ಕಡರನಾಯ್ಕನಹಳ್ಳಿ: ‘ಭದ್ರಾ ಕಾಲುವೆಗಳಲ್ಲಿ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಅಚ್ಚುಕಟ್ಟಿನ ಕೊನೆಯ ಭಾಗದ ರೈತರಿಗೆ ನೀರು ಕೊಡಲು ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಆರೋಪಿಸಿ ಸಮೀಪದ 14ನೇ ಕಾಲುವೆ ಬಳಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.
16, 15, 11, 10 ಸಂಖ್ಯೆಯ ಕಾಲುವೆಗಳಲ್ಲಿ 10 ದಿನಗಳ ಸರತಿಯಂತೆ ನೀರು ಸರಬರಾಜು ಆಗಿದೆ. ಆದರೆ ನಿಗದಿತ ಪ್ರಮಾಣದಲ್ಲಿ ಹರಿಯದೇ ತೋಟಗಳು, ಮೆಕ್ಕೆಜೋಳದ ಬೆಳೆ ಒಣಗುತ್ತಿವೆ. ಹಲವು ರೈತರಿಗೆ ಭತ್ತದ ನಾಟಿ ಮಾಡಲೂ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
‘ಸರದಿ ಪ್ರಕಾರ ಗುರುವಾರ ಬೆಳಿಗ್ಗೆ 14ನೇ ಕಾಲುವೆಗೆ ನೀರು ಹರಿಸಬೇಕಾಗಿತ್ತು. ಆದರೆ ನಿಗದಿತ ಪ್ರಮಾಣದ ನೀರು ಹರಿದಿಲ್ಲ. ಹೀಗೆ ಅಸಮರ್ಪಕ ನಿರ್ವಹಣೆ ಮಾಡುವುದಾದರೆ ನಮಗೆ ನೀರೇ ಬೇಡ’ ಎಂದು ಹೇಳಿದ ರೈತರು, ಕಾಲುವೆಯ ಗೇಟ್ ತೆರೆಯದಂತೆ ಮಧ್ಯಾಹ್ನದವರೆಗೆ ತಡೆಹಿಡಿದರು.
‘ಉದಾಸೀನತೆ ತೋರುತ್ತಿರುವ ಅಧಿಕಾರಿಗಳು ಸಮರ್ಪಕ ನಿರ್ವಹಣೆಯ ಭರವಸೆ ನೀಡಬೇಕು. ಆ ನಂತರವೇ ಗೇಟ್ ತೆರೆಯಲು ಅವಕಾಶ ನೀಡುತ್ತೇವೆ’ ಎಂದು ಹೊಳೆ ಸಿರಿಗೆರೆಯ ರೈತ ಮುಖಂಡ ಎಂ. ಫಾಲಾಕ್ಷಪ್ಪ ಪಟ್ಟು ಹಿಡಿದರು.
ಕಾಲುವೆಗಳಿಗೆ ಅಕ್ರಮವಾಗಿ ಪಂಪ್‌ಸೆಟ್ ಅಳವಡಿಸಿರುವುದರಿಂದ ನೀರು ಕೊನೆ ಭಾಗಕ್ಕೆ ತಲುಪುತ್ತಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರಿಗೆ ಇದರಿಂದ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಪೊಲೀಸ್ ಮತ್ತು ಬೆಸ್ಕಾಂ ಸಹಕಾರ ಪಡೆದು ಅಕ್ರಮ ಪಂಪ್ ತೆರವುಗೊಳಿಸಿದರೆ ನೀರು ಸಿಗುತ್ತದೆ ಎಂದು ಮುಖಂಡ ಚಂದ್ರಶೇಖರ್ ಪೂಜಾರ್ ಹೇಳಿದರು.
‘ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ನಿಗದಿತ ಪ್ರಮಾಣದಲ್ಲಿ ನೀರು ಸರಬರಾಜು ಮಾಡುವ ಬಗ್ಗೆ ಚರ್ಚಿಸಿದ್ದೇವೆ. ಸಮರ್ಪಕ ನಿರ್ವಹಣೆಗೆ ಬದ್ಧರಾಗಿದ್ದೇವೆ. ಭತ್ತದ ನಾಟಿ ನಡೆಯುತ್ತಿದ್ದು, ನೀರು ಹರಿಸಲು ಸಹಕರಿಸಬೇಕು’ ಎಂದು ನೀರಾವರಿ ಇಲಾಖೆಯ ಎಇಇ ಕೃಷ್ಣಮೂರ್ತಿ ರೈತರಲ್ಲಿ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ರೈತರು ನೀರು ಹರಿಸಲು ಅವಕಾಶ ನೀಡಿದರು.
ಸಹಾಯಕ ಎಂಜಿನಿಯರ್ ಪ್ರವೀಣ್, ಎಂ. ತಿಪ್ಪೇರುದ್ರಪ್ಪ, ಕುಂದೂರು ರಾಜ, ಬಂಡೇರ ಪ್ರಭು, ಯಲವಟ್ಟಿ ನಾಗರಾಜ್, ವೆಂಕಟಪ್ಳ ಬೀಮೇಶ್, ಟೈಗರ್ ಹನುಮಂತಪ್ಪ, ವಾಸನ, ಕಮಲಾಪುರ, ಹೊಳೆ ಸಿರಿಗೆರೆ, ಯಲವಟ್ಟಿ, ಭಾನುವಳ್ಳಿ, ಹೊಸಳ್ಳಿ ಲಕ್ಕಶೆಟ್ಟಿಹಳ್ಳಿ ಗ್ರಾಮಗಳ ನೂರಾರು ರೈತರು ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.