
ದಾವಣಗೆರೆ: ಮೃತರ ಹೆಸರಿನಲ್ಲಿರುವ ಜಮೀನುಗಳನ್ನು ವಾರಸುದಾರರಿಗೆ ಖಾತೆ ಮಾಡಿಕೊಡುವ ‘ಇ–ಪೌತಿ’ ಖಾತೆ ಆಂದೋಲನ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಜಿಲ್ಲೆಯಲ್ಲಿ ಗುರುತಿಸಿದ 90,000 ಹಿಡುವಳಿಗಳಲ್ಲಿ ಶೇ 50ರಷ್ಟು ಜಮೀನುಗಳು ಮಾರ್ಚ್ ಅಂತ್ಯಕ್ಕೆ ಉತ್ತರಾಧಿಕಾರಿಗಳ ಹೆಸರಿಗೆ ಖಾತೆ ಬದಲಾವಣೆ ಆಗಬೇಕು’ ಎಂದು ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
‘ಜಿಲ್ಲೆಯಲ್ಲಿ 91,505 ಆಸ್ತಿಗಳು ಮೃತರ ಹೆಸರಿನಲ್ಲಿವೆ. ಇ– ಪೌತಿ ಖಾತೆಯಲ್ಲಿ ದಾವಣಗೆರೆ ತಾಲ್ಲೂಕಿನ ಪ್ರಗತಿ ಕಡಿಮೆ ಇದೆ. 20,636 ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಕೇವಲ 728 ಅರ್ಜಿಗಳು ಮಾತ್ರ ಭೂಮಿ ತಂತ್ರಾಂಶಕ್ಕೆ ಬಂದಿವೆ. ಆಧಾರ್ ಜೋಡಣೆ, ಒಟಿಪಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು.
‘ಸರ್ಕಾರದ ಸೂಚನೆಗಳನ್ನು ಗಾಳಿಗೆ ತೂರಿ, ಜನರನ್ನು ಕಚೇರಿಗಳಿಗೆ ಅಲೆದಾಡಿಸುವ ಪ್ರವೃತ್ತಿ ಸರಿಯಲ್ಲ. ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜಂಟಿ ಖಾತೆ ಮಾಡುವಾಗ ತಾಂತ್ರಿಕ ಸಮಸ್ಯೆ ಎದುರಾದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಕೆಲಸದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದರು.
‘ರಾಜ್ಯದಲ್ಲಿ ಅಂದಾಜು 49 ಲಕ್ಷ ಹಿಡುವಳಿಗಳು ಇಂದಿಗೂ ಮೃತರ ಹೆಸರಿನಲ್ಲೇ ಇವೆ. ಈವರೆಗೆ 11 ಲಕ್ಷ ಜಮೀನುಗಳ ಖಾತೆ ಬದಲಾವಣೆ ಮಾಡಿಕೊಡಲಾಗಿದೆ. ಜಿಲ್ಲೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ 45,000 ಹಿಡುವಳಿಗಳ ಪೌತಿ ಖಾತೆ ಆಗಬೇಕಿದೆ. ಉತ್ತಮವಾಗಿ ಕೆಲಸ ಮಾಡುವ ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸಹಾಯಕರಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ. ಕರ್ತವ್ಯಲೋಪ ಎಸಗಿದವರ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ’ ಎಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಪೋಡಿ ತ್ವರಿತಕ್ಕೆ ಸೂಚನೆ:
‘ದರ್ಖಾಸ್ತು ಮತ್ತು ಬಗರ್ ಹುಕುಂ ಅಡಿಯಲ್ಲಿ ಮಂಜೂರಾದ ಜಮೀನುಗಳು ರೈತರ ಹೆಸರಿಗೆ ಪೋಡಿ ಆಗದೇ ಉಳಿದಿವೆ. ಇದರಿಂದ ರೈತರಿಗೆ ಬ್ಯಾಂಕ್ ಸಾಲ ಪಡೆಯಲು, ಪಾಲುವಿಭಾಗ ಮಾಡಿಕೊಳ್ಳಲು, ಮಾರಾಟ ಮಾಡಲು ತೊಂದರೆಯಾಗುತ್ತಿದೆ. ಇದನ್ನು ಸರಿಪಡಿಸಲು ‘ನನ್ನ ಭೂಮಿ’ ಎಂಬ ವಿಶೇಷ ಅಭಿಯಾನ ಆರಂಭಿಸಲಾಗಿದೆ’ ಎಂದು ವಿವರಿಸಿದರು.
‘2013-2018ರ ಅವಧಿಯಲ್ಲಿ 5,840 ಪೋಡಿಗಳನ್ನು ಮಾಡಲಾಗಿತ್ತು. 2018-2023ರ ಅವಧಿಯಲ್ಲಿ 8,500 ಪೂರ್ಣಗೊಂಡಿದ್ದವು. ಕಳೆದ ಒಂದೂವರೆ ವರ್ಷದಲ್ಲಿ 1,89,300 ರೈತರ ಜಮೀನುಗಳ ಪೋಡಿ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ 2.5 ಲಕ್ಷ ರೈತರ ಜಮೀನುಗಳ ಪೋಡಿ ದುರಸ್ತಿ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ’ ಎಂದರು.
‘ಇ-ಕಚೇರಿ’ ಕಡ್ಡಾಯ:
‘ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಕಡತಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ ‘ಇ–ಕಚೇರಿ’ ವ್ಯವಸ್ಥೆ ರೂಪಿಸಲಾಗಿದೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಾಲ್ಲೂಕು ಕಚೇರಿಗಳು ‘ಇ–ಕಚೇರಿ’ಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೂ ಲ್ಯಾಪ್‌ಟಾಪ್ ವಿತರಿಸಲಾಗಿದೆ. ಪ್ರತಿಯೊಬ್ಬರೂ ‘ಇ–ಕಚೇರಿ’ಯಲ್ಲಿ ಕಾರ್ಯನಿರ್ವಹಿಸುವುದು ಕಡ್ಡಾಯ’ ಎಂದರು.
‘ಜಿಲ್ಲೆಯ 3 ನಾಡಕಚೇರಿಗಳನ್ನು ‘ಇ-ಕಚೇರಿ’ ವ್ಯಾಪ್ತಿಗೆ ತರಲಾಗಿದೆ. ಉಳಿದ ನಾಡಕಚೇರಿಗಳನ್ನು ತಾಂತ್ರಿಕವಾಗಿ ಬಲಪಡಿಸಲಾಗುತ್ತಿದೆ. ಕಡತ ವಿಲೇವಾರಿಯ ಮೇಲೆ ನಿಗಾ ಇಡಲು, ಲೋಪದೋಷಗಳು ಉಂಟಾಗದಂತೆ ಎಚ್ಚರ ವಹಿಸಲು ಇದರಿಂದ ಸಾಧ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.
ಶಾಸಕ ಕೆ.ಎಸ್. ಬಸವಂತಪ್ಪ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ‘ಧೂಡಾ’ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಜರಿದ್ದರು.
ಸರ್ವೆಗೆ ಆಧುನಿಕ ಉಪಕರಣ
‘ಜಮೀನು ಅಳತೆಗೆ ‘ರೋವರ್ಸ್’ ಎಂಬ ಆಧುನಿಕ ಉಪಕರಣಗಳನ್ನು ನೀಡಲಾಗುತ್ತಿದೆ. ಈಗಾಗಲೇ 600 ‘ರೋವರ್ಸ್’ ಖರೀದಿಸಲಾಗಿದೆ. ಶೀಘ್ರದಲ್ಲೇ 1000 ಉಪಕರಣಗಳನ್ನು ಸರ್ವೆಯರುಗಳಿಗೆ ಒದಗಿಸಲಾಗುವುದು’ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ‘ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣಗಳೇ ನ್ಯಾಯಾಲಯದಲ್ಲಿ ಹೆಚ್ಚಿವೆ. ಜಮೀನು ಅಳತೆಗೆ ಈವರೆಗೆ ಹಳೆಯ ವಿಧಾನ ಅನುಸರಿಸಲಾಗುತ್ತಿದೆ. ‘ರೋವರ್ಸ್’ ಉಪಕರಣವು ಅಳತೆಯಲ್ಲಿ ಇನ್ನಷ್ಟು ನಿಖರತೆಯನ್ನು ತರಲಿದೆ. ಅಲ್ಲದೇ ಸರ್ವೆಯರುಗಳ ಕೆಲಸದ ಒತ್ತಡ ಕಡಿಮೆ ಮಾಡಲಿದೆ. ಕೆಲಸದ ವೇಗ 3 ಪಟ್ಟು ಹೆಚ್ಚಾಗಲಿದೆ’ ಎಂದು ವಿವರಿಸಿದರು.
ಚಿತ್ರ ರಹಿತ ಆಸ್ತಿ ನೋಂದಣಿ
ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಕಾವೇರಿ ತಂತ್ರಾಂಶ 3.0’ದಲ್ಲಿ ಚಿತ್ರ ರಹಿತ (ಫೇಸ್‌ಲೆಸ್) ಆಸ್ತಿ ನೋಂದಣಿಗೆ ಚಿಂತನೆ ಮಾಡಲಾಗುತ್ತಿದೆ. ಇದು ನಂಬಲಾರ್ಹ ಮತ್ತು ಸುರಕ್ಷಿತ ಮೂಲಗಳಿಂದ ವರ್ಗಾವಣೆಯಾಗುವ ಆಸ್ತಿಗೆ ಮಾತ್ರ ಸೀಮಿತವಾಗಲಿದೆ’ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ‘ಸರ್ಕಾರಿ ಸಂಸ್ಥೆಗಳು ನಿವೇಶನ ಹಂಚಿಕೆ ಮಾಡುವಾಗ ಆಸ್ತಿಯ ನೋಂದಣಿ ಪತ್ರದಲ್ಲಿ ಖರೀದಿದಾರರ ಚಿತ್ರವಿದ್ದರೆ ಸಾಕಾಗುತ್ತದೆ. ಇಬ್ಬರು ವ್ಯಕ್ತಿಗಳ ನಡುವೆ ಮಾರಾಟ ಮತ್ತು ಖರೀದಿ ಪ್ರಕ್ರಿಯೆ ನಡೆಯುವಾಗ ಈ ವ್ಯವಸ್ಥೆ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.