ಮಾಯಕೊಂಡ: ‘ಸರ್ಕಾರಿ ಸೌಲಭ್ಯಗಳು ಬೇಕು ಆದರೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳು ಕಲಿಯುವುದು ಬೇಡ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಓದುವುದಿಲ್ಲ, ಅಲ್ಲಿ ಕಲಿಸುವವರೂ ಇಲ್ಲ. ಸೌಲಭ್ಯಗಳಂತೂ ಇಲ್ಲವೇ ಇಲ್ಲ ಎನ್ನುವ ಪಾಲಕರ ಮಾತುಗಳಿಗೆ ಆನಗೋಡಿನ ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ ಹಾಗೂ ಶೈಕ್ಷಣಿಕ ಪ್ರಗತಿಯೇ ಉತ್ತರ’ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಸಮೀಪದ ಆನಗೋಡು ಗ್ರಾಮದಲ್ಲಿ ಉತ್ತರ ವಲಯದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ‘ಮಕ್ಕಳ ಕಲಿಕಾ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಅತಿ ಹೆಚ್ಚು ಖಾಸಗಿ ಶಾಲೆಗಳಿದ್ದರೂ ಈ ಸರ್ಕಾರಿ ಶಾಲೆಯಲ್ಲಿ 450 ಮಕ್ಕಳ ಹಾಜರಾತಿಯಿದ್ದು, ಎಲ್ಲ ಸರ್ಕಾರಿ ಶಾಲೆಗಳಿಗೆ ಇದು ಮಾದರಿಯಾಗಿದೆ ಎಂದರು.
ಉತ್ತಮ ಕಲಿಕಾ ಪರಿಸರ, ಪರಿಣಿತ ಶಿಕ್ಷಕರು, ಗುಣಮಟ್ಟ ಶಿಕ್ಷಣ ದೊರೆಯುತ್ತಿದ್ದು, ಪಾಲಕರು ಇಲ್ಲಿನ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ನವೋದಯ, ಮೊರಾರ್ಜಿ, ಸೈನಿಕ ಶಾಲೆ ಸೇರಿದಂತೆ ಪ್ರತಿಷ್ಠಿತ ಶಾಲೆಗಳಿಗೆ ಪ್ರತಿವರ್ಷ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಶಾಲೆಯಿಂದ 10–15 ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ. ಇಲ್ಲಿನ ಶೈಕ್ಷಣಿಕ ಗುಣಮಟ್ಟ, ಶಿಕ್ಷಕರ ಪರಿಶ್ರಮ ಇದರಿಂದ ಅರ್ಥವಾಗುತ್ತದೆ ಎಂದು ಅವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಇದನ್ನು ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಪ್ರತ್ಯೇಕ ಬಿಸಿಯೂಟ ಕೊಠಡಿ, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ಜೊತೆಗೆ ಕ್ಷೇತ್ರದಲ್ಲೇ ಮಾದರಿ ಶಾಲೆಯನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಮ್ಮ, ಉಪಾಧ್ಯಕ್ಷ ಕಲ್ಲೇಶ್, ಸದಸ್ಯರಾದ ಕರಿಬಸಪ್ಪ, ಬಸಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ, ಉಪಾಧ್ಯಕ್ಷೆ ಸವಿತಾ, ಮುಖಂಡರಾದ ನಸರುಲ್ಲಾ, ಸಿರಾಜ್, ಮುಖ್ಯ ಶಿಕ್ಷಕ ಸೋಮಶೇಖರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.