ADVERTISEMENT

₹3.66 ಲಕ್ಷ ಖೋಟಾ ನೋಟು ವಶ: 11 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 13:46 IST
Last Updated 28 ಜನವರಿ 2020, 13:46 IST
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದರು.   

ದಾವಣಗೆರೆ: ಚಿಗಟೇರಿ ಹಾಗೂ ಹರಪನಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ನಕಲಿ ನೋಟಿನ ಜಾಲವನ್ನು ಪತ್ತೆಹಚ್ಚಿರುವ ಪೊಲೀಸರು 11 ಮಂದಿಯನ್ನು ಬಂಧಿಸಿ ಅವರಿಂದ ₹3.66.200 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಹರಪನಹಳ್ಳಿ ತಾಲ್ಲೂಕು ಹಲುವಾಗಲು ಗ್ರಾಮದ ಹನುಮಂತಪ್ಪ, ಅರಸನಾಳು ಹಾಲೇಶ, ಮಡಿವಾಳರ ಮಂಜಪ‍್ಪ, ಸಂತೋಷ, ಚಂದ್ರಪ್ಪ ಹಾಗೂ ಅರಸನಾಳು ಗ್ರಾಮದ ಉದಯ, ಸಂತೋಷ ನೀಲಗುಂದ ಗ್ರಾಮದ ಕೃಷ್ಣಪ್ಪ, ನಿಂಗಪ್ಪ, ವೆಂಕಟೇಶ ಹಾಗೂ ಪುಟ್ಟಪ್ಪ ಬಂಧಿತರು. ಮತ್ತೊಬ್ಬ ಆರೋಪಿ ಮತ್ತೂರು ಗ್ರಾಮದ ನಾಗನಗೌಡ ತಲೆಮರೆಸಿಕೊಂಡಿದ್ದಾನೆ.

ಬಂಧಿತರಿಂದ ₹100, ₹200 ಹಾಗೂ ₹ 2ಸಾವಿರ ಮುಖಬೆಲೆಯ ನಕಲಿ ನೋಟುಗಳು, ಎರಡು ಕಲರ್ ಪ್ರಿಂಟ್ ಯಂತ್ರಗಳು ನೋಟು ತಯಾರಿಕೆಗೆ ಬಳಸಿದ್ದ ಜೆಲ್ ಪೆನ್ನು, ಟೇಪ್, ಸ್ಕೇಲ್ ಹಾಗೂ ಕಟ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

‘ಆರೋಪಿಗಳು ಕಲರ್ ಪ್ರಿಂಟ್ ಸಹಾಯದೊಂದಿಗೆ ನೋಟುಗಳನ್ನು ಎಕ್ಸ್‌ಎಲ್ ಬಾಂಡ್ ಪೇಪರ್‌ಗಳನ್ನು ಬಳಸಿ ಕಲರ್ ಜೆರಾಕ್ಸ್ ಮಾಡಿ ಜಾತ್ರೆಗಳು, ಸಂತೆಗಳು ಹಾಗೂ ಮದ್ಯದ ಅಂಗಡಿಗಳಲ್ಲಿ ಗ್ರಾಮೀಣ ಭಾಗದ ಮುಗ್ದ ಜನರ ಬಳಿ ಚಲಾವಣೆ ಮಾಡುತ್ತಿದ್ದು, ಲೋಲೇಶ್ವರ ಗ್ರಾಮದಲ್ಲಿ ಚಲಾವಣೆ ಮಾಡುತ್ತಿರುವಾಗ ಗ್ರಾಮಸ್ಥರು ಆರೋಪಿಗಳನ್ನು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಆರೋಪಿಗಳಲ್ಲಿ ನೀಲಗುಂದ ಗ್ರಾಮದ ಪುಟ್ಟಪ್ಪ ಎಂಬಾತನ ಮೇಲೆ 2013ರಲ್ಲಿ ಖೋಟಾನೋಟು ಚಲಾವಣೆ ಸಂಬಂಧ ಬೆಂಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನೇ ಮುಖ್ಯ ಸೂತ್ರಧಾರ ಎಂಬ ಶಂಕೆ ವ್ಯಕ್ತವಾಗಿದ್ದು, ಇನ್ನಷ್ಟು ತನಿಖೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

‘ಮಂಡ್ಯ ಸಮೀಪದ ಕೆಸ್ತೂರು ವ್ಯಾಪ್ತಿಯ ಅಂಕನಾಥಪುರ ಗ್ರಾಮದ ಬಳಿ ಕುರಿಗಾಹಿಯೊಬ್ಬರಿಗೆ ನಕಲಿ ನೋಟು ನೀಡಿ ವಂಚಿಸಿರುವ ಪ್ರಕರಣ ಸಂಬಂಧ ಆ ಠಾಣೆಯಿಂದ ಪ್ರಕರಣವನ್ನು ತರಿಸಿಕೊಂಡು ತನಿಖೆಗೆ ಒಳಪಡಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.