ್ಬರು ಹೊರತು ಪಡಿಸಿ ಉಳಿದವರೆಲ್ಲ ಬಂದಿದ್ದರು. ಶ್ರೀಗಳ ಆಶಯದಂತೆ ಎಲ್ಲರೂ ತಮ್ಮ ಪರವಾಗಿ ನಾಮಪತ್ರ ವಾಪಸ್ ಪಡೆದು ನನ್ನ ಗೆಲುವಿಗೆ ಸಹಕರಿಸಿದರು. ಅವಿರೋಧವಾಗಿ ಆಯ್ಕೆ ನಡೆಯದೇ ಚುನಾವಣೆ ನಡೆದಿದ್ದು ಒಳ್ಳೆಯದೇ ಆಯಿತು. ಸ್ವಾಮೀಜಿಗಳ ಕಾಲು ಹಿಡಿದು ಗೆದ್ದರು ಎಂಬ ಆಪಾದನೆ ತಪ್ಪಿತು ಎಂದು
ಪ್ರತಿಪಾದಿಸಿದರು.

ನಿಕಟಪೂರ್ವ ಅಧ್ಯಕ್ಷ ಎಚ್.ಎಸ್. ಮಂಜುನಾಥ ಕುರ್ಕಿ, ‘ನಾನು ಅಧ್ಯಕ್ಷ ಸ್ಥಾನದ ಚುನಾವಣೆ ಎದುರಿಸಿದಾಗ ತಮ್ಮ ವಿರುದ್ಧ ಸ್ಪರ್ಧಿಸಿದವರನ್ನೇ ಪರಿಷತ್ತಿನ ಪದಾಧಿಕಾರಿಗಳಾಗಿ ನೇಮಿಸಿದ್ದೆ. ಸಾಹಿತ್ಯ ವಲಯದ ನಾವೆಲ್ಲರೂ ಸಹೋದರರೆಂದೇ ಭಾವಿಸಿದ್ದೇನೆ’ ಎಂದರು.

ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಎಸ್.ಬಿ. ರಂಗನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ,ರೈತ ಮುಖಂಡ ಎನ್.ಜಿ. ಪುಟ್ಟಸ್ವಾಮಿ,ಹರಿಹರ ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಸಂತೇಬೆನ್ನೂರು ಸಾಹಿತಿ ಕೆ. ಸಿದ್ದಲಿಂಗಪ್ಪ, ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಅಂಗಡಿ ರೇವಣಸಿದ್ದಪ್ಪ ಮಾತನಾಡಿದರು.

ಪರಿಷತ್ತಿನ ಚಟುವಟಿಕೆಗೆ ₹ 50 ಸಾವಿರ ನೀಡುವುದಾಗಿ ಹೋಟೆಲ್‌ ಉದ್ಯಮಿ ಅಣಬೇರು ರಾಜಣ್ಣ ಘೋಷಿಸಿದರು.

ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ ಉಪಸ್ಥಿತರಿದ್ದರು. ಸಿರಾಜ್ ಅಹಮ್ಮದ್ ಸ್ವಾಗತಿಸಿದರು. ಎನ್.ಎಸ್. ರಾಜು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.