ADVERTISEMENT

ಪ್ರಕರಣಗಳ ವಿಲೇವಾರಿಗೆ ಒತ್ತು ನೀಡಿ

ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ.ಎಲ್. ಜಿನರಾಳಕರ್ ಭೀಮರಾವ್

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 9:41 IST
Last Updated 9 ಡಿಸೆಂಬರ್ 2019, 9:41 IST
ದಾವಣಗೆರೆಯಲ್ಲಿ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಕರ್ನಾಟಕದ ಜಿಲ್ಲಾ ಘಟಕದಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.
ದಾವಣಗೆರೆಯಲ್ಲಿ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಕರ್ನಾಟಕದ ಜಿಲ್ಲಾ ಘಟಕದಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು.   

ದಾವಣಗೆರೆ: ಪ್ರಕರಣಗಳ ಇತ್ಯರ್ಥ ಮತ್ತು ತೀರ್ಪು ವಿಳಂಬವಾದರೆ ನ್ಯಾಯಾಲಯದ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆಯಾಗಲಿದೆ. ಆದ್ದರಿಂದ ಶೀಘ್ರ ವಿಲೇವಾರಿಗೆ ಒತ್ತು ನೀಡಬೇಕು. ಆ ಮುಖೇನ ನ್ಯಾಯಾಂಗದ ಘನತೆ ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ.ಎಲ್. ಜಿನರಾಳಕರ್ ಭೀಮರಾವ್ ಹೇಳಿದರು.

ವಕೀಲರ ದಿನಾಚರಣೆ ಅಂಗವಾಗಿ ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಕರ್ನಾಟಕದ ಜಿಲ್ಲಾ ಘಟಕದಿಂದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ನ್ಯಾಯಾಲಯಗಳ ಬಗ್ಗೆ ಜನವಿಶ್ವಾಸ ಹೆಚ್ಚಿಸುವಲ್ಲಿ ನ್ಯಾಯಾಧೀಶರು ಹಾಗೂ ವಕೀಲರ ಸಹಕಾರ ಅಗತ್ಯವಿದೆ’ ಎಂದರು.

ತ್ವರಿತವಾಗಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿಂದ ಜನರು ಕೋರ್ಟ್‌ಗಳಿಗೆ ಬರುತ್ತಿದ್ದಾರೆ. ಕೆಲಸದ ಒತ್ತಡ ಮತ್ತಿತರೆ ಕಾರಣದಿಂದಾಗಿ ಕೆಲ ಪ್ರಕರಣ ವಿಲೇ ತಡವಾಗಿರಬಹುದು. ಅಂತಹ ಪ್ರಕರಣ ವಿರಳ. 3ರಿಂದ 5 ತಿಂಗಳ ಅವಧಿಯೊಳಗೆ ಪ್ರಕರಣ ಇತ್ಯರ್ಥಪಡಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

‘ನ್ಯಾಯಾಧೀಶರು, ವಕೀಲರು ಇಬ್ಬರೂ ಸದಾ ವಿದ್ಯಾರ್ಥಿಗಳು. ಕೇವಲ ಕಾನೂನು ಪಠ್ಯ ಓದಿದರೆ ಸಾಲದು. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಮಾರ್ಪಾಡು, ಕಾಯ್ದೆಗಳು ಬರುತ್ತಿವೆ. ಹೀಗಾಗಿ ಕಾನೂನು ಅಧ್ಯಯನ ನಿರಂತರವಾಗಿರಬೇಕು. ನಮ್ಮಲ್ಲಿ ಕರಾರುವಕ್ಕಾದ ಫೀಡ್‌ಬ್ಯಾಕ್ ಇದ್ದರೆ ಪರಿಣಾಮಕಾರಿ ನ್ಯಾಯದಾನ ಮಾಡಬಹುದು’ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್.ಬಡಿಗೇರ್ ಮಾತನಾಡಿ ಜನಸಾಮಾನ್ಯರಿಗೆ ನ್ಯಾಯದಾನ ದುಬಾರಿ ಆಗಬಾರದು ಎಂಬುದು ಅಧಿವಕ್ತಾ ಪರಿಷತ್‌ನ ಅಭಿಮತ. ಹೀಗಾಗಿ ಹಳೆ ಪ್ರಕರಣಗಳ ಇತ್ಯರ್ಥಕ್ಕೆ ಪ್ರತಿ 2 ತಿಂಗಳಿಗೊಮ್ಮೆ ನಡೆಯುತ್ತಿರುವ ಲೋಕ ಅದಾಲತ್ ಕಾರ್ಯಕ್ರಮಕ್ಕೆ ವಕೀಲರು ಸಹಕರಿಸಬೇಕು ಎಂದರು.

ನ್ಯಾಯಾಲಯದಲ್ಲಿ ಪ್ರಕರಣ ಗೆಲ್ಲಬಹುದು. ಆದರೆ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ದಂಪತಿ, ಕುಟುಂಬ ಅಥವಾ ದಾಯಾದಿಗಳನ್ನು ಒಗ್ಗೂಡಿಸುವ ಪುಣ್ಯ ಸಿಗಲಿದೆ. ಹಣ ಸಂಪಾದನೆಗೆ ಗಮನ ಹರಿಸದೆ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸುವ ಬದಲಾವಣೆ ಆಗಬೇಕು ಎಂದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್.ಟಿ. ಮಂಜುನಾಥ್ ಮಾತನಾಡಿ, 65-70ರ ದಶಕದಲ್ಲಿ ಎಂಬಿಬಿಎಸ್, ಎಂಜಿನಿಯರಿಂಗ್, ಬಿಎಸ್ಸಿ-ಎಂಎಸ್ಸಿ ನಂತರದಲ್ಲಿ ಎಲ್‌ಎಲ್‌ಬಿ ಕೋರ್ಸ್ ಕಡೆಯ ಆಯ್ಕೆ ಆಗಿರುತ್ತಿತ್ತು. 80ರಿಂದೀಚೆಗೆ ಕಾನೂನು ಪದವಿಗೆ ಆದ್ಯತೆ ನೀಡಲಾಗುತ್ತಿದೆ. ಈ ವೃತ್ತಿಯ ಬಗ್ಗೆ ತಾತ್ಸಾರ ಬೇಡ. ನೈತಿಕತೆ, ಸಾಮಾನ್ಯ ಜ್ಞಾನ ಮತ್ತು ಕಾನೂನಿನ ಅರಿವು ಇದ್ದವರೆ ಉತ್ತಮ ವಕೀಲರಾಗಲು ಸಾಧ್ಯ’ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಜಿ.ಕೆ. ಸುರೇಶ್, ಅಧಿವಕ್ತಾ ಪರಿಷತ್‌ನ ಜಿಲ್ಲಾಧ್ಯಕ್ಷ ಎಲ್. ದಯಾನಂದ ಇದ್ದರು. ನಂತರ ನಡೆದ ಗೋಷ್ಠಿಗಳಲ್ಲಿ ಹೈಕೋರ್ಟ್ ವಕೀಲರಾದ ವಿಜಯಕುಮಾರ ಪಾಟೀಲ್, ಟಿ.ಪಿ. ಶ್ರೀನಿವಾಸ್, ಬಳ್ಳಾರಿಯ ಹಿರಿಯ ವಕೀಲ ವೈ. ರಂಗನಾಥರಾವ್ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.