
ದಾವಣಗೆರೆ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ದಿನ ಹಾಗೂ ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಏಕತಾ ನಡಿಗೆ’ಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್) ವಿದ್ಯಾರ್ಥಿಗಳು ಹೆಜ್ಜೆಹಾಕಿದರು.
ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದ ಅತಿಥಿಗೃಹದಿಂದ ಆರಂಭವಾದ ನಡಿಗೆ ಮಾನವಿಕ ನಿಕಾಯದ ಕಟ್ಟಡದವರೆಗೆ ನಡೆಯಿತು. ದೇಶಭಕ್ತಿ ಹಾಗೂ ಸರ್ದಾರ್ ವಲ್ಲಭಬಾಯಿ ಪರವಾದ ಘೋಷಣೆಗಳು ಮೊಳಗಿದವು. ನಾಯಕತ್ವ ತರಬೇತಿ ಶಿಬಿರದ ವಿಶೇಷ ಉಪನ್ಯಾಸಕ್ಕೂ ಮುನ್ನ ಏಕತಾ ನಡಿಗೆ ನಡೆಯಿತು.
‘ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ‘ಏಕತಾ ನಡಿಗೆ’ ನಡೆಸಲಾಗಿದೆ’ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಅಶೋಕ ಕುಮಾರ ಪಾಳೇದ ಮಾಹಿತಿ ನೀಡಿದರು.
‘ಮಹಾತ್ಮ ಗಾಂಧೀಜಿಯವರ ಗ್ರಾಮಾಭಿವೃದ್ಧಿ ಪರಿಕಲ್ಪನೆಯ ಆಧಾರದ ಮೇರೆಗೆ ರೂಪುಗೊಂಡ ರಾಷ್ಟ್ರೀಯ ಸೇವಾ ಯೋಜನೆ ಉತ್ತಮ ನಾಗರಿಕರನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ನೂರಕ್ಕೂ ಹೆಚ್ಚು ಕಾರ್ಯಗಳೊಂದಿಗೆ ನಾಯಕತ್ವ ಗುಣ ಬೆಳೆಸುವ ಪ್ರಯತ್ನದಲ್ಲಿದೆ’ ಎಂದು ಅಭಿಪ್ರಾಯಪಟ್ಟರು.
‘ವಿದ್ಯಾರ್ಥಿಗಳನ್ನು ಪರಿಪೂರ್ಣ ನಾಗರಿಕರನ್ನಾಗಿ ಮಾಡಲು ಸೇವಾ ಯೋಜನೆ ಉತ್ತಮ ತಾಣ. ಪಠ್ಯೇತರ ಚಟುವಟಿಕೆಗಳಿಗೆ ಇದೊಂದು ವಿಸ್ತೃತ ವೇದಿಕೆ. ಸೇವಾ ಮನೋಭಾವ, ದೇಶಾಭಿಮಾನ, ಸಾಮಾಜಿಕ ಕಳಕಳಿ, ಪರಿಸರ ಕಾಳಜಿಯನ್ನು ಮೂಡಿಸುತ್ತದೆ’ ಎಂದರು.
‘ಪ್ರಜಾವಾಣಿ’ ಬ್ಯೂರೋ ಮುಖ್ಯಸ್ಥ ಸಿದ್ದಯ್ಯ ಹಿರೇಮಠ, ‘ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರೂ ನಾಯಕರಾಗಿ ಬೆಳೆಯಲು ಸಾಧ್ಯವಾಗಲಿಲ್ಲ. ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಸೇರಿ ಕೆಲವರು ಮಾತ್ರ ನಾಯಕರಾಗಿ ರೂಪುಗೊಂಡರು. ಭಾರತದ ಒಕ್ಕೂಟ ವ್ಯವಸ್ಥೆ ಬಲಪಡಿಸಿದ ಪಟೇಲ್ ಅವರ ಕಾರ್ಯ ಅವಿಸ್ಮರಣೀಯ’ ಎಂದರು.
‘ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ವಿದ್ಯಾರ್ಥಿಗಳು ಸಮೂಹ ಮಾಧ್ಯಮದ ಒಡನಾಟ ಬೆಳೆಸಿಕೊಳ್ಳಬೇಕು. ಪತ್ರಿಕೆ, ನಿಯತಕಾಲಿಕೆಗಳನ್ನು ಅಧ್ಯಯನ ಮಾಡಿ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮೊಬೈಲ್ ಫೋನ್ ಬಳಕೆ ಕೂಡ ಅಧ್ಯಯನಕ್ಕೆ ಪೂರಕವಾಗಿರಬೇಕು’ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡೆಲ್ ಅಧಿಕಾರಿ ಎಚ್.ಆರ್. ತಿಪ್ಪೇಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.