ಸಂತೇಬೆನ್ನೂರು: ನೈಸರ್ಗಿಕ ಕೃಷಿ, ಆಧುನಿಕ ತಂತ್ರಜ್ಞಾನಗಳೆರಡನ್ನೂ ಅಳವಡಿಸಿಕೊಂಡು ಪ್ರಯೋಗಶೀಲತೆಯೊಂದಿಗೆ ಅರೆ ಮಲೆನಾಡಿನಲ್ಲಿಯೂ ಡ್ರ್ಯಾಗನ್ ಫ್ರೂಟ್ ಬೆಳೆದು ‘ಸೈ’ ಎನಿಸಿಕೊಂಡಿದ್ದಾರೆ ಸಮೀಪದ ದೊಡ್ಡಬ್ಬಿಗೆರೆ ಗ್ರಾಮದ ರೈತ ಜಿ.ಕೆ.ಪ್ರಸನ್ನಕುಮಾರ್.
ಕಳೆದ ವರ್ಷ ಕೇವಲ 10 ಗುಂಟೆಯಲ್ಲಿ 1,000 ಡ್ರ್ಯಾಗನ್ ಫ್ರೂಟ್ ಸಸಿ ನೆಟ್ಟಿದ್ದ ಇವರಿಗೆ ಈ ಬಾರಿ ಭರ್ಜರಿ ಇಳುವರಿ ದೊರೆತಿದೆ. ಮೊದಲ ಕೊಯ್ಲಿನಲ್ಲಿ 6 ಕ್ವಿಂಟಾಲ್ ಹಣ್ಣು ದೊರೆತಿದೆ. ಪ್ರತಿ ಕೆಜಿಗೆ ₹ 60ರಿಂದ ₹ 80 ದರ ದೊರೆತಿದ್ದು, ಸೆಪ್ಟೆಂಬರ್ ಅಂತ್ಯದವರೆಗೆ ಇನ್ನೂ 4 ಬಾರಿ ಕೊಯ್ಲು ಬರಲಿದೆ.
‘ಟ್ರೈಲೀಸ್ ಪದ್ಧತಿಯನ್ನು ಡ್ರ್ಯಾಗನ್ ಫ್ರೂಟ್ ಬೆಳೆಗೆ ಸಜ್ಜುಗೊಳಿಸಿದ್ದೇನೆ. ಕಲ್ಲಿನ ಕಂಬಗಳನ್ನು ಹತ್ತು ಅಡಿ ಅಂತರದಲ್ಲಿ ನೆಡಲಾಗಿದೆ. ಅವುಗಳ ನಡುವೆ ತಂತಿಗಳನ್ನು ಬಳ್ಳಿಗಳ ತರಹ ಹೆಣೆಯಲಾಗಿದೆ. ಒಂದು ವರ್ಷ ನಾಲ್ಕು ತಿಂಗಳಲ್ಲಿ ಡ್ರ್ಯಾಗನ್ ಫ್ರೂಟ್ ಬಳ್ಳಿ ಹಬ್ಬಿವೆ. ಕಳ್ಳಿ ಜಾತಿಗೆ ಸೇರಿದ ಉದ್ದನೆಯ ಎಲೆಗಳು ತಂತಿ ಅವಲಂಬಿಸಿ ದಟ್ಟವಾಗಿ ಹರಡಿಕೊಂಡಿವೆ. ಅಂಚಿನಲ್ಲಿ ಸಣ್ಣ ಮುಳ್ಳುಗಳಿರುತ್ತವೆ. ಎಲೆಯ ತುದಿಯಲ್ಲಿ ಹಣ್ಣು ಹಿಡಿದಿರುತ್ತವೆ. ಅಮೆರಿಕನ್ ಬ್ಯೂಟಿ ಹಾಗೂ ಲಿಸಾ ಎಂಬ ಎರಡು ತಳಿಗಳು ಇಳುವರಿ ನೀಡುತ್ತಿವೆ’ ಎಂದು ಅವರು ಹೇಳುತ್ತಾರೆ.
‘ಜಮೀನಿನ ಸುತ್ತ ಬೆಳೆಯ ಭದ್ರತೆಗಾಗಿ ಸೋಲಾರ್ ವಿದ್ಯುತ್ ತಂತಿ ಬೇಲಿ ಅಳವಡಿಸಲಾಗಿದೆ. ಬೆಳೆಗೆ ಸಾವಯವ ಗೊಬ್ಬರ ಕೊಡಲಾಗಿದೆ. ಇದು ರೋಗರಹಿತ ಬೆಳೆ. ಅಂತೆಯೇ ಕ್ರಿಮಿನಾಶಕ ಬಳಕೆ ಇಲ್ಲ. ಬ್ರಶ್ ಕಟರ್ ಮೂಲಕ ಕಳೆ ನಿವಾರಣೆ. ಒಟ್ಟಾರೆ ₹ 2.50 ಲಕ್ಷ ವೆಚ್ಚ ತಗುಲಿದ್ದು, 20 ವರ್ಷ ನಿರಂತರ ಆದಾಯ ದೊರೆಯಲಿದೆ’ ಎಂದು ಅವರು ತಿಳಿಸುತ್ತಾರೆ.
‘ಉತ್ತಮ ದರ ಸಿಕ್ಕರೆ ಕೇವಲ 10 ಗುಂಟೆಯಲ್ಲೇ ವಾರ್ಷಿಕ ₹ 2 ಲಕ್ಷ ಆದಾಯ ಪಡೆಯಬಹುದು ಎನ್ನುವ ಅವರು, ಹೊಳಲ್ಕೆರೆಯಲ್ಲಿ ದೇಶಿ ಕೃಷಿ ಡಿಪ್ಲೋಮಾ ಓದುವ ವಿದ್ಯಾರ್ಥಿಗಳು ಪ್ರಾಂಶುಪಾಲರೊಂದಿಗೆ ನಮ್ಮ ತೋಟಕ್ಕೆ ಭೇಟಿ ನೀಡಿ ಈ ಹಣ್ಣು ಬೆಳೆಯುವ ಬಗ್ಗೆ ಮಾಹಿತಿ ಪಡೆದರು. ಕಳೆದ ವರ್ಷ ತೋಟಗಾರಿಕಾ ಇಲಾಖೆ ಸಹಕಾರದೊಂದಿಗೆ ಅತ್ಯಾಧುನಿಕ ಸ್ವಯಂ ಚಾಲಿತ ಹವಾಮಾನ ಘಟಕ ಸ್ಥಾಪಿಸಲಾಗಿದೆ. ನೀರು ನಿರ್ವಹಣೆ, ಹವಾಮಾನ ಬದಲಾವಣೆ, ರೋಗದ ಮುನ್ಸೂಚನೆ, ಗೊಬ್ಬರ ಪೂರೈಕೆ ಮಾಹಿತಿ, ವೈಜ್ಞಾನಿಕ ಬೆಳೆ ನಿರ್ವಹಣೆಗೆ ಪೂರಕವಾಗಿದೆ ಎಂದು ಅವರು ವಿವರಿಸುತ್ತಾರೆ.
ಹೊಳೆಯುವ ಗುಲಾಬಿ ಹಾಗೂ ಹಳದಿ ಬಣ್ಣ ಹೊಂದಿರುವ ಡ್ರ್ಯಾಗನ್ ಫ್ರೂಟ್ ಚಿಪ್ಪುಗಳುಳ್ಳ ಹೊರಹೊದಿಕೆ ಹೊಂದಿದೆ. ಮಚ್ಚೆಯುಳ್ಳ ಒಳಭಾಗದಲ್ಲಿ ಅತಿಸಣ್ಣಿ ಕಪ್ಪು ಬೀಜಗಳಿರುತ್ತವೆ. ತುಸು ಸಿಹಿಯೊಂದಿಗೆ ಕಿವಿ ಹಣ್ಣಿನ ಸ್ವಾದ ನೀಡುತ್ತದೆ. ಜೀವಸತ್ವಗಳು ಹಾಗೂ ನಾರಿನ ಅಂಶ ಹೊಂದಿರುವ ಈ ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಅವರು ಹೇಳುತ್ತಾರೆ.
ಚನ್ನಗಿರಿ ತಾಲ್ಲೂಕಿನಲ್ಲಿ 8 ಹೆಕ್ಟೇರ್ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲಾಗಿದೆ. ಬೆಳೆಗೆ ಸೂಕ್ತ ಮಾರ್ಗದರ್ಶನ ಅಗತ್ಯಕೆ.ಎಸ್.ಶ್ರೀಕಾಂತ್ ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿ ಚನ್ನಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.