
ದಾವಣಗೆರೆ: ‘ಬದಲಾದ ಕಾಲಕ್ಕೆ ತಕ್ಕಂತೆ ಎಂಜಿನಿಯರುಗಳು ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಸ್ಪರ್ಧಾತ್ಮಕತೆ, ಪ್ರಾಮಾಣಿಕತೆ ರೂಢಿಸಿಕೊಳ್ಳಬೇಕು. ಗುಣಮಟ್ಟ ಹಾಗೂ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳಬಾರದು’ ಎಂದು ಬೆಂಗಳೂರಿನ ಫಾಸ್‌ರಾಕ್ ಕೆಮಿಕಲ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ವಾಮದೇವ ಜಿ.ಬಿ. ಅಭಿಪ್ರಾಯಪಟ್ಟರು.
ಇಲ್ಲಿನ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ, ‘ಸವಿ ನೆನಪು’ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಿಐಇಟಿ ಕಾಲೇಜಿನಲ್ಲಿ ಓದಿ ಹೊರಬಂದ ಪದವೀಧರರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಗಳೂರು, ಮುಂಬೈನಂಥ ಮಹಾನಗರಗಳಲ್ಲಿ ವಿಮಾನ ನಿಲ್ದಾಣ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಹೇಳಿದರು.
‘ಹೊಸ ತಂತ್ರಜ್ಞಾನ ಬಳಸಿಕೊಂಡು ಸಂಶೋಧನೆ ಕೈಗೊಳ್ಳಬೇಕು. ಅವುಗಳ ಫಲಿತಾಂಶವು ಜನರ ಬದುಕನ್ನು ಸುಗಮಗೊಳಿಸುವಂತೆ ಇರಬೇಕು. ಸಮಸ್ಯೆಗಳಿಗೆ ಸ್ಪಂದಿಸಬೇಕು. ವಿದ್ಯಾಭ್ಯಾಸ ಮಾಡಿದ ಸಂಸ್ಥೆಗೆ ಹಳೆಯ ವಿದ್ಯಾರ್ಥಿಗಳು ಕೊಡುಗೆ ನೀಡಬೇಕು. ಸಿಎಸ್‌ಆರ್ ನಿಧಿಯ ಮೂಲಕ ಉಪಕರಣಗಳ ಖರೀದಿಗೆ, ಸಂಶೋಧನಾ ಯೋಜನೆಗಳಿಗೆ ಕೊಡುಗೆ ನೀಡಬೇಕು’ ಎಂದು ಸಲಹೆ ನೀಡಿದರು.
‘ಶೈಕ್ಷಣಿಕ ಮತ್ತು ಉದ್ಯಮ ವಲಯದ ನಡುವಿನ ಅಂತರ ಕಡಿಮೆಯಾಗಬೇಕು. ಕೈಗಾರಿಕೆಗಳ ಅಗತ್ಯಕೆ ತಕ್ಕಂತೆ ಎಂಜಿನಿಯರುಗಳು ಸಿದ್ಧವಾಗಬೇಕು’ ಎಂದರು.
‘ಹಳೆಯ ವಿದ್ಯಾರ್ಥಿಗಳು ಈಗ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಸಂಪರ್ಕ ಕಲ್ಪಿಸಬೇಕು’ ಎಂದು ಹಳೆಯ ವಿದ್ಯಾರ್ಥಿ ಸಂಘದ ಡೀನ್ ಡಾ.ಕೆ.ಸಿ. ದೇವೇಂದ್ರಪ್ಪ ಮನವಿ ಮಾಡಿದರು.
ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷ್ಭೇಂದ್ರಪ್ಪ, ಪ್ರಾಚಾರ್ಯ ಎಚ್.ಬಿ. ಅರವಿಂದ್, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಂ.ಸಿ. ಪಟೇಲ್, ಡಾ. ಜಿ. ಮಾನವೇಂದ್ರ, ಡಾ.ಎಸ್. ಸುರೇಶ್ ಪಾಲ್ಗೊಂಡಿದ್ದರು. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ನಿರ್ಮಲಾ ಸಿ.ಆರ್. ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.