ADVERTISEMENT

ವಿದ್ಯುತ್‍ ಅವಘಡ: ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 5:25 IST
Last Updated 30 ನವೆಂಬರ್ 2020, 5:25 IST

ಹರಿಹರ: ಇಲ್ಲಿನಕೇಶವ ನಗರದಲ್ಲಿ ಬೆಸ್ಕಾಂ ಇಲಾಖೆಯ ವಿದ್ಯುತ್ ಕಂಬಗಳ ಬದಲಿಸುವ ಕಾಮಗಾರಿ ಸಂದರ್ಭ ಆಕಸ್ಮಿಕವಾಗಿ ವಿದ್ಯುತ್‍ ಪ್ರವಹಿಸಿ ಗುತ್ತಿಗೆ ಆಧಾರಿತ ಕಾರ್ಮಿಕರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ತಾಲ್ಲೂಕಿನ ಬೆಳ್ಳೂಡಿ ಗ್ರಾಮದ ಮಾರುತಿ (24) ಮೃತಪಟ್ಟವರು. ಮಹೇಶ್‍ (34) ಗಾಯಗೊಂಡವರು.

ಕೇಶವ ನಗರದ 2ನೇ ಮೇನ್ 3ನೇ ಕ್ರಾಸ್‌ನಲ್ಲಿ 3-4 ದಿನಗಳಿಂದ ಬೆಸ್ಕಾಂ ಇಲಾಖೆಯಿದ ವಿದ್ಯುತ್ ಕಂಬಗಳ ಬದಲಾವಣೆ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿಯನ್ನು ಗದಗಿನ ಅಮಾನ್‍ ಸಂಸ್ಥೆ ನಿರ್ವಹಿಸುತ್ತಿತ್ತು. ನಿತ್ಯದಂತೆ ಕಾಮಗಾರಿ ನಿರ್ವಹಿಸುತ್ತಿದ್ದಾಗ ಭಾನುವಾರ ಮಧ್ಯಾಹ್ನ ಆಕಸ್ಮಿಕವಾಗಿ ವಿದ್ಯುತ್‍ ಪ್ರವಹಿಸಿದೆ. ಕಾಮಗಾರಿ ಮಾಡುವ ಸಂದರ್ಭ ಅಗತ್ಯ ಸುರಕ್ಷತಾ ಪರಿಕರಗಳನ್ನು ಬಳಸದ ಕಾರಣ ಕಂಬದ ಮೇಲಿದ್ದ ಇಬ್ಬರು ಕಾರ್ಮಿಕರಿಗೆ ವಿದ್ಯುತ್‍ ಶಾಕ್‍ ತಗುಲಿ ಆಘಾತಕ್ಕೀಡಾಗಿದ್ದಾರೆ.

ADVERTISEMENT

ಗುತ್ತಿಗೆ ಸಂಸ್ಥೆ ಹಾಗೂ ಬೆಸ್ಕಾಂ ಸಿಬ್ಬಂದಿ ಅಪಘಾತಕ್ಕೀಡಾದ ಕಾರ್ಮಿಕನ್ನು ಕೆಳಗಿಳಿಸಿದರೂ ಆ ವೇಳೆಗೆ ಮಾರುತಿ ಮೃತಪಟ್ಟಿದ್ದಾರೆ. ಮಹೇಶ್‍ ತೀವ್ರ ಅಘಾತಕ್ಕೊಳಗಾಗಿದ್ದು, ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ.

ಬೆಸ್ಕಾಂ ಸಹಾಯಕ ಎಂಜಿನಿಯರ್ ರಾಘವೇಂದ್ರ ಮಾತನಾಡಿ, ‘ಕಾಮಗಾರಿ ನಡೆಸಲು ವಿದ್ಯುತ್‍ ಸ್ಥಗಿತಗೊಳಿಸಲಾಗಿತ್ತು. ಯಾವ ಮೂಲದಿಂದ ವಿದ್ಯುತ್‍ ಸಂಚಾರವಾಗಿದೆ ಎಂಬ ಬಗ್ಗೆ ತಾಂತ್ರಿಕ ತನಿಖೆ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ನಗರಠಾಣೆ ಪೊಲೀಸರು ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.