ADVERTISEMENT

ದಾವಣಗೆರೆ: ಹೂವು ಬೆಳೆಗಾರರ ಮೇಲೆ ಗೂಂಡಾಗಳ ದಾಂಧಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 5:04 IST
Last Updated 23 ಡಿಸೆಂಬರ್ 2022, 5:04 IST
ದಾವಣಗೆರೆಯ ಭರತ್ ಕಾಲೊನಿಯ ಪುಷ್ಪ ಹರಾಜು ಕೇಂದ್ರದಲ್ಲಿ ಹೂವು ಬೆಳೆಗಾರರ ಮೇಲೆ ಗೂಂಡಾಗಳ ದಾಳಿಯನ್ನು ಖಂಡಿಸಿ ರಸ್ತೆಯಲ್ಲೇ ಹೂವು ಇಟ್ಟು ಬೆಳೆಗಾರರು ಪ್ರತಿಭಟನೆ ನಡೆಸಿದರು
ದಾವಣಗೆರೆಯ ಭರತ್ ಕಾಲೊನಿಯ ಪುಷ್ಪ ಹರಾಜು ಕೇಂದ್ರದಲ್ಲಿ ಹೂವು ಬೆಳೆಗಾರರ ಮೇಲೆ ಗೂಂಡಾಗಳ ದಾಳಿಯನ್ನು ಖಂಡಿಸಿ ರಸ್ತೆಯಲ್ಲೇ ಹೂವು ಇಟ್ಟು ಬೆಳೆಗಾರರು ಪ್ರತಿಭಟನೆ ನಡೆಸಿದರು   

ದಾವಣಗೆರೆ: ಇಲ್ಲಿನ ಭರತ್ ಕಾಲೊನಿಯಲ್ಲಿರುವ ತೋಟಗಾರಿಕೆಯ ಇಲಾಖೆಯ ಪುಷ್ಪ ಹರಾಜು ಕೇಂದ್ರದಲ್ಲಿ ಹೂವು ಮಾರಾಟಗಾರರ ಮೇಲೆ ಗೂಂಡಾಗಳು ದಾಂಧಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಇಲ್ಲಿನ ಪಿ.ಬಿ.ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಒಂದುವರೆ ಗಂಟೆಗಳ ರಸ್ತೆ ತಡೆ ನಡೆಸಿದ ಹೂವು ಬೆಳೆಗಾರರು ಸೂಕ್ತ ರಕ್ಷಣೆ ನೀಡಬೇಕು. ಹೂವಿನ ಮಾರುಕಟ್ಟೆಗೆ ಬೇರೆ ಕಡೆ ಜಾಗ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಲೋಕಿಕೆರೆ ಮಾತನಾಡಿ, ರಾತ್ರಿ ವೇಳೆ ರೈತರು ಹೂವನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಕೆಲವು ಗೂಂಡಾಗಳು ರೈತರಿಗೆ ಚಾಕು ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ. ರೈತರ ಮೊಬೈಲ್ ಕಸಿದುಕೊಳ್ಳುತ್ತಾರೆ. ಇದರಿಂದಾಗಿ ರೈತರು ಭಯಭೀತರಾಗಿದ್ದಾರೆ. ಕೂಡಲೇ ಪೊಲೀಸರು ಗೂಂಡಾಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತರ ವಿರೋಧದದ ನಡುವೆಯೂ ರೈತ ಭವನದ ಎದುರು ಇದ್ದ ಹೂವಿನ ಮಾರುಕಟ್ಟೆಯನ್ನು ಈ ಹಿಂದಿನ ಜಿಲ್ಲಾಧಿಕಾರಿಗಳು ಸ್ಥಳಾಂತರಿಸಿದ್ದರು.ಪೊಲೀಸ್ ಚೌಕಿ, ಎಟಿಎಂ ಆರಂಭ, ಪೊಲೀಸ್ ಬೀಟ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವುಗಳು ಈಡೇರಿಲ್ಲ ಎಂದು ಆರೋಪಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ನಗರ ಡಿವೈಎಸ್ ಪಿ ಮಲ್ಲೇಶ್ ಡಿ., ಸಿಪಿಐ ಕೆ.ಎನ್.ಗಜೇಂದ್ರಪ್ಪ ಹಾಗೂ ಸಿಬ್ಬಂದಿ ರೈತರ ಮನವೊಲಿಸುವ ಪ್ರಯತ್ನ ನಡೆಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಗೂಂಡಾಗಳನ್ನು ಶೀಘ್ರ ಬಂಧಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಸ್ಥಗಿತಗೊಳಿಸಿದರು.

ಹೂವು ಬೆಳೆಗಾರರಾದ ತಿಮ್ಮಪ್ಪ, ರಮೇಶ್, ರಂಗಪ್ಪ, ಪರಸಪ್ಪ, ಗೋಣೆಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.