ದಾವಣಗೆರೆಯ ಚಾಮರಾಜಪೇಟೆ ವೃತ್ತದ ಬಳಿ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಬಾವುಟಗಳನ್ನು ಹಿಡಿದು ಹೆಜ್ಜೆ ಹಾಕಿದ ಮುಸ್ಲಿಮರು
ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ: ಶಾಂತಿ ಮತ್ತು ಸೌಹಾರ್ದದ ಪ್ರತೀಕವಾದ ಈದ್ ಮಿಲಾದ್ ಹಬ್ಬವನ್ನು ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಇಸ್ಲಾಂ ಧರ್ಮದ ಪ್ರವರ್ತಕ ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನದ ಅಂಗವಾಗಿ ಈ ಹಬ್ಬ ಆಚರಿಸಲಾಗುತ್ತದೆ. ಮೆರವಣಿಗೆಯ ಬಳಿಕ ಮಾಗನಹಳ್ಳಿ ರಸ್ತೆಯ ಮಿಲಾದ್ ಮೈದಾನದಲ್ಲಿ ಬೃಹತ್ ಧಾರ್ಮಿಕ ಸಭೆ ನಡೆಯಿತು.
ಈದ್ ಮಿಲಾದ್ ಅಂಗವಾಗಿ ಮಸೀದಿ, ದರ್ಗಾ, ಮನೆ ಹಾಗೂ ಅಂಗಡಿಗಳನ್ನು ಸಿಂಗರಿಸಲಾಗಿತ್ತು. ಮುಸ್ಲಿಂ ಸಮುದಾಯ ಹೆಚ್ಚಾಗಿರುವ ಪ್ರದೇಶದ ರಸ್ತೆಗಳು ವಿದ್ಯುತ್ ದೀಪಾಲಂಕಾರದಲ್ಲಿ ಕಂಗೊಳಿಸಿದವು. ಮೆಕ್ಕಾ ಮಸೀದಿಯ ಚಿತ್ರವುಳ್ಳ ಧ್ವಜ (ಚಾಂದ್), ಹಸಿರು ಮತ್ತು ಬಿಳಿ ಬಣ್ಣದ ಬಂಟಿಂಗ್ಸ್‌ಗಳು ಎಲ್ಲೆಡೆ ರಾರಾಜಿಸಿದವು.
ಪ್ರವಾದಿ ಮುಹಮ್ಮದ್ ಪೈಗಂಬರರ ಜನ್ಮದಿನ ಶುಕ್ರವಾರ ಬಂದಿದ್ದು ಸಂಭ್ರಮವನ್ನು ಹೆಚ್ಚಿಸಿತ್ತು. ಹಬ್ಬಕ್ಕೆ ವಾರದಿಂದ ಸಿದ್ಧತೆ ನಡೆಸಿದ್ದ ಮುಸ್ಲಿಮರು ಬೆಳಿಗ್ಗೆಯ ಪ್ರಾರ್ಥನೆ ಮುಗಿಸಿ ಉತ್ಸಾಹದಿಂದ ಸಜ್ಜಾದರು. ಮಧ್ಯಾಹ್ನ ಮಸೀದಿಗೆ ಭೇಟಿ ನೀಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೆರವಣಿಗೆಯ ಅಂಗವಾಗಿ ಶುಕ್ರವಾರದ ಪ್ರಾರ್ಥನೆ ಒಂದು ಗಂಟೆ ಮೊದಲೇ ಮುಗಿಯಿತು. ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬಡವರಿಗೆ ದಾನ, ರೋಗಿಗಳಿಗೆ ಹಣ್ಣು ವಿತರಿಸಿದರು. ಮನೆಗೆ ಮರಳಿ ಹಬ್ಬದೂಟ ಸವಿದು ಮೆರವಣಿಗೆಗೆ ಸಜ್ಜಾದರು.
ಆಜಾದ್ ನಗರದ ಮದೀನಾ ವೃತ್ತದ ಮಿಲಾದ್ ಸಮಿತಿಯ ಮುಖ್ಯ ಕಚೇರಿಯ ಬಳಿ ಜಮಾಯಿಸಿದರು. ಮೌಲಾನಾ ಮುಫ್ತಿ ರಿಜ್ವಾನ್ ಸಾಬ್ ಹಾಗೂ ಮೌಲಾನ ಇಲಿಯಾಸ್ ಸಾಬ್ ಅವರ ಸಮ್ಮುಖದಲ್ಲಿ ಮೆರವಣಿಗೆ ಆರಂಭವಾಯಿತು. ಚಾಮರಾಜ ಪೇಟೆ, ಮಂಡಿಪೇಟೆ, ಬಾರ್‌ಲೈನ್ ರಸ್ತೆ, ರೈಲ್ವೆ ಗೇಟ್, ಅರುಣಾ ಚಿತ್ರಮಂದಿರ, ಪಿ.ಬಿ. ರಸ್ತೆ, ಗಾಂಧಿ ವೃತ್ತ, ಕೆ.ಆರ್.ರಸ್ತೆ ಮೂಲಕ ಮಾಗನಹಳ್ಳಿ ರಸ್ತೆಯ ಮಿಲಾದ್ ಮೈದಾನ ತಲುಪಿತು. ಮಧ್ಯಾಹ್ನ 2.30ಕ್ಕೆ ಆರಂಭವಾದ ಮೆರವಣಿಗೆ ಮಿಲಾದ್ ಮೈದಾನ ತಲುಪುವ ಹೊತ್ತಿಗೆ ಸೂರ್ಯಾಸ್ತವಾಗಿತ್ತು.
ಮೆರವಣಿಗೆಯಲ್ಲಿ ಮೆಕ್ಕಾ, ಮದೀನಾ ಗುಂಬಜ್‌ಗಳ ಪ್ರತಿಕೃತಿಗಳು ಕಣ್ಮನ ಸೆಳೆದವು. ಭಕ್ತರು ಗುಂಪು ಗುಂಪಾಗಿ ಸಾಗಿ ಪೈಗಂಬರ್ ಗುಣಗಾನ ಮಾಡುತ್ತ, ಘೋಷಣೆಗಳನ್ನು ಮೊಳಗಿಸಿದರು. ಕಿವಿಗಡಚಿಕ್ಕುವ ಡಿ.ಜೆ.ಯ ಅನುಪಸ್ಥಿತಿಯಲ್ಲಿ ಹಾಡುತ್ತ– ಕುಣಿಯುತ್ತ ಹೆಜ್ಜೆ ಹಾಕಿದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಂಡಿಪೇಟೆಯ ಬಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಶುಭಕೋರಿದರು.
ವಿನೋಬನಗರ, ನಿಟುವಳ್ಳಿ, ಕೆಟಿಜೆ ನಗರ ಸೇರಿದಂತೆ ವಿವಿಧೆಡೆಯಿಂದ ಹೊರಟ ಮೆರವಣಿಗೆಗಳು ಸಂಜೆಯ ಹೊತ್ತಿಗೆ ಮಿಲಾದ್ ಮೈದಾನ ತಲುಪಿದವು. ಮಾರ್ಗ ಮಧ್ಯದ ಪ್ರಮುಖ ವೃತ್ತ, ಸ್ಥಳಗಳಲ್ಲಿ ಹಣ್ಣಿನ ಜ್ಯೂಸ್, ನೀರು ವಿತರಿಸಲಾಯಿತು. ರಸ್ತೆ ಬದಿಯಲ್ಲಿ ನಿಂತಿದ್ದ ಮಹಿಳೆಯರು ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಮೆರವಣಿಗೆಯ ಅಂಗವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾ, ಡ್ರೋನ್ ಕ್ಯಾಮೆರಾ ಮೂಲಕ ಮೆರವಣಿಗೆಯ ಮೇಲೆ ನಿಗಾ ಇಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಮಿಲಾದ್ ಸಮಿತಿ ಅಧ್ಯಕ್ಷ ಎ.ಬಿ.ಅಬೀಬ್ ಉಲ್ಲಾ, ಕಾರ್ಯದರ್ಶಿ ನಜೀರ್ ಅಹಮ್ಮದ್ ಹಾಜರಿದ್ದರು.
ದಾವಣಗೆರೆಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಶುಕ್ರವಾರ ನಡೆದ ಮೆರವಣಿಗೆಯಲ್ಲಿ ಗಮನ ಸೆಳೆದ ಮಕ್ಕಳು
ದಾವಣಗೆರೆಯ ಚಾಮರಾಜಪೇಟೆಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಮೆರವಣಿಗೆ
ದಾವಣಗೆರೆಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಮಸೀದಿ ಗುಂಬಜ್ ಹಾಗೂ ವಿವಿಧ ಸ್ತಬ್ದಚಿತ್ರಗಳು ಸಾಗಿದವು
ದಾವಣಗೆರೆಯಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ನಡೆದ ಮೆರವಣಿಗೆ ವೇಳೆ ಗಾಂದಿ ವೃತ್ತದ ಬಳಿ ಜಮಾಯಿಸಿದ್ದ ಜನಸ್ತೋಮ
ಮೆರವಣಿಗೆಯನ್ನು ಶಿಸ್ತುಬದ್ಧವಾಗಿ ಆಯೋಜಿಸಲಾಗಿತ್ತು. ಮಾದಕ ವಸ್ತುಗಳ ಅಪಾಯದ ಕುರಿತು ಜಾಗೃತಿ ಮೂಡಿಸಲು ಒತ್ತು ನೀಡಲಾಯಿತುಸೈಯದ್ ಜಬಿವುಲ್ಲಾ ರಬ್ಜಿ ಖಜಾಂಚಿ ಮಿಲಾದ್ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.