ADVERTISEMENT

ದಾವಣಗೆರೆ: ನಗರದಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಮಂಡಕ್ಕಿ, ಉಪ್ಪು, ಕರಿಮೆಣಸುಗಳನ್ನು ಅರ್ಪಿಸಿ ಸಾಮರಸ್ಯ ಸಾರಿದ ಹಿಂದೂ ಮತ್ತು ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:04 IST
Last Updated 10 ಆಗಸ್ಟ್ 2022, 4:04 IST
ಮೊಹರಂ ಕಡೆಯ ದಿನದ ಅಂಗವಾಗಿ ಮಂಗಳವಾರ ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಹಿಂದೂ ಹಾಗೂ ಮುಸ್ಲಿಮರು ಮೆರವಣಿಗೆ ನಡೆಸಿದರು (ಎಡಚಿತ್ರ). ದಾವಣಗೆರೆಯ ಕೆಟಿಜೆ ನಗರದಲ್ಲಿ ಮೊಹರಂ ಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್
ಮೊಹರಂ ಕಡೆಯ ದಿನದ ಅಂಗವಾಗಿ ಮಂಗಳವಾರ ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಹಿಂದೂ ಹಾಗೂ ಮುಸ್ಲಿಮರು ಮೆರವಣಿಗೆ ನಡೆಸಿದರು (ಎಡಚಿತ್ರ). ದಾವಣಗೆರೆಯ ಕೆಟಿಜೆ ನಗರದಲ್ಲಿ ಮೊಹರಂ ಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್   

ದಾವಣಗೆರೆ: ಹಿಂದೂ– ಮುಸ್ಲಿಂ ಭಾವೈಕ್ಯದ ಸಂಕೇತವಾದ ಮೊಹರಂ ಹಬ್ಬವನ್ನು ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು.

ಮೊಹರಂನ ಒಂಬತ್ತನೇ ದಿನವಾದ ಸೋಮವಾರ ರಾತ್ರಿ ಹಲವೆಡೆ ಅಗ್ನಿಕುಂಡ ಹಾಕಿ ಆಲಿ ದೇವರ ಅಲಾವಿ (ಪಂಜಾ) ಹೊತ್ತವರು ಕೆಂಡವನ್ನು ಹಾಯ್ದು ಹರಕೆ ತೀರಿಸಿದರು.

ಕೆಟಿಜೆ ನಗರ, ಹೊಂಡದ ವೃತ್ತ, ಬಂಬೂಬಜಾರ್, ಅಹಮದ್‌ನಗರ, ಬಾಷಾನಗರ ಸೇರಿ 48ಕ್ಕೂ ಹೆಚ್ಚು ಕಡೆಗಳಲ್ಲಿ ಪಂಜಾಗಳನ್ನು ಸ್ಥಾಪನೆ ಮಾಡಲಾಗಿತ್ತು. ಎಲ್ಲಾ ಕಡೆ ಧಾರ್ಮಿಕ ಗುರುಗಳಿಂದ ಪ್ರವಚನಗಳು ನಡೆದವು. ನಗರದ ಅನೇಕ ಕಡೆಗಳಲ್ಲಿ ಸಿಹಿ ಮತ್ತು ಷರಬತ್ತು ಹಂಚಲಾಯಿತು.

ADVERTISEMENT

ಆಲಿ ದೇವರ ಅಲಾವಿಗಳು ಮಂಗಳವಾರ ಬೆಳಿಗ್ಗೆ ವಿವಿಧ ಓಣಿಗಳಲ್ಲಿ ಸಂಚರಿಸಿದವು. ತಮ್ಮ ಮನೆ ಎದುರಿಗೆ ಬಂದ ದೇವರನ್ನು ಹಿಂದೂ ಮತ್ತು ಮುಸ್ಲಿಮರು ಸ್ವಾಗತಿಸಿದರು. ಹರಕೆ ಹೊತ್ತ ಭಕ್ತರು ಮಂಡಕ್ಕಿ, ಉಪ್ಪು, ಕರಿಮೆಣಸುಗಳನ್ನು ಅರ್ಪಿಸಿ ಪೂಜೆ ನೆರವೇರಿಸಿ ಸಾಮರಸ್ಯಕ್ಕೆ ಸಾಕ್ಷಿಯಾದರು. ಕೆಲವು ಕಡೆ, ಮಕ್ಕಳು, ಮಹಿಳೆಯರು ಅಲಾವಿ ಬಳಿ ಹರಕೆ ತೀರಿಸಿದರು.

‘ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಝರತ್ ಇಮಾಮ್ ಹಸನ್ ಹಾಗೂ ಹಝರತ್ ಇಮಾಮ್ ಹುಸೇನ್ ಅವರ ಸ್ಮರಣೆಗಾಗಿ ಹಬ್ಬವನ್ನು ಆಚರಿಸಲಿದ್ದು, ಮುಸ್ಲಿಮರ ಜೊತೆಗೆ ಹಿಂದೂಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ರೋಗ ರುಜಿನ ಸೇರಿ ಇಷ್ಟಾರ್ಥ ಸಿದ್ದಿಗಾಗಿ ಹಬ್ಬದಲ್ಲಿ ಭಕ್ತರು ಹರಕೆಯನ್ನು ತೀರಿಸುತ್ತಾರೆ’ ಎಂದು ಮೊಹರಂ ಸಮಿತಿ ಕಾರ್ಯದರ್ಶಿ ಎಂ.ಡಿ.ತೌಫಿಕ್.

‘ನಗರದ ವಿವಿಧ ಬಡಾವಣೆಗಳಲ್ಲಿರುವ ಅಲಾವಿಗಳು ಹೊಂಡದ ಸರ್ಕಲ್‌ನಲ್ಲಿರುವ ಅಜರತ್ ರತನ್ ಷಾವಲಿ ದರ್ಗಾಕ್ಕೆ ಬಂದು ಬಂದು ಮುಖ ತೊಳೆಸಿ ಹೋದವು’ ಎಂದು ತೌಫಿಕ್ ತಿಳಿಸಿದರು.

‘ಕೆಟಿಜೆ ನಗರ 5ನೇ ಕ್ರಾಸ್‌ನಲ್ಲಿ 5 ಅಲಾವಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. 70 ವರ್ಷಗಳಿಂದಲೂ ಆಚರಿಸುತ್ತಾ ಬಂದಿದ್ದೇವೆ. ದೇವರ ನೈವೇದ್ಯಕ್ಕಾಗಿ ಬೆಲ್ಲದ ಹಚ್ಚು, ಸಕ್ಕರೆ, ಕೆಲವರು ಜೋಳದ ರೊಟ್ಟಿಯನ್ನು ಅರ್ಪಿಸಿದರು’ ಎಂದು ಅಲ್ಲಿನ ದೇವರ ಸೇವಕ ಮೊಹಮ್ಮದ್ ರಫೀಕ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.