ADVERTISEMENT

ಕೋವಿಶೀಲ್ಡ್‌ ಬಗ್ಗೆ ಅನಗತ್ಯ ಭಯಬೇಡ

ಜಿಲ್ಲಾಧಿಕಾರಿ, ಜಿಲ್ಲಾ ವೈದ್ಯರುಗಳ ಸಲಹೆ l ದಾವಣಗೆರೆಗೆ ತಲುಪಿದ 13,500 ಮಂದಿಗೆ ವ್ಯಾಕ್ಸಿನ್‌

ಬಾಲಕೃಷ್ಣ ಪಿ.ಎಚ್‌
Published 15 ಜನವರಿ 2021, 3:42 IST
Last Updated 15 ಜನವರಿ 2021, 3:42 IST
ಕೋವಿಶೀಲ್ಡ್‌
ಕೋವಿಶೀಲ್ಡ್‌    

ದಾವಣಗೆರೆ: ಜಿಲ್ಲೆಗೆ 13,500 ಕೋವಿಶೀಲ್ಡ್‌ ಲಸಿಕೆ ತಲುಪಿದೆ. ಅವುಗಳನ್ನು ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ನೀಡಲು ಸಿದ್ಧತೆ ನಡೆದಿದೆ. ಕೋವಿಶೀಲ್ಡ್‌ನಿಂದ ಅಡ್ಡಪರಿಣಾಮಗಳು ಬೀರುವುದಿಲ್ಲ. ಯಾವುದೇ ಅನುಮಾನ, ಭಯಗಳು ಬೇಡ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳು ಲಸಿಕೆ ಸ್ವೀಕರಿಸುವವರಿಗೆ ‘ಪ್ರಜಾವಾಣಿ’ ಮೂಲಕ ಧೈರ್ಯ ತುಂಬಿದ್ದಾರೆ.

ಚಿತ್ರದುರ್ಗದಲ್ಲಿರುವ ಪ್ರಾದೇಶಿಕ ಲಸಿಕಾ ಸಂಗ್ರಹಗಾರದಿಂದ ಗುರುವಾರ ಮಧ್ಯಾಹ್ನ ಬಿಗಿ ಬಂದೋಬಸ್ತ್‌ನಲ್ಲಿ ಜಿಲ್ಲೆಗೆ ಕೋವಿಶೀಲ್ಡ್‌ ಲಸಿಕೆಗಳನ್ನು ತರಲಾಗಿದೆ. ಶ್ರೀರಾಮನಗರದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸಂಗ್ರಹಗಾರದಲ್ಲಿ ಅವುಗಳನ್ನು ಇಡಲಾಗಿದೆ. ಕೋವಿಶೀಲ್ಡ್‌ ಇಂಜೆಕ್ಷನ್ ನೀಡಲು ಜಿಲ್ಲೆಯಲ್ಲಿ 36 ಕೇಂದ್ರಗಳನ್ನು ತಯಾರು ಮಾಡಲಾಗಿತ್ತು. ಅದರಲ್ಲಿ 7 ಕೇಂದ್ರಗಳನ್ನಷ್ಟೇ ಸರ್ಕಾರ ಆಯ್ಕೆ ಮಾಡಿಕೊಂಡಿದೆ. ಜಿಲ್ಲಾ ಚಿಗಟೇರಿ ಆಸ್ಪತ್ರೆ, ಜೆಜೆಎಂಸಿ ಆಸ್ಪತ್ರೆ, ಚನ್ನಗಿರಿ, ಹರಿಹರ, ಹೊನ್ನಾಳಿ, ಜಗಳೂರು ತಾಲ್ಲೂಕು ಆಸ್ಪತ್ರೆಗಳು ಮತ್ತು ಬಿಳಿಚೋಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಷ್ಟೇ ಮೊದಲ ಹಂತದಲ್ಲಿ ವ್ಯಾಕ್ಸಿನ್‌ ನೀಡುವ ಪ್ರಕ್ರಿಯೆಗಳು ನಡೆಯಲಿವೆ.

ಶನಿವಾರ ಪ್ರಧಾನಮಂತ್ರಿಯವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾ ಕೇಂದ್ರದಲ್ಲಿ ವ್ಯಾಕ್ಸಿನ್‌ ನೀಡುವ ಪ್ರಕ್ರಿಯೆ ಉದ್ಘಾಟನೆಗೊಳ್ಳಲಿದೆ. ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಮತ್ತು ಖಾಸಗಿಯಾಗಿ ಕೆಲಸ ಮಾಡುವ 19,070 ಮಂದಿಯನ್ನು ಮೊದಲ ಹಂತದ ಫಲಾನುಭವಿಗಳು ಎಂದು ಗುರುತಿಸಲಾಗಿತ್ತು. ಅದರಲ್ಲಿ 13,500 ಮಂದಿಗೆ ನೀಡಲಾಗುತ್ತಿದೆ. ಉಳಿದವರಿಗೆ ಮತ್ತೆ ವ್ಯಾಕ್ಸಿನ್‌ ಬರಲಿದೆ. ಉದ್ಘಾಟನಾ ದಿನವಾದ ಶನಿವಾರ 100 ವ್ಯಾಕ್ಸಿನ್‌ಗಳನ್ನಷ್ಟೇ ನೀಡಲಾಗುತ್ತದೆ. ಉಳಿದವುಗಳನ್ನು ಮಂಗಳವಾರ ಮತ್ತು ಗುರುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಲಸಿಕೆ ನೀಡುವ ಕ್ರಮಗಳು

ವಿವಿಧ ಲಸಿಕೆಗಳನ್ನು ನಾಲ್ಕು ಬಗೆಯಲ್ಲಿ ನೀಡುವ ಕ್ರಮಗಳಿವೆ. ಬಾಯಿಗೆ ಲಸಿಕೆ ಹನಿ ಹಾಕುವುದು ಒಂದನೇಯದ್ದು. ಪೋಲಿಯೋ ಲಸಿಕೆ ಇದಕ್ಕೆ ಉದಾಹರಣೆ. ಇಂಟ್ರಾಡರ್ಮಲ್‌ ಅಂದರೆ ಚರ್ಮದ ಒಳಗೆ ನೀಡುವುದು ಎರಡನೇಯದ್ದು. ಬಿಸಿಜಿ ಈ ರೀತಿಯಲ್ಲಿ ನೀಡಲಾಗುತ್ತದೆ. ಸಬ್‌ಕ್ಯುಟಿನಿಯಸ್‌ ಅಂದರೆ ಚರ್ಮದ ಕೆಳಭಾಗದಲ್ಲಿ 45 ಡಿಗ್ರಿ ಕೋನದಲ್ಲಿ ನೀಡುವುದು ಮೂರನೇ ರೀತಿಯದ್ದು. ದಢಾರ, ರೇಬಿಸ್‌ಗಳಿಗೆ ನೀಡುವ ಲಸಿಕೆ ಈ ತರಹದ್ದಾಗಿದೆ. ಇಂಟ್ರಾಮಸ್ಕ್ಯುಲರ್‌ ಅಂದರೆ ಮಾಂಸ ಖಂಡದ ಒಳಗೆ ಕೊಡುವುದು ನಾಲ್ಕನೇಯದ್ದಾಗಿದೆ. ಟಿಟಿ, ಡಿಪಿಟಿಗಳು ಇದರಲ್ಲಿ ಬರುತ್ತದೆ. ಜ.16ರಿಂದ ನೀಡಲಾಗುವ ಕೋವಿಶೀಲ್ಡ್‌ ಕೂಡ ಇಂಟ್ರಾಮಸ್ಕ್ಯುಲರ್‌ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.