ADVERTISEMENT

ಕನ್ನಡ ಭಾಷೆಯನ್ನು ಕಡೆಗಣಿಸದಿರಿ: ಡಿಡಿಪಿಐ ಆರ್. ಪರಮೇಶ್ವರಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 2:37 IST
Last Updated 2 ನವೆಂಬರ್ 2020, 2:37 IST
ದಾವಣಗೆರೆಯ ಸಿದ್ಧಗಂಗಾ ಶಾಲೆಯಲ್ಲಿ ಕಲಾಕುಂಚ ಸಂಸ್ಥೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿಡಿಪಿಐ ಸಿ. ಆರ್ ಪರಮೇಶ್ವರಪ್ಪ ಉದ್ಘಾಟಿಸಿದರು. –ಪ್ರಜಾವಾಣಿ ಚಿತ್ರ
ದಾವಣಗೆರೆಯ ಸಿದ್ಧಗಂಗಾ ಶಾಲೆಯಲ್ಲಿ ಕಲಾಕುಂಚ ಸಂಸ್ಥೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿಡಿಪಿಐ ಸಿ. ಆರ್ ಪರಮೇಶ್ವರಪ್ಪ ಉದ್ಘಾಟಿಸಿದರು. –ಪ್ರಜಾವಾಣಿ ಚಿತ್ರ   

ದಾವಣಗೆರೆ: ನಾವು ಸದೃಢವಾಗಿವಾಗಿರುವುದು, ಸುಲಲಿತವಾಗಿ ಮಾತನಾಡುತ್ತೇವೆ ಎಂದರೆ ಅದು ನಮ್ಮ ತಾಯಿ ಭಾಷೆ ಕನ್ನಡದಿಂದ ಮಾತ್ರ ಸಾಧ್ಯ. ಅದನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಡಿಡಿಪಿಐ ಆರ್. ಪರಮೇಶ್ವರಪ್ಪ ತಿಳಿಸಿದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಇಲ್ಲಿನ ಸಿದ್ಧಗಂಗಾ ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಕನ್ನಡ ಕೌಸ್ತುಭ’, ‘ಸರಸ್ವತಿ’ ಪುರಸ್ಕಾರ ರಾಜ್ಯ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ಎಲ್ಲಾ ಕ್ಷೇತ್ರಗಳಲ್ಲೂ ವ್ಯಾವಹಾರಿಕವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಇದ್ದು, ಕನ್ನಡದಿಂದ ಇದು ಸಾಧ್ಯವಿಲ್ಲ ಎಂಬ ಮನೋಭಾವನೆಯಿಂದ ಎಲ್ಲರೂ ಆಂಗ್ಲ ಮಾಧ್ಯಮಕ್ಕೆ ಮೊರೆ ಹೋಗುತ್ತಿದ್ದಾರೆ. ಆದರೆ ಕನ್ನಡವನ್ನು ಕಡೆಗಣಿಸಲು ಸಾಧ್ಯವಿಲ್ಲ. ಕೆಲವು ಯೂರೋಪಿಯನ್ ರಾಷ್ಟ್ರಗಳು ಇಂಗ್ಲಿಷ್ ಅನ್ನು ಇನ್ನೂ ಒಪ್ಪಿಕೊಂಡಿಲ್ಲ. ತಮ್ಮ ಭಾಷೆಯನ್ನೇ ಅಭಿವೃದ್ಧಿಪಡಿಸಿ ಉನ್ನತ ಶಿಕ್ಷಣವನ್ನು ಕೊಡುವ ಕೆಲಸ ಮಾಡುತ್ತಿವೆ’ ಎಂದರು.

ADVERTISEMENT

ಡಯಟ್ ಉಪನಿರ್ದೇಶಕ ಎಚ್.ಕೆ.ಲಿಂಗರಾಜ್, ‘ಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿ ಭಾರತದ ಮೂಲ ಬೇರುಗಳು. ಇವುಗಳಿಂದಾಗಿಯೇ ಭಾರತ ದೇಶ ಉನ್ನತ ಸ್ಥಾನಕ್ಕೆ ಬೆಳೆದಿದೆ. ದಾವಣಗೆರೆಗೆ ಹಿಂದೆ ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂಬ ಖ್ಯಾತಿ ಪಡೆದಿತ್ತು. ಆದರೆ ಈಗ ಅವೆಲ್ಲಾ ನಶಿಸಿಹೋಗಿವೆ. ಇದಕ್ಕೆ ಪರ್ಯಾಯವಾಗಿ ಗುಣಾತ್ಮಕ ಶಿಕ್ಷಣ ನೀಡುವ ಸಂಸ್ಥೆಗಳು ಬೆಳೆದಿದ್ದು, ‘ಕೇಂಬ್ರಿಡ್ಜ್ ಆಫ್ ಕರ್ನಾಟಕ’ ಎಂಬ ಹೆಸರಿನಿಂದಲೂ ಕರೆಯಬಹುದು’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ‘ಸರ್ಕಾರದಿಂದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರನ್ನು ಪುರಸ್ಕರಿಸುವ ಕೆಲಸವಾಗಬೇಕು. ಈ ಕುರಿತು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಪತ್ರ ಬರೆದಿದ್ದು, ಅವರು ಸಮ್ಮತಿ ಸೂಚಿಸಿದ್ದಾರೆ’ ಎಂದು ಹೇಳಿದರು.

ಎಲೆಬೇತೂರು ನಂದಿ ಎಂಟರ್‌ಪ್ರೈಸಸ್‌ನ ಎಂಡಿ ತೇಜಸ್ವಿನಿ ಪ್ರಕಾಶ್, ಕಲಾಕುಂಚದ ಅಧ್ಯಕ್ಷ ಕೆ.ಎಚ್. ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿ ಗಣೇಶ್‌ ಶೆಣೈ ಇದ್ದರು. ಬೇಳೂರು ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.