ADVERTISEMENT

ದಾವಣಗೆರೆ | ಗಣೇಶ ಹಬ್ಬ: ಬೆಲೆ ಏರಿದರೂ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 18:29 IST
Last Updated 17 ಸೆಪ್ಟೆಂಬರ್ 2023, 18:29 IST
ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಮಹಿಳೆಯರು ಹೂವು ಖರೀದಿಸಿದರು.
ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಮಹಿಳೆಯರು ಹೂವು ಖರೀದಿಸಿದರು.   

ದಾವಣಗೆರೆ: ಬೆಲೆ ಏರಿಕೆಯ ನಡುವೆಯೂ ಮೋದಕ ಪ್ರಿಯ ಗಣೇಶನ ಹಬ್ಬಕ್ಕೆ ನಗರದ ವಿವಿಧೆಡೆ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯಿತು.

ನಗರದ ಪ್ರವಾಸಿ ಮಂದಿರ ರಸ್ತೆ, ನಿಟುವಳ್ಳಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ, ಕೆ.ಆರ್. ಮಾರುಕಟ್ಟೆ, ಚಾಮರಾಜಪೇಟೆ, ಪಿ.ಬಿ. ರಸ್ತೆ, ಗಡಿಯಾರ ಕಂಬ, ಚೌಕಿ ಪೇಟೆ ಸಹಿತ ಎಲ್ಲ ಮಾರುಕಟ್ಟೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅದರಲ್ಲೂ ಮಹಿಳೆಯರ ಪ್ರಮಾಣವೇ ಅಧಿಕವಾಗಿತ್ತು. ಹೂವುಗಳ ಬೆಲೆ ತುಸು ಕಡಿಮೆಯಾಗಿದ್ದರೂ ಹಣ್ಣುಗಳ ಬೆಲೆ ಹೆಚ್ಚಾಗಿತ್ತು.

ಬೇಳೆ, ಅಕ್ಕಿ, ಹಣ್ಣು, ತರಕಾರಿ ಬೆಲೆ ಏರಿದ್ದರೂ ಗಣಪನಿಗೆ ಕರ್ಜಿಕಾಯಿ, ಲಾಡು, ಉಂಡೆ, ಕಡುಬು, ಮೋದಕ ಹೀಗೆ ಹಲವಾರು ಬಗೆಬಗೆಯ ಖಾದ್ಯಗಳನ್ನು ಭರ್ಜರಿಯಾಗಿಯೇ ತಯಾರು ಮಾಡಿ, ಗಣಪನಿಗೆ ನೈವೇದ್ಯಕ್ಕೆ ಇಡಲು ಮುಂದಾಗಿದ್ದಾರೆ.

ADVERTISEMENT

ನಗರದ ವಿವಿಧ ಭಾಗಗಳಲ್ಲಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಈ ವರ್ಷ ಮಣ್ಣು ಮತ್ತು ಬಣ್ಣದ ಬೆಲೆಗಳು ಜಾಸ್ತಿಯಾಗಿದ್ದರಿಂದ ಗಣಪನ ಮೂರ್ತಿಗಳ ಬೆಲೆಯೂ ಹೆಚ್ಚಾಗಿತ್ತು. ಗಣೇಶನ ಅಲಂಕಾರಕ್ಕೆ ಅಂಗಡಿಗಳಲ್ಲೂ ತರಹೇವಾರಿ ಸಾಮಗ್ರಿಗಳು ಬಂದಿರುವುದರಿಂದ ಅಲಂಕಾರ ಸಾಮಾಗ್ರಿಗಳಿಗೂ ಅವುಗಳಿಗೂ ಬೇಡಿಕೆ ಹೆಚ್ಚಿತ್ತು.

ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿ ಬಾಳೆ ಕಂದುಗಳು ಜೋಡಿಗೆ ₹ 40ರಿಂದ ₹60ಕ್ಕೆ ಮಾರಾಟವಾದರೆ, ಗರಿಕೆ, ಮಾವಿನ ಸೊಪ್ಪುಗಳು ಕಟ್ಟಿಗೆ ₹ 10ರಂತೆ ಮಾರಾಟವಾದವು. ಬಾಳೆ ಎಲೆ ₹20, ವೀಳ್ಯೆದೆಲೆ ಒಂದು ಕವಳೆಗೆ ಎಲೆಗೆ ₹50ಕ್ಕೆ ಮಾರಾಟವಾಗುತ್ತಿತ್ತು.

ದರ ಪಟ್ಟಿ (₹ಗಳಲ್ಲಿ, ಪ್ರತಿ ಕೆ.ಜಿಗೆ)

ಬಾಳೆಹಣ್ಣು; 100–120 (ಒಂದು ಡಜನ್‌ಗೆ)

ಸೇಬು; 150

ದಾಳಿಂಬೆ; 220

ಸಪೋಟ: 120–130

ಮೋಸಂಬಿ; 100–120

ಕಿತ್ತಳೆ; 100–120

ದ್ರಾಕ್ಷಿ; 240

ಸೀತಾಫಲ; 140

ಹೂವು

ಗುಲಾಬಿ ಬಟನ್: 100 (ಕಾಲು ಕೆಜಿಗೆ)
ಸೇವಂತಿಗೆ; 30 (ಒಂದು ಮಾರಿಗೆ)
ಮಲ್ಲಿಗೆ; 60
ಕನಕಾಂಬರ; 60
ಗುಲಾಬಿ ಹಾರ; 600
ಸಾಮಾನ್ಯ ಹಾರ; 150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.