ತ್ಯಾವಣಿಗೆ: ‘ಹುಚ್ಚು ಹಿಡಿದಿವೆ’ ಎನ್ನಲಾದ 2–3 ನಾಯಿಗಳು ಮಕ್ಕಳೂ ಸೇರಿದಂತೆ ಹಲವರಿಗೆ ಕಚ್ಚಿರುವ ಘಟನೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದೆ.
ಗ್ರಾಮದ ಗಿಂಡೇರ ಮಹಾಂತೇಶ್ ಅವರು ಸೋಮವಾರ ದ್ವಿಚಕ್ರ ವಾಹನದಲ್ಲಿ ನಾಡ ಕಚೇರಿಗೆ ತೆರಳುತ್ತಿದ್ದಾಗ ಏಕಾಏಕಿ ನಾಯಿಯೊಂದು ಕಾಲು, ತೊಡೆಗೆ ಕಚ್ಚಿ ಅವರನ್ನು ಗಾಯಗೊಳಿಸಿದೆ.
ಈಚೆಗೆ ಕದರನಹಳ್ಳಿ ಗ್ರಾಮದ ಮನೆ ಅಂಗಳದಲ್ಲಿ ಕಸ ಗುಡಿಸುತ್ತಿದ್ದ ಬಾಲಕಿ ಮೇಲೆ ನಾಯಿಯೊಂದು ದಾಳಿ ನಡೆಸಿ ಕಾಲು, ಕೈಗೆ ಕಚ್ಚಿದೆ ಎಂದು ಅಂಗನವಾಡಿ ಶಿಕ್ಷಕಿ ತಾರಾಬಾಯಿ ತಿಳಿಸಿದರು.
‘ನಾಯಿ ಕಡಿತಕ್ಕೊಳಗಾದವರಿಗೆ ಲಸಿಕೆ ಲಭ್ಯವಿದೆ’ ಎಂದು ವೈದ್ಯಾಧಿಕಾರಿ ಸಫನ್ ಶಂಕರ್ ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಹುಚ್ಚು ಹಿಡಿದಿದೆ ಎನ್ನಲಾದ ನಾಯಿಯೊಂದನ್ನು ಯುವಕರು ಬೆನ್ನಟ್ಟಿ ಹೊಡೆದು ಸಾಯಿಸಿದ್ದಾರೆ ಎನ್ನಲಾಗಿದೆ. ಹುಚ್ಚು ನಾಯಿಗಳನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.