ADVERTISEMENT

ಆರ್ಥಿಕ ಅಸಮಾನತೆ ದೇಶಕ್ಕೆ ಅಪಾಯ: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಎಂ. ಬಿದರಿ

‘ಕರ್ನಾಟಕದ ಉನ್ನತ ಶಿಕ್ಷಣದ ಪ್ರಸ್ತುತ ಸ್ಥಿತಿಗತಿ ಮತ್ತು ಭವಿಷ್ಯದ ತಂತ್ರಗಳು’ ವಿಚಾರ ಸಂಕಿರಣದಲ್ಲಿ ಶಂಕರ ಬಿದರಿ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 15:28 IST
Last Updated 29 ಫೆಬ್ರುವರಿ 2020, 15:28 IST
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಎಂ. ಬಿದರಿ ಅವರನ್ನು ಸನ್ಮಾನಿಸಲಾಯಿತು
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಎಂ. ಬಿದರಿ ಅವರನ್ನು ಸನ್ಮಾನಿಸಲಾಯಿತು   

ದಾವಣಗೆರೆ: ಉತ್ಪಾದಕತೆ ಮತ್ತು ಬಳಕೆಗೆ ಸಂಬಂಧಿಸಿದ ಆರ್ಥಿಕ, ಸಾಮಾಜಿಕ ಕಂದಕವನ್ನು ನಿವಾರಿಸದಿದ್ದರೆ ಭವಿಷ್ಯದಲ್ಲಿ ದೇಶಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಎಂ. ಬಿದರಿ ಆತಂಕ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯಿಂದ ಶನಿವಾರ ವಿಶ್ವವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ‘ಕರ್ನಾಟಕದ ಉನ್ನತ ಶಿಕ್ಷಣದ ಪ್ರಸ್ತುತ ಸ್ಥಿತಿಗತಿ ಮತ್ತು ಭವಿಷ್ಯದ ತಂತ್ರಗಳು’ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ 6 ಮಹಾನಗರಗಳಿಂದ ಶೇ 82ರಷ್ಟು ಆದಾಯ ಬರುತ್ತಿದೆ. ಉಳಿದ ಶೇ 18ರಷ್ಟು ಆದಾಯ ಕೃಷಿ ಸೇರಿ ಇತರ ಉತ್ಪಾದಕ ವಲಯಗಳಿಂದ ಬರುತ್ತಿದೆ. ಇದೇ ಎಲ್ಲ ಆರ್ಥಿಕ ಅವ್ಯವಸ್ಥೆ, ಸಾಮಾಜಿಕ ಹಿನ್ನಡೆಗೆ ಕಾರಣವಾಗುತ್ತಿದೆ. ರಾಜಕೀಯ ಇಚ್ಛಾಶಕ್ತಿ, ಪ್ರಾಮಾಣಿಕತೆ, ಸೇವಾ ಬದ್ಧತೆಗಳಿಂದ ಮಾತ್ರ ದೇಶವನ್ನು ಅಪಾಯದಿಂದ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ADVERTISEMENT

ರಾಜ್ಯದ ಅಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಕರು ಸೇರಿದಂತೆ ಎಲ್ಲರೂ ಕೇವಲ 10 ವರ್ಷ ಪ್ರಾಮಾಣಿಕತೆ, ಸೇವಾ ಬದ್ಧತೆ, ಕರ್ತವ್ಯ ನಿಷ್ಠೆ, ನೈತಿಕ ಪ್ರಜ್ಞೆ, ಸಾಮಾಜಿಕ ಕಳಕಳಿ ಮತ್ತು ಅಭಿವೃದ್ಧಿ ಪರಚಿಂತನೆಯಿಂದ ಕೆಲಸ ಮಾಡಿದರೆ ಇಡೀ ಜಗತ್ತಿಗೆ ಮಾದರಿಯಾಗುವಂತೆ ರಾಜ್ಯವನ್ನು ಪರಿವರ್ತಿಸಬಹುದು. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಇರುವ ಎಲ್ಲ ರೀತಿಯ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಎಸ್.ಕೆ.ಸೈದಾಪುರ ದಿಕ್ಸೂಚಿ ಭಾಷಣ ಮಾಡಿ, ‘ಭವಿಷ್ಯದ ಶಿಕ್ಷಣವು ಸೃಜನಶೀಲ ಮತ್ತು ಆವಿಷ್ಕಾರಗಳನ್ನು ಮಾತ್ರ ಅವಲಂಬಿಸಿದೆ. ಕೌಶಲಯುಕ್ತ ಅಧ್ಯಯನ, ಅಧ್ಯಾಪನದಿಂದ ಶಿಕ್ಷಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ಮಾತನಾಡಿ, ‘ಆರ್ಥಿಕ, ಸಾಮಾಜಿಕ ಹಿನ್ನಡೆಗೆ ಸಂಪನ್ಮೂಲಗಳ ಸದ್ಬಳಕೆಯ ವೈಫಲ್ಯ ಒಂದೆಡೆಯಾದರೆ, ಸೇವಾ ಬದ್ಧತೆಯೂ ಇನ್ನೊಂದು ಕಾರಣ. ನಮ್ಮಲ್ಲಿ ನಿಷ್ಠೆ, ಬದ್ಧತೆ, ಪ್ರಾಮಾಣಿಕತೆ ಮನೋಭಾವ ಬರುವವರೆಗೆ ಏಳಿಗೆ ಸಾಧ್ಯವಿಲ್ಲ’ ಎಂದು ಹೇಳಿದರು.

ವೇದಿಕೆಯ ಅಧ್ಯಕ್ಷ, ನಿವೃತ್ತ ಕುಲಪತಿ ಡಾ.ಆರ್.ಎನ್. ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಪ್ರೊ.ಎಸ್.ಎಂ.ಗೋಪಿನಾಥ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಗಾಯತ್ರಿ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.