ADVERTISEMENT

ಮಲೇಬೆನ್ನೂರು | ನಾಲೆ ಸೇವಾರಸ್ತೆ ನಿರ್ಮಾಣಕ್ಕೆ ಮುಂದಾದ ರೈತರು

ತಾವೇ ಹಣ ಸಂಗ್ರಹಿಸಿ ರಸ್ತೆಗೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:29 IST
Last Updated 19 ನವೆಂಬರ್ 2025, 6:29 IST
ಮಲೇಬೆನ್ನೂರು ಹೊರವಲಯದ 9ಎ ಭದ್ರಾ ಉಪನಾಲೆ ಸೇವಾರಸ್ತೆ ಹಾಳಾಗಿದ್ದು, ಮಂಗಳವಾರ ರೈತರು ಒಗ್ಗೂಡಿ ನಿರ್ಮಾಣ ಮಾಡುತ್ತಿರುವುದು
ಮಲೇಬೆನ್ನೂರು ಹೊರವಲಯದ 9ಎ ಭದ್ರಾ ಉಪನಾಲೆ ಸೇವಾರಸ್ತೆ ಹಾಳಾಗಿದ್ದು, ಮಂಗಳವಾರ ರೈತರು ಒಗ್ಗೂಡಿ ನಿರ್ಮಾಣ ಮಾಡುತ್ತಿರುವುದು   

ಮಲೇಬೆನ್ನೂರು: ಸರ್ಕಾರ ಮಾಡಬೇಕಾದ ಕೆಲಸ ವಿಳಂಬವಾದ ಕಾರಣ, 9ಎ ಭದ್ರಾ ಉಪನಾಲೆ ಸೇವಾರಸ್ತೆಯ ನಿರ್ಮಾಣ ಕಾರ್ಯವನ್ನು ರೈತರೇ ಒಗ್ಗೂಡಿ ಮಂಗಳವಾರ ಆರಂಭಿಸಿ ಮಾದರಿಯಾಗಿದ್ದಾರೆ.

ಈ ರಸ್ತೆಯು ಹರಿಹರ ತಾಲ್ಲೂಕಿನ ವ್ಯಾಪ್ತಿಯಲ್ಲಿದ್ದು, ಜಲ ಸಂಪನ್ಮೂಲ ಇಲಾಖೆಯ ಬಸವಾಪಟ್ಟಣ ಉಪವಿಭಾಗದ ಸರಹದ್ದಿನಲ್ಲಿದೆ. 2 ವರ್ಷದಿಂದ ಹಾಳಾಗಿರುವ ಈ ರಸ್ತೆಯನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಕಾಡಾ ಅನುದಾನ, ಪ್ರಕೃತಿ ವಿಕೋಪ ನಿಧಿ, ವಿವಿಧ ಯೋಜನೆಗಳ ಅನುದಾನದ ಅಡಿಯಲ್ಲಿ ರಸ್ತೆ ನಿರ್ಮಿಸಲು ಕೋರಿದರೂ, ಹಣ ಮಂಜೂರಾಗಿಲ್ಲ ಎಂದು ರೈತ, ಪುರಸಭೆ ಸದಸ್ಯ ರೇವಣಸಿದ್ದೇಶ್‌ ಬೇಸರ ವ್ಯಕ್ತಪಡಿಸಿದರು.

‘ಕಳೆದ ಬಾರಿ ಭತ್ತದ ಕಟಾವು ಯಂತ್ರ, ಟ್ರಾಕ್ಟರ್‌, ದ್ವಿಚಕ್ರವಾಹನಗಳ ಸಂಚಾರ ಈ ರಸ್ತೆಯಲ್ಲಿ ಕಷ್ಟವಾಗಿತು. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಅಧಿಕ ಮಳೆ ಸುರಿದ ಕಾರಣ ರಸ್ತೆ ಸಂಪೂರ್ಣ ಹಾಳಾಗಿಹೋಯಿತು. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತವು ಕಟಾವಿಗೆ ಬಂದಿದ್ದು, ಸಾಗಣೆ ಮಾಡಲು ಕಷ್ಟವಾಗಿದೆ. ಹೀಗಾಗಿ ಸಮಾನ ಮನಸ್ಕ ರೈತರು ಒಗ್ಗೂಡಿ ಹಣ ಸಂಗ್ರಹಿಸಿ ರಸ್ತೆಯ ಹೊಂಡ, ಗುಂಡಿಗಳನ್ನು ಮುಚ್ಚಿ, ಜರಗು ತುಂಬಲು ನಿರ್ಧರಿಸಿ ಕಾಮಗಾರಿ ಪ್ರಾರಂಭಿಸಿದೆವು’ ಎಂದು ರೈತರಾದ ಜಯಣ್ಣ, ಮಂಜುನಾಥ್‌, ಕುಮಾರ್‌ ಓದೋಗೌಡ್ರ, ರಮೇಶ್‌ ಹೊಸಳ್ಳಿ ಕರಿಬಸಣ್ಣ ಮಾಹಿತಿ ನೀಡಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರು, ಅಚ್ಚುಕಟ್ಟು ವ್ಯಾಪ್ತಿಯ ಶಾಸಕರು, ಸಂಸದರು, ಜನಪ್ರತಿನಿಧಿಗಳು ಪಕ್ಷಬೇಧ ಮರೆತು ರಸ್ತೆ ನಿರ್ಮಾಣಕ್ಕೆ  ಮುಂದಾಗಬೇಕು ಎಂದು ರೈತ ಸಂಘದ ಕಡರನಾಯ್ಕನಹಳ್ಳಿ ಪ್ರಭುಗೌಡ, ಹಾಳೂರು ನಾಗರಾಜ್‌, ಕನ್ನಡಪರ ಹೋರಾಟಗಾರ ಎಕ್ಕೆಗೊಂದಿ ರುದ್ರಗೌಡ, ಹೊಳೆಸಿರಿಗೆರೆ ಫಾಲಾಕ್ಷಪ್ಪ ಒತ್ತಾಯಿಸಿದರು.

‘ಹರಿಹರಕ್ಕೆ ಇಲ್ಲ ಅನುದಾನ’: ರೈತರ ಸಮಸ್ಯೆ ಕುರಿತು ಎಇಇ ಸಂತೋಷ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ‘ರಸ್ತೆ ಸಮಸ್ಯೆ ಗಮನಕ್ಕೆ ಬಂದಿದೆ. ಹರಿಹರ ತಾಲ್ಲೂಕಿನ ಕಾಮಗಾರಿ ಆರಂಭಿಸಲು ಯಾವುದೇ ಅನುದಾನ ಮಂಜೂರಾಗಿಲ್ಲ. ಹೊನ್ನಾಳಿ ಹಾಗೂ ಚನ್ನಗಿರಿ ತಾಲ್ಲೂಕಿಗೆ ಮಾತ್ರ ಮಂಜೂರಾಗಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.