ADVERTISEMENT

ಬಸವಾಪಟ್ಟಣ: ಅಡಿಪಾಯಕ್ಕೇ ನಿಂತ ರೈತ ಸಂಪರ್ಕ ಕೇಂದ್ರ

ಸುಭದ್ರ ಕಟ್ಟಡ ಕೆಡವಿ ಹೊಸದಾಗಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 7:33 IST
Last Updated 25 ಜನವರಿ 2023, 7:33 IST
ಬಸವಾಪಟ್ಟಣದಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡ ಅಡಿಪಾಯದ ಹಂತದಲ್ಲೇ ಸ್ಥಗಿತಗೊಂಡಿರುವುದು
ಬಸವಾಪಟ್ಟಣದಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡ ಅಡಿಪಾಯದ ಹಂತದಲ್ಲೇ ಸ್ಥಗಿತಗೊಂಡಿರುವುದು   

ಬಸವಾಪಟ್ಟಣ: ಇಲ್ಲಿನ ಮುಖ್ಯ ರಸ್ತೆಯ ಪಕ್ಕದಲ್ಲಿ ಕೃಷಿ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ರೈತ ಸಂಪರ್ಕ ಕೇಂದ್ರದ ಕಟ್ಟಡ ಎರಡು ವರ್ಷಗಳಿಂದ ಮೇಲೇಳದೇ ಅಡಿಪಾಯದ ಹಂತಕ್ಕೇ ಸ್ಥಗಿತಗೊಂಡಿದೆ. ಕಟ್ಟಡದ ನಿರ್ಮಾಣ ಯಾವಾಗ ಆರಂಭ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

‘ಸುಭದ್ರ ಕಟ್ಟಡವನ್ನು ಕೆಡವಿ ದೊಡ್ಡ ಗಾತ್ರದಲ್ಲಿ ನಿರ್ಮಿಸಲು ಕೃಷಿ ಇಲಾಖೆ ಎರಡು ವರ್ಷಗಳ ಹಿಂದೆಯೇ ಹೊಸ ಕಟ್ಟಡ ಕಟ್ಟಲು ಆರಂಭಿಸಿತು. ಅಡಿಪಾಯ ಹಾಕಿ ಹೋದ ಗುತ್ತಿಗೆದಾರರು ಈವರೆಗೂ ಪತ್ತೆ ಇಲ್ಲ. ಹಳೆಯದು ಇಲ್ಲ. ಹೊಸ ಕಟ್ಟಡವೂ ಆರಂಭವಾಗಿಲ್ಲ. ಇದರಿಂದಾಗಿ ರೈತರಿಗೆ ತೊಂದರೆಯಾಗಿದೆ’ ಎಂದು ರೈತ ಹಾಲಸಿದ್ಧಪ್ಪ ಹೇಳಿದರು.

ಹೋಬಳಿ ಕೇಂದ್ರವಾದ ಬಸವಾಪಟ್ಟಣದಲ್ಲಿ ಕಟ್ಟಡ ನಿರ್ಮಿಸುವ ಕಾರಣದಿಂದ ಇಲ್ಲಿದ್ದ ರೈತ ಸಂಪರ್ಕ ಕೇಂದ್ರದ ಕಚೇರಿಯನ್ನು ಹರೋಸಾಗರ ಗ್ರಾಮಕ್ಕೆ ಸ್ಥಳಾಂತರಿಸಲಾಗಿದೆ. ಬಸವಾಪಟ್ಟಣದಲ್ಲಿ ಬಾಡಿಗೆ ಕಟ್ಟಡ ಬೇಕಾಗಿದೆ ಎಂಬ ವಿಷಯವನ್ನು ಸಾರ್ವಜನಿಕರಿಗೂ ತಿಳಿಸದೇ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಹರೋಸಾಗರಕ್ಕೆ ಸ್ಥಳಾಂತರಿಸಿದ್ದಾರೆ. ಇದರಿಂದ ದೂರದ ಗ್ರಾಮಗಳಲ್ಲಿರುವ ನಮ್ಮಂತಹ ರೈತರಿಗೆ ತೊಂದರೆಯಾಗಿದೆ. ಅಲ್ಲದೇ ಕಚೇರಿ ದೂರವಾಗಿರುವುದರಿಂದ ಸರ್ಕಾರ ನೀಡಿರುವ ಹಲವು ಸೌಲಭ್ಯಗಳನ್ನು ಬಳಸಿಕೊಳ್ಳಲು ಅಸಾಧ್ಯವಾಗಿದೆ’ ಎಂದು ನಿಲೋಗಲ್‌ ರೈತ ರಂಗಪ್ಪ ಅಳಲು ತೋಡಿಕೊಂಡರು.

ADVERTISEMENT

ರೈತ ಸಂಪರ್ಕ ಕೇಂದ್ರದ ಕಚೇರಿಯನ್ನು ಹರೋಸಾಗರ ಗ್ರಾಮಕ್ಕೆ ಸ್ಥಳಾಂತರಿಸಿರುವುದು ಬಹುಪಾಲು ರೈತರಿಗೆ ಗೊತ್ತೇ ಇಲ್ಲ. ರೈತ ಸಂಪರ್ಕ ಕೇಂದ್ರ ಮುಚ್ಚಿದೆ ಎಂದೇ ರೈತರು ಭಾವಿಸಿದ್ದು, ಇಲಾಖೆಯ ಸೌಲಭ್ಯಗಳನ್ನು ಪಡೆಯದೇ ಹಿಂತಿರುಗುತ್ತಿದ್ದಾರೆ. ಕಚೇರಿಯನ್ನು ಸ್ಥಳಾಂತರಿಸಿರುವ ಬಗ್ಗೆ ಸಾರ್ವಜನಿಕವಾಗಿ ಕೃಷಿ ಇಲಾಖೆ ತಿಳಿಸಿಲ್ಲ. ಕನಿಷ್ಠ ಪಕ್ಷ ಈಗ ನಿರ್ಮಿಸುತ್ತಿರುವ ಕಟ್ಟಡದ ಮುಂದೆ ಒಂದು ಸೂಚನಾ ಫಲಕವನ್ನೂ ಹಾಕಿಲ್ಲ.

‘15 ದಿನಗಳಲ್ಲಿ ಕಚೇರಿಯನ್ನು ಹೋಬಳಿ ಕೇಂದ್ರವಾದ ಬಸವಾಪಟ್ಟಣದಲ್ಲಿ ಆರಂಭಿಸಬೇಕು. ಸ್ಥಳಾವಕಾಶ ಇಲ್ಲದಿದ್ದಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭಿಸಿ, ಕಟ್ಟಡವನ್ನು ನಿರ್ಮಿಸಲು ವಿಳಂಬ ಮಾಡುತ್ತಿರುವ ಗುತ್ತಿಗೆದಾರನಿಂದ ಈ ಬಾಡಿಗೆ ವಸೂಲಿ ಮಾಡಿಕೊಳ್ಳಲಿ. ಇಲ್ಲದಿದ್ದಲ್ಲಿ ತಾಲ್ಲೂಕು ಕೃಷಿ ಇಲಾಖೆಯ ಕಚೇರಿಯ ಮುಂದೆ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು’ ಎಂದು ಚನ್ನಗಿರಿ ತಾಲ್ಲೂಕು ಹಸಿರು ಸೇನೆ ಅಧ್ಯಕ್ಷ ಎಸ್‌.ಆರ್‌. ರವಿಕುಮಾರ್‌ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.