ADVERTISEMENT

ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಆರೋಪ: ಶವ ಇರಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 5:51 IST
Last Updated 6 ಜುಲೈ 2025, 5:51 IST
ವಿದ್ಯಾ
ವಿದ್ಯಾ   

ಸಂತೇಬೆನ್ನೂರು: ಸಮೀಪದ ಸೋಮಲಾಪುರ ಗ್ರಾಮದಲ್ಲಿ ಶುಕ್ರವಾರ ವಿವಾಹಿತ ಮಹಿಳೆ ಅಂತ್ಯಕ್ರಿಯೆ ನಡೆಸಲು ಬಿಡದೆ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. 

ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿ ಮನವೊಲಿಸಿದ ನಂತರ ಅಂತ್ಯಕ್ರಿಯೆ ನಡೆದಿದೆ.

ಘಟನೆ ವಿವರ: ಸೋಮಲಾಪುರ ಗ್ರಾಮದ ಶಿವು ಹಾಗೂ ದಾವಣಗೆರೆ ತಾಲ್ಲೂಕು ಅಣಜಿ ಗ್ರಾಮದ ವಿದ್ಯಾ ಅವರ ವಿವಾಹವು 6 ತಿಂಗಳ ಹಿಂದೆ ನಡೆದಿತ್ತು. ಶಿವು ಬೆಂಗಳೂರಿನಲ್ಲಿ ಪೊಲೀಸ್ ವೃತ್ತಿಯಲ್ಲಿದ್ದರು. ಜೂನ್ 30 ರಂದು ಪತ್ನಿ ವಿದ್ಯಾ ಕಾಣೆಯಾಗಿರುವ ಬಗ್ಗೆ ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ಶಿವು ದೂರು ದಾಖಲಿಸಿದ್ದರು. 

ADVERTISEMENT

ಅಂದೇ ಅರಸೀಕೆರೆ ರೈಲ್ವೇ ಹಳಿಯ ಮೇಲೆ ತೀವ್ರ ಗಾಯಗೊಂಡು ಬಿದ್ದಿದ್ದ ವಿದ್ಯಾ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದರು. 

‘ಇದು ಅಸಹಜ ಸಾವು. ಶಿವು ಹಾಗೂ ಅವರ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ’ ಎಂದು ಮೃತಳ ಪೋಷಕರು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪತಿಯ ಸ್ವಗ್ರಾಮ ಸೋಮಲಾಪುರಕ್ಕೆ ವಿದ್ಯಾ ಅವರ ಶವವನ್ನು ಅಂತ್ಯಕ್ರಿಯೆಗೆ ತರಲಾಗಿತ್ತು.

ಅಣಜಿ ಗ್ರಾಮದಿಂದ ಬಂದಿದ್ದ ಮೃತಳ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸದಂತೆ ತಡೆದು ವಿದ್ಯಾಳ ಸಾವಿಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ನಡೆಸಿದರು. 

ಆರೋಪಿ ಶಿವು ಹಾಗೂ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಅರಿತ ಸಂತೇಬೆನ್ನೂರು ಎಸ್‌ಐ ಜಗದೀಶ್ ಈಗಾಗಲೇ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮನವೊಲಿಸಿದರು. ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಟ್ಟರು. 

ಸಂತೇಬೆನ್ನೂರು ಹಾಗೂ ಬಸವಾಪಟ್ಟಣ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಬಸವಾಪಟ್ಟಣ ಎಸ್‌ಐ ಇಮ್ತಿಯಾಜ್, ಕ್ರೈಂ ಎಸ್‌ಐಗಳಾದ ಚನ್ನವೀರಪ್ಪ, ರೂಪ್ಲಿಬಾಯಿ, ಭಾರತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.