ದಾವಣಗೆರೆಯ ಮಹಾನಗರ ಪಾಲಿಕೆ ಕಚೇರಿ
–ಪ್ರಜಾವಾಣಿ ಚಿತ್ರ
ದಾವಣಗೆರೆ: ಅನಧಿಕೃತ ಬಡಾವಣೆಗಳಲ್ಲಿನ ನಿವೇಶನ ಹಾಗೂ ಮನೆಗಳಿಗೆ ‘ಇ– ಆಸ್ತಿ’ ಸೃಜಿಸಿ, ‘ಬಿ’ ಖಾತಾ ನೀಡುವ ಅಭಿಯಾನವನ್ನು ರಾಜ್ಯ ಸರ್ಕಾರ ಫೆ.19ರಿಂದ ಆರಂಭಿಸಿದ್ದು, ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲೂ ಭರದಿಂದ ಸಾಗಿದೆ. ಆದರೆ, ರಾಜ್ಯದ ಯಾವುದೇ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಆಕರಿಸದ ‘ಸುಧಾರಣೆ ಶುಲ್ಕ’ವನ್ನು ಇಲ್ಲಿ ಅರ್ಜಿದಾರರಿಂದ ಪಡೆಯಲಾಗುತ್ತಿದೆ.
‘ಪ್ರತಿ ನಿವೇಶನ ಅಥವಾ ಮನೆಗೆ ‘ಬಿ’ ಖಾತಾ ನೀಡಲು ಅಭಿವೃದ್ಧಿ ಮತ್ತು ಸುಧಾರಣೆಯ ಹೆಸರಲ್ಲಿ ₹ 10,000 ಶುಲ್ಕ ಪಡೆದು ಇ–ರಸೀದಿ ನೀಡಲಾಗುತ್ತಿದೆ. ಈ ಮಾದರಿಯ ಶುಲ್ಕವನ್ನು ರಾಜ್ಯದ ಇತರ ಯಾವುದೇ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆಯಲಾಗುತ್ತಿಲ್ಲ. ಈ ಕುರಿತು ಅಧಿಕೃತ ಮಾಹಿತಿಯನ್ನೂ ನೀಡದೇ ಹೆಚ್ಚುವರಿ ಶುಲ್ಕದ ಹೆಸರಿನಲ್ಲಿ ಸುಲಿಗೆ ಮಾಡಲಾಗುತ್ತಿದೆ’ ಎಂದು ಕೆಲವು ಅರ್ಜಿದಾರರು ದೂರಿದ್ದಾರೆ.
‘ಈಚೆಗೆ ನಡೆದ ಮಹಾನಗರ ಪಾಲಿಕೆಯ ಸರ್ವ ಸದಸ್ಯರ ಸಭೆಯಲ್ಲಿ ಈ ಕುರಿತು ಠರಾವು (ನಿರ್ಧಾರ) ಹೊರಡಿಸಿ ಶುಲ್ಕದ ಮೊತ್ತವನ್ನು ₹ 10,000ಕ್ಕೆ ಹೆಚ್ಚಿಸಲಾಗಿದೆ. 2016ರಿಂದ ಈ ಶುಲ್ಕ ₹ 8,000 ಇತ್ತು’ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.
‘ರಾಜ್ಯ ಸರ್ಕಾರ ಇಂಥ ಶುಲ್ಕ ಸಂಗ್ರಹಿಸುವಂತೆ ಯಾವುದೇ ರೀತಿಯ ಆದೇಶ ಹೊರಡಿಸಿಲ್ಲ. ಸುತ್ತೋಲೆ ಮೂಲಕವೂ ಸೂಚಿಸಿಲ್ಲ. ಬದಲಿಗೆ, ಪಾಲಿಕೆಯ ಸರ್ವ ಸದಸ್ಯರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ‘ಬಿ’ ಖಾತಾಗಾಗಿ ಅರ್ಜಿ ಸಲ್ಲಿಸುವವರಿಂದ ₹ 10,000 ಶುಲ್ಕ ಪಡೆಯುವ ಕುರಿತ ಠರಾವು ಹೊರಡಿಸಲಾಗಿದೆ. ರಾಜ್ಯದ ಇತರೆಡೆ ಈ ರೀತಿಯ ಶುಲ್ಕ ಸಂಗ್ರಹವಾಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ಮಹಾನಗರ ಪಾಲಿಕೆ ಸದಸ್ಯರ 5 ವರ್ಷಗಳ ಅಧಿಕಾರಾವಧಿ ಫೆ.19ಕ್ಕೆ ಕೊನೆಗೊಂಡಿದೆ. ಅದಕ್ಕಿಂತ ಕೆಲವೇ ದಿನ ಮೊದಲು ಶುಲ್ಕ ಸಂಗ್ರಹಿಸುವ ಠರಾವು ಹೊರಡಿಸಲಾಗಿದೆ ಎಂದು ಪಾಲಿಕೆ ಮೂಲಗಳು ಹೇಳುತ್ತವೆ. ವಿಶೇಷವೆಂದರೆ ಅಂದಿನಿಂದಲೇ ‘ಬಿ’ ಖಾತಾ ಅಭಿಯಾನ ರಾಜ್ಯದಾದ್ಯಂತ ಶುರುವಾಗಿದೆ.
‘ನಗರದಲ್ಲಿ 1.10 ಲಕ್ಷ ಆಸ್ತಿಗಳಿವೆ. ಅವುಗಳಲ್ಲಿ ಕೇವಲ 80,000 ಆಸ್ತಿಗಳು ನೋಂದಣಿಯಾಗಿವೆ. ಇನ್ನುಳಿದ 30,000ಕ್ಕೂ ಅಧಿಕ ಆಸ್ತಿಗಳು ಅಕ್ರಮವಾಗಿವೆ. ಕೆಲವರು 20 ವರ್ಷಗಳಿಂದ ಅಕ್ರಮವಾಗಿ ಮನೆ ಕಟ್ಟಿಕೊಂಡು ತೆರಿಗೆಯನ್ನೇ ಕಟ್ಟಿಲ್ಲ. ಅಂಥವರು ₹ 10,000 ಅಭಿವೃದ್ಧಿ ಮತ್ತು ಸುಧಾರಣೆ ಶುಲ್ಕ ಪಾವತಿಸುತ್ತಿದ್ದಾರೆ. ರಾಜ್ಯದ ಇತರೆಡೆ ಈ ರೀತಿಯ ಶುಲ್ಕ ಇರದಿರಬಹುದು. ನಾವು ಸಂಗ್ರಹಿಸಬಾರದು ಅಂತ ಇಲ್ಲ’ ಎಂದು ಫೆ.19ರವರೆಗೆ ನಗರದ ಮೇಯರ್ ಆಗಿದ್ದ ಕೆ.ಚಮನ್‌ಸಾಬ್ ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಸಂಗ್ರಹದಿಂದ ಬಡ ಜನತೆಗೆ ಸಮಸ್ಯೆಯಾಗುತ್ತಿದೆ ಎಂದಾದರೆ ಪಾಲಿಕೆ ಆಯುಕ್ತರು ಮತ್ತು ಆಡಳಿತಾಧಿಕಾರಿ ಜೊತೆ ಚರ್ಚಿಸಿ ಶುಲ್ಕ ರದ್ದತಿಗೆ ಕೋರಲಾಗುವುದು ಎಂದು ಅವರು ಹೇಳಿದರು.
‘ಹೊಸ ಬಡಾವಣೆಯ ಪ್ರತಿ ನಿವೇಶನಕ್ಕೆ ಬಾಗಿಲು ಸಂಖ್ಯೆ ನೀಡಲು ಮಾತ್ರ ಈ ರೀತಿಯ ಶುಲ್ಕ ಸಂಗ್ರಹಿಸುವುದಾಗಿ ಈಚೆಗೆ ನಡೆದ ಸಭೆಯಲ್ಲಿ ಠರಾವು ಹೊರಡಿಸಲಾಗಿದೆ. ಬಡವರಿಗೆ ಸಹಾಯವಾಗಲೆಂದು ಸರ್ಕಾರ ‘ಬಿ’ ಖಾತಾ ನೀಡುವ ವಿಶಿಷ್ಟ ಅಭಿಯಾನ ಆರಂಭಿಸಿದೆ. ಬಡವರಿಂದ ಸಂಗ್ರಹಿಸಿರುವ ಶುಲ್ಕವನ್ನು ಮರಳಿಸಬೇಕು’ ಎಂದು 24ನೇ ವಾರ್ಡ್ ಸದಸ್ಯರಾಗಿದ್ದ ಕೆ.ಪ್ರಸನ್ನಕುಮಾರ್ ಆಗ್ರಹಿಸಿದರು.
‘ಬಿ’ ಖಾತಾ ನೀಡಲಾದ ನಿವೇಶನವನ್ನು ಮಾರಾಟ ಮಾಡಲು ಮಾತ್ರ ಅವಕಾಶ ದೊರೆಯುತ್ತಿದೆ. ಬಡಜನರು ಅಲ್ಲಿ ಮನೆ ಕಟ್ಟಿಕೊಳ್ಳಲು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಗೃಹಸಾಲ ಸೌಲಭ್ಯ ದೊರಕಿಸಿಕೊಡಲು ಸರ್ಕಾರ ಕ್ರಮ ಕೈಗೊಳ್ಳಬೇಕು.–ಕೆ.ಪ್ರಸನ್ನಕುಮಾರ್, ಮಾಜಿ ಸದಸ್ಯ ಮಹಾನಗರ ಪಾಲಿಕೆ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.