ADVERTISEMENT

ದಾವಣಗೆರೆ | ಅಡಿಕೆಯತ್ತ ರೈತರ ಚಿತ್ತ: ಸಸಿಗಳಿಗೆ ಬೇಡಿಕೆ

ದಾವಣಗೆರೆ ತಾಲ್ಲೂಕಿನಲ್ಲಿ 15,000 ಹೆಕ್ಟೇರ್ ಪ್ರದೇಶದಲ್ಲಿ ಅಡಿ‌ಕೆ ನಾಟಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 5:23 IST
Last Updated 30 ಜೂನ್ 2022, 5:23 IST
ಮಾಯಕೊಂಡ ಸಮೀಪದ ನರ್ಸರಿಗಳಲ್ಲಿರುವ ನಾಟಿಗೆ ಸಿದ್ಧವಾಗಿರುವ ಅಡಿಕೆ ಸಸಿಗಳು
ಮಾಯಕೊಂಡ ಸಮೀಪದ ನರ್ಸರಿಗಳಲ್ಲಿರುವ ನಾಟಿಗೆ ಸಿದ್ಧವಾಗಿರುವ ಅಡಿಕೆ ಸಸಿಗಳು   

ಮಾಯಕೊಂಡ: ಅಂತರ್ಜಲ ವೃದ್ಧಿಹಾಗೂ ಅಡಿಕೆ ಬೆಲೆ ಏರಿಕೆಯಾಗುತ್ತಿರುವುದರಿಂದ ಹಲವು ವರ್ಷಗಳಿಂದ ಈ ಭಾಗದಲ್ಲಿ ರೈತರು ಅಡಿಕೆಯತ್ತ ಚಿತ್ತ ಹರಿಸಿದ್ದಾರೆ. ಈ ವರ್ಷವೂ ಅಡಿಕೆಯತ್ತ ರೈತರ ಆಸಕ್ತಿ ಹೆಚ್ಚಿದೆ. ಇದರಿಂದಅಡಿಕೆ ಸಸಿಗಳಿಗೆ ಭಾರಿ ಬೇಡಿಕೆ ಬಂದಿದೆ.

ಹತ್ತಿ, ಶೇಂಗಾ, ಜೋಳ, ಮೆಕ್ಕೆಜೋಳದಂತಹ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಸದ್ಯ ಅಡಿಕೆಯತ್ತ ಚಿತ್ತ ಹರಿಸಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿಯೇ15,000ಹೆಕ್ಟೇರ್ ಪ್ರದೇಶದಲ್ಲಿ ಅಡಿ‌ಕೆ ಬೆಳೆ ನಾಟಿ ಮಾಡಲಾಗಿದೆ.

ಈ ವರ್ಷದಲ್ಲಿ ಕೊಳವೆ ಬಾವಿಗಳ ಸಂಖ್ಯೆಯೂ ಹೆಚ್ಚಾಗಿದೆ. ಕೊಳವೆಬಾವಿ ಹಾಕಿಸಿದ್ದ ರೈತರು ಅಡಿಕೆ ಸಸಿ ನಾಟಿ ಮಾಡುವತ್ತ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಅಡಿಕೆ ಸಸಿಗಳಿಗೆ ಬೇಡಿಕೆ ಬಂದಿದೆ. ಸಸಿವೊಂದಕ್ಕೆ ಸದ್ಯ₹ 25ರಿಂದ ₹ 30ಗೆ ದರ ಇದೆ.

ADVERTISEMENT

ಮೊಳಕೆಯೊಡೆದ ಸಸಿಗಳು ₹ 10 ಕ್ಕೆ ಮಾರಾಟವಾಗುತ್ತಿವೆ. ಇನ್ನು ಅಡಿಕೆ ಬೀಜಗಳ ದರ ಹೆಚ್ಚಿದೆ. ದೀಪಾವಳಿ ವೇಳೆಗೆ ಸಿದ್ಧವಾಗುವ ಬೀಜದ ಗೋಟುಗಳಿಗೆ ಈಗಿನಿಂದಲೇ ಬುಕಿಂಗ್ ಆಗುತ್ತಿವೆ ಎಂದು ರೈತ ಗುಂಡಣ್ಣ ಹೇಳಿದರು.

‘ಕಳೆದ ವರ್ಷ ಸಸಿವೊಂದಕ್ಕೆ ₹ 30 ದರ ಇತ್ತು. ಈಗ ಕಾರ್ಮಿಕರ ಕೂಲಿ, ಬೀಜದ ಅಡಿಕೆ ದರ ಹೆಚ್ಚಳವಾಗಿರುವ ಕಾರಣ ಅನಿವಾರ್ಯವಾಗಿ ₹ 40 ದರ ಮಾಡಿದ್ದೇವೆ. ಹೆಚ್ಚು, ಕಡಿಮೆ ಮಾಡಿ ನೀಡುತ್ತಿದ್ದೇವೆ’ ಎಂದರು.

ಅಡಿಕೆ ಸಸಿ ಕಾಯುವುದೇ ಕೆಲಸ: ತೋಟ, ಮನೆ ಹಿತ್ತಲು ಹಾಗೂ ಜಮೀನುಗಳ ಬಳಿ ಸಾಕಿರುವ ಅಡಿಕೆ ಸಸಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಸಸಿ ಕಳ್ಳತನ ಹೆಚ್ಚುತ್ತಿದ್ದು, ಸಸಿಗಳನ್ನು ಕಾಪಾಡಿಕೊಳ್ಳುವುದೇ ತಲೆನೋವಾಗಿದೆ ಎಂದು ರೈತಗೌಡ್ರ ನಟರಾಜ್ ಹೇಳಿದರು.

‘ದಾವಣಗೆರೆ ತಾಲ್ಲೂಕಿನಾದ್ಯಂತ ಶೇಂಗಾ, ಹತ್ತಿ, ಜೋಳ ಬೆಳೆಯುವ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ನಾಟಿಯಾಗಿದೆ’ ಎಂದುಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದನಗೌಡ ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಮೆಕ್ಕೆಜೋಳ ರಾಗಿ, ಜೋಳ ಹಾಗು ಇನ್ನಿತರೆ ಬೆಳೆ ಬೆಳೆದರೆ ಬೆಳೆಯಲು ಮಾಡಿದ ಖರ್ಚು ಕೂಡಾ ಬರುತ್ತಿಲ್ಲ. ಹಾಗಾಗಿ ರೈತರು ಅಡಿಕೆಯತ್ತ ಮುಖ ಮಾಡಿದ್ದಾರೆ.ನಾಲ್ಕು ವರ್ಷ ಕಷ್ಟಪಟ್ಟು ಸಾಕಿ ಬೆಳೆಸಿದರೆ ಅಡಿಕೆ ಬೆಳೆಯಿಂದ ಉತ್ತಮ ಆದಾಯ ದೊರೆಯುತ್ತದೆ’ ಎಂದುರೈತರಾದ ರೇವಣ್ಣ, ಧನಂಜಯ ಹೇಳಿದರು.

* ಒಂದು ವರ್ಷದ ಸಸಿಗಳಿಗೆ ಹೆಚ್ಚು ಬೇಡಿಕೆ ಇದೆ. ಸಸಿ ದೊರೆಯದ ಕಾರಣ ₹ 40 ದರಕ್ಕೆ ಮಾರಾಟವಾಗುತ್ತಿವೆ.

–ಗುಂಡಣ್ಣ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.