ADVERTISEMENT

ದಾವಣಗೆರೆ | ಪಟಾಕಿ ಖರೀದಿಗೆ ಮುಗಿಬಿದ್ದ ಜನ

ಹೈಸ್ಕೂಲ್‌ ಮೈದಾನದಲ್ಲಿ 80 ಮಳಿಗೆಗೆ ಅನುಮತಿ, ಕೋಟ್ಯಂತರ ರೂಪಾಯಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 6:07 IST
Last Updated 21 ಅಕ್ಟೋಬರ್ 2025, 6:07 IST
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ದೀಪಾವಳಿ ಹಬ್ಬಕ್ಕೆ ಸೋಮವಾರ ಪಟಾಕಿ ಖರೀದಿಸಿದ ಜನರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ದೀಪಾವಳಿ ಹಬ್ಬಕ್ಕೆ ಸೋಮವಾರ ಪಟಾಕಿ ಖರೀದಿಸಿದ ಜನರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ನಗರದ ಹೈಸ್ಕೂಲ್‌ ಮೈದಾನದಲ್ಲಿ ಪಟಾಕಿ ಮಾರಾಟ ಆರಂಭವಾಗಿದೆ. ಬೆಳಕಿನ ಹಬ್ಬಕ್ಕೆ ಪಟಾಕಿ ಸಿಡಿಸಲು ಸಜ್ಜಾಗಿರುವ ಜನರು ಖರೀದಿಗೆ ಮುಗಿಬಿದ್ದಿದ್ದಾರೆ.

ಹೈಸ್ಕೂಲ್‌ ಮೈದಾನದಲ್ಲಿ 80 ಮಳಿಗೆಗಳನ್ನು ತಾತ್ಕಾಲಿಕವಾಗಿ ತೆರೆಯಲಾಗಿದೆ. ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಐದು ದಿನಗಳಿಗೆ ಅನುಮತಿ ನೀಡಿದೆ. ಹೀಗಾಗಿ, ಭಾನುವಾರದಿಂದ ಮಳಿಗೆಗಳು ಆರಂಭವಾಗಿವೆ. ಸೋಮವಾರ ಈ ಮಳಿಗೆಗಳಲ್ಲಿ ಖರೀದಿ ಜೋರಾಗಿ ನಡೆಯಿತು.

ಪಟಾಕಿ ಅವಘಡಗಳಿಂದ ಎಚ್ಚೆತ್ತ ಸರ್ಕಾರ ಮಾರಾಟಕ್ಕೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಕಂದಾಯ, ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆ, ಪೊಲೀಸ್‌ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಟಾಕಿ ಮಾರಾಟಕ್ಕೆ ಮಾರ್ಗಸೂಚಿಗಳನ್ನು ರೂಪಿಸಿವೆ.

ADVERTISEMENT

ಅಗ್ನಿನಂದಕ ಉಪಕರಣಗಳ ಬಳಕೆಯ ತರಬೇತಿ ಪಡೆದ ವರ್ತಕರಿಗೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಮಳಿಗೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳಿಗೆಗಳ ನಡುವೆ ನಿಗದಿತ ಅಂತರವಿದೆ. ನೀರು ತುಂಬಿದ ಡ್ರಮ್‌, ಮರಳನ್ನು ಪ್ರತಿ ಮಳಿಗೆಯಲ್ಲಿ ಇಡಲಾಗಿದೆ. ಅಗ್ನಿನಂದಕ ವಾಹನಗಳೊಂದಿಗೆ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದಾರೆ.

ಭಾನುವಾರ ಮಳೆ ಸುರಿದಿದ್ದರಿಂದ ಹೈಸ್ಕೂಲ್‌ ಮೈದಾನ ಕೆಸರು ಗದ್ದೆಯಂತಾಗಿತ್ತು. ಅಲ್ಲಲ್ಲಿ ನೀರು ನಿಂತಿದ್ದರಿಂದ ಗ್ರಾಹಕರಿಗೆ ತೊಡಕುಂಟಾಯಿತು. ಬಿರುಸಿನ ಮಳೆಗೆ ಪಟಾಕಿ ರಕ್ಷಣೆ ಕೂಡ ಸವಾಲಾಗಿತ್ತು. ಮಳೆಯಿಂದ ಪಟಾಕಿ ರಕ್ಷಿಸಿಕೊಳ್ಳಲು ವ್ಯಾಪಾರಸ್ಥರು ಕಷ್ಟಪಡಬೇಕಾಯಿತು.

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಹಸಿರು ಪಟಾಕಿಗೆ ಅವಕಾಶ ಕಲ್ಪಿಸಲಾಗಿದೆ. ಪಟಾಕಿಯ ಬಾಕ್ಸ್‌ಗಳಿಗೆ ₹ 400ರಿಂದ ₹ 1,500ರವರೆಗೆ ಬೆಲೆ ಇದೆ. ಹೂಕುಂಡ, ಭೂಚಕ್ರ, ರಾಕೆಟ್‌, ಸುರ್‌ಸುರ್‌ ಬತ್ತಿ ಸೇರಿ ತರಹೇವಾರಿ ಪಟಾಕಿಗಳು ಮಳಿಗೆಗಳಲ್ಲಿವೆ. ಪಟಾಕಿ ಬೆಲೆ ಕಳೆದ ವರ್ಷಕ್ಕಿಂತ ತುಸು ಹೆಚ್ಚಾಗಿದ್ದು, ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ಸಾಧ್ಯತೆ ಇದೆ. ಬಲಿಪಾಡ್ಯಮಿ ಮುಗಿಯುವವರೆಗೂ ಪಟಾಕಿ ಸದ್ದು ಕೇಳಲಿದೆ.

ಐದು ದಿನಗಳ ಕಾಲಾವಕಾಶ ಮಳಿಗೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಹಸಿರು ಪಟಾಕಿ ಬಳಸುವಂತೆ ಸೂಚನೆ

‘ನಿಷೇಧಿತ ಪಟಾಕಿ ಬಳಸಬೇಡಿ’

ಮಾಲಿನ್ಯಕಾರಕ ಪಟಾಕಿಗಳನ್ನು ನಿಷೇಧಿಸಲಾಗಿದೆ. ಇಂತಹ ಪಟಾಕಿಗಳನ್ನು ಜನರು ಬಳಕೆ ಮಾಡಬಾರದು. ಸುರಕ್ಷಿತ ಮತ್ತು ಪರಿಸರಸ್ನೇಹಿ ದೀಪಾವಳಿಗೆ ಒತ್ತು ನೀಡಬೇಕು ಎಂದು ಪೊಲೀಸ್‌ ಇಲಾಖೆ ಮನವಿ ಮಾಡಿದೆ. ಮಕ್ಕಳಿಗೆ ಪಟಾಕಿ ನೀಡುವಾಗ ಪಾಲಕರು ಜಾಗೃತರಾಗಿರಬೇಕು. ಪಟಾಕಿ ಸಿಡಿಸುವ ಮುನ್ನ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು. ಮತ್ತೊಬ್ಬರಿಗೆ ತೊಂದರೆ ಆಗದಂತೆ ಪಟಾಕಿಗಳನ್ನು ಸಿಡಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಹಬ್ಬದ ನೆಪದಲ್ಲಿ ಲಕ್ಕಿ ಡ್ರಾ ಆಮಿಷವೊಡ್ಡುವವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹಬ್ಬದಲ್ಲಿ ಆಭರಣಗಳನ್ನು ಪೂಜೆಗೆ ಇಡುವಾಗ ಹಾಗೂ ಧರಿಸಿ ಸಂಚರಿಸುವಾಗ ದುಷ್ಕರ್ಮಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.