ADVERTISEMENT

ಕುಸಿದ ಕಡಲೆಕಾಳು ಧಾರಣೆ

ಜಿ.ಬಿ.ನಾಗರಾಜ್
Published 23 ಫೆಬ್ರುವರಿ 2025, 0:38 IST
Last Updated 23 ಫೆಬ್ರುವರಿ 2025, 0:38 IST
ಕಡಲೆ ಕಟಾವು ಮಾಡಿ ಜಮೀನಿನಲ್ಲಿ ರಾಶಿ ಹಾಕಲಾಗಿದೆ
ಕಡಲೆ ಕಟಾವು ಮಾಡಿ ಜಮೀನಿನಲ್ಲಿ ರಾಶಿ ಹಾಕಲಾಗಿದೆ   

ದಾವಣಗೆರೆ: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ಕಡಲೆಕಾಳು ಖರೀದಿಸಲು ರಾಜ್ಯ ಸರ್ಕಾರವು ಖರೀದಿ ಕೇಂದ್ರಗಳನ್ನು ತೆರೆದಿರುವ ಬೆನ್ನಲ್ಲೇ, ಮುಕ್ತ ಮಾರುಕಟ್ಟೆಯಲ್ಲಿ ಧಾರಣೆಯು ಇಳಿಕೆಯಾಗಿದೆ. ಇಳುವರಿ ಕುಸಿತದ ನಡುವೆಯೂ ಈ ಬಾರಿ ಬೆಲೆ ಕೈಹಿಡಿಯಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ.

ಉತ್ತಮ ಗುಣಮಟ್ಟದ ಕ್ವಿಂಟಲ್‌ ಕಡಲೆಕಾಳಿಗೆ ಕೇಂದ್ರ ಸರ್ಕಾರವು ₹5,650 ಬೆಂಬಲ ಬೆಲೆ ನಿಗದಿಪಡಿಸಿದೆ. ಜನವರಿ 27ರಿಂದ ರಾಜ್ಯದಾದ್ಯಂತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳನ್ನು ತೆರೆಯುವುದಕ್ಕೂ ಮೊದಲು ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಕನಿಷ್ಠ ₹6,800ರಿಂದ ಗರಿಷ್ಠ ₹7,100 ದರ ಇತ್ತು.  ಕೇಂದ್ರಗಳು ಕಾರ್ಯಾರಂಭಗೊಂಡ ಬಳಿಕ ದರವು ₹5,800ರಿಂದ ₹6,400ಕ್ಕೆ ಕುಸಿದಿದೆ.

ಜಿಲ್ಲೆಯಲ್ಲಿ ಕಡಲೆ ಕೊಯ್ಲು ಆರಂಭವಾಗಿದ್ದು, ರೈತರು ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ಕಳೆದ ವರ್ಷದ ನವೆಂಬರ್‌ನಲ್ಲಿ ಕ್ವಿಂಟಲ್‌ಗೆ ಸರಾಸರಿ ₹8,200, ಡಿಸೆಂಬರ್‌ನಲ್ಲಿ ₹7,100 ಇದ್ದ ದರವು ಜನವರಿ ಅಂತ್ಯದಿಂದ ಇಳಿಕೆಯಾಗುತ್ತ ಬಂದಿದೆ.  

ADVERTISEMENT

‘ಈ ಬಾರಿ ಪ್ರತಿ ಎಕರೆಗೆ ಸರಾಸರಿ ಮೂರು ಕ್ವಿಂಟಲ್‌ ಇಳುವರಿ ಬಂದಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದಿದ್ದರಿಂದ ಹೆಚ್ಚಿನ ಆದಾಯ ಸಿಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ, ಖರೀದಿ ಕೇಂದ್ರ ತೆರೆದ ಬಳಿಕ ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದೆ’ ಎಂದು ಜಗಳೂರು ರೈತ ಮುಖಂಡ ತಿಪ್ಪೇಸ್ವಾಮಿ ಹೇಳುತ್ತಾರೆ.

‘ಕೇಂದ್ರ ಸರ್ಕಾರವು ಕೃಷಿ ವೆಚ್ಚಕ್ಕೆ ಅನುಗುಣವಾಗಿ ವೈಜ್ಞಾನಿಕ ಆಧಾರದ ಮೇಲೆ ಬೆಂಬಲ ಬೆಲೆಯನ್ನು ಪರಿಷ್ಕರಿಸುತ್ತಿಲ್ಲ. ರಾಜ್ಯ ಸರ್ಕಾರ ಕೂಡ ಪ್ರೋತ್ಸಾಹಧನ ನೀಡಿಲ್ಲ. ಎಂಎಸ್‌ಪಿ ಜೊತೆಗೆ ಕ್ವಿಂಟಲ್‌ಗೆ ₹1,000 ಪ್ರೋತ್ಸಾಹ ಧನ ನೀಡಿದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ಒತ್ತಾಯಿಸುತ್ತಾರೆ ಅವರು.

ಕೇಂದ್ರದತ್ತ ಸುಳಿಯದ ರೈತರು:

ರಾಜ್ಯದ 272 ಖರೀದಿ ಕೇಂದ್ರಗಳಲ್ಲಿ ಈವರೆಗೆ 159 ರೈತರು ಮಾತ್ರ ಹೆಸರು ನೋಂದಣಿ ಮಾಡಿದ್ದಾರೆ.

ರಾಜ್ಯದ 10.03 ಲಕ್ಷ ಹೆಕ್ಟೇರ್‌ನಲ್ಲಿ ಕಡಲೆ ಬೆಳೆಯಲಾಗಿದೆ. ಅಂದಾಜು 6.63 ಲಕ್ಷ ಟನ್‌ ಉತ್ಪಾದನೆಯ ನಿರೀಕ್ಷೆ ಇದೆ. ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿಯು ರಾಜ್ಯದ ಖರೀದಿ ಏಜೆನ್ಸಿಯಾಗಿದೆ. ನೋಂದಣಿ ಪ್ರಕ್ರಿಯೆ ನಿರೀಕ್ಷಿತ ಪ್ರಮಾಣದಲ್ಲಿ ನಡೆಯದಿರುವುದರಿಂದ ಖರೀದಿ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ತೃಪ್ತಿಕರವಾಗಿಲ್ಲ. ಮಾರುಕಟ್ಟೆಯಲ್ಲಿ ಕಳೆದ ವರ್ಷದಷ್ಟು ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ
ಎನ್‌.ಕೆ. ಕಾರ್ತಿಕ್‌ ರೈತ ಜಗಳೂರಿನ ಗೊಲ್ಲರಹಟ್ಟಿ
ಬೆಂಬಲ ಬೆಲೆಗಿಂತ ಮುಕ್ತ ಮಾರುಕಟ್ಟೆಯಲ್ಲಿ ದರ ಹೆಚ್ಚಿದೆ. ಹೀಗಾಗಿ ರೈತರು ಖರೀದಿ ಕೇಂದ್ರಕ್ಕೆ ಬರುತ್ತಿಲ್ಲ. ಕೊಯ್ಲು ಆರಂಭವಾಗಿದ್ದು ಮಾರ್ಚ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬರುವ ನಿರೀಕ್ಷೆ ಇದೆ
ಸಿ. ಪಿಳ್ಳೆಗೌಡ ಪ್ರಧಾನ ವ್ಯವಸ್ಥಾಪಕ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.