ADVERTISEMENT

ಭಯೋತ್ಪಾದಕರನ್ನು ಮುಸ್ಲಿಂ ಸಮಾಜದಿಂದ ಬಹಿಷ್ಕರಿಸಿ– ಉಮ್ಮತ್‌ ಚಿಂತಕರ ವೇದಿಕೆ

ವಕ್ಫ್‌ ಕಮಿಟಿಗೆ ಮನವಿ ಸಲ್ಲಿಸಿದ ಉಮ್ಮತ್‌ ಚಿಂತಕರ ವೇದಿಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 5:41 IST
Last Updated 23 ನವೆಂಬರ್ 2022, 5:41 IST
ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದವರನ್ನು ಮುಸ್ಲಿಂ ಸಮಾಜದಿಂದ ಬಹಿಷ್ಕಾರ ಹಾಕಬೇಕು ಎಂದು ಆಗ್ರಹಿಸಿ ಉಮ್ಮತ್ ಚಿಂತಕರ ವೇದಿಕೆ ಜಿಲ್ಲಾ ವಕ್ಫ್‌ ಕಮಿಟಿ ಮೂಲಕ ರಾಜ್ಯ ವಕ್ಫ್‌ ಕಮಿಟಿಗೆ ಮನವಿ ಸಲ್ಲಿಸಿದೆ.
ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದವರನ್ನು ಮುಸ್ಲಿಂ ಸಮಾಜದಿಂದ ಬಹಿಷ್ಕಾರ ಹಾಕಬೇಕು ಎಂದು ಆಗ್ರಹಿಸಿ ಉಮ್ಮತ್ ಚಿಂತಕರ ವೇದಿಕೆ ಜಿಲ್ಲಾ ವಕ್ಫ್‌ ಕಮಿಟಿ ಮೂಲಕ ರಾಜ್ಯ ವಕ್ಫ್‌ ಕಮಿಟಿಗೆ ಮನವಿ ಸಲ್ಲಿಸಿದೆ.   

ದಾವಣಗೆರೆ: ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದ ಮುಸ್ಲಿಮರನ್ನು ಸಮುದಾಯದಿಂದ ಬಹಿಷ್ಕರಿಸಬೇಕು. ಅವರನ್ನು ಮುಸ್ಲಿಂ ಸಮಾಜದ ದ್ರೋಹಿಗಳು, ದೇಶದ್ರೋಹಿಗಳು ಎಂದು ಘೋಷಿಸಬೇಕು. ಅಂಥ ಚಟುವಟಿಕೆಯಲ್ಲಿ ತೊಡಗದಂತೆ ಯುವಜನರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ವಕ್ಫ್‌ ಕಮಿಟಿ ಮೂಲಕ ರಾಜ್ಯ ವಕ್ಫ್‌ ಕಮಿಟಿಗೆ ಉಮ್ಮತ್ ಚಿಂತಕರ ವೇದಿಕೆ ಮನವಿ ಸಲ್ಲಿಸಿದೆ.

ಇತ್ತೀಚಿಗೆ ಕೆಲವು ಯುವಕ-ಯುವತಿಯರು ಪ್ರಚೋದನೆಗೆ ಒಳಗಾಗಿ ಇಸ್ಲಾಂ ಧರ್ಮದ ಸಿದ್ಧಾಂತದ ವಿರುದ್ಧ ಸಾಗುತ್ತಿದ್ದಾರೆ. ಇಸ್ಲಾಂ ಧರ್ಮದ ಮೂಲ ಆಶಯಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಇಂಟರ್‌ನೆಟ್, ಮೊಬೈಲ್‍ಗಳಲ್ಲಿ ಬರುವ ಸಂದೇಶಗಳು ಮತ್ತು ವಿಡಿಯೊಗಳನ್ನು ನೋಡಿ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ಭಯ ಹುಟ್ಟುವಂತೆ ಮಾಡುತ್ತಿದ್ದಾರೆ. ಇದರಿಂದ ಹೆತ್ತವರಿಗಷ್ಟೇ ಅಲ್ಲ ಮುಸ್ಲಿಂ ಸಮಾಜಕ್ಕೆ ಕಪ್ಪುಚುಕ್ಕೆ ಬರುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇಂತಹ ಒಂದು ಘಟನೆ ನಡೆದರೆ, ಕೆಲವು ಕೋಮುವಾದಿಗಳು ಅದನ್ನು ಇಡೀ ಮುಸ್ಲಿಂ ಸಮಾಜದ ವಿರುದ್ಧ ಎತ್ತಿ ಕಟ್ಟುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಏನೂ ಅರಿಯದ ಸಾಮಾನ್ಯ ವ್ಯಕ್ತಿಗೂ ಧರ್ಮದ ವಿರುದ್ಧ ದ್ವೇಷ ಹುಟ್ಟುವಂತೆ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಇಸ್ಲಾಂ ಧರ್ಮವು ಪ್ರತಿ ಹಂತದಲ್ಲೂ ಮಾನವೀಯತೆಗೆ ಹೆಚ್ಚು ಒತ್ತು ನೀಡುತ್ತದೆ. ಹೀಗಿದ್ದಾಗ ದಾರಿ ತಪ್ಪುತ್ತಿರುವ ಯುವಕ-ಯುವತಿಯರಿಗೆ ಇಸ್ಲಾಂ ಧರ್ಮದ ವಾಸ್ತವವನ್ನು ತಿಳಿಯಪಡಿಸಬೇಕು. ಭಾರತದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಬೇಕು ಎಂದು ತಿಳಿಸಲಾಗಿದೆ.

ADVERTISEMENT

ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದು ನಿಜವಾಗಿದ್ದರೆ ಶಿಕ್ಷೆಗೆ ಗುರಿಪಡಿಸಲು ಪೊಲೀಸ್ ಇಲಾಖೆಗೆ ಪ್ರಾಮಾಣಿಕ ಸಾಕ್ಷ ಒದಗಿಸಬೇಕು. ಭಯೋತ್ಪಾದನೆ ಚಟುವಟಿಕೆಗಳ ವಿರುದ್ಧ ಪ್ರತಿಯೊಂದು ಊರಿನಲ್ಲಿ ಅರಿವು ಮೂಡಿಸುವ ಅಭಿಯಾನವನ್ನು ವಕ್ಫ್‌ ಕಮಿಟಿ ರೂಪಿಸಬೇಕು. ಇಸ್ಲಾಂನ ಶಾಂತಿ ಮತ್ತು ಸೌಹಾರ್ದದ ಸಂದೇಶವನ್ನು ತಿಳಿಹೇಳುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದೆ.

ಉಮ್ಮತ್ ಚಿಂತಕರ ವೇದಿಕೆಯ ಅಧ್ಯಕ್ಷ ಅನೀಸ್‌ ಪಾಷ, ಆಡಿಟರ್ ಬಾಷಾ, ಹಯಾತ್ ಸಾಬ್, ಮೊಹಮ್ಮದ್ ಬಾಷಾ, ನಿಜಾಮುದ್ದೀನ್, ಮುಸ್ತಫಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.