ರಸಗೊಬ್ಬರ
ದಾವಣಗೆರೆ: ರಸಗೊಬ್ಬರ ಕೊರತೆಯ ದೂರು ಬಂದ ಕಾರಣಕ್ಕೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಹಾಗೂ ತಹಶೀಲ್ದಾರ್ ಡಾ.ಅಶ್ವಥ್ ಎಂ.ಬಿ. ನೇತೃತ್ವದಲ್ಲಿ ಅಧಿಕಾರಿಗಳು ದಾವಣಗೆರೆ ನಗರ ಹಾಗೂ ಆನಗೋಡು ಹೋಬಳಿಯ ವಿವಿಧ ರಸಗೊಬ್ಬರದ ಅಂಗಡಿಗಳಿಗೆ ಗುರುವಾರ ಭೇಟಿ ನೀಡಿ, ಯೂರಿಯಾ ದಾಸ್ತಾನು ಪರಿಶೀಲನೆ ನಡೆಸಿದರು.
ಇದುವರೆಗೆ ಪೂರೈಕೆಯಾಗಿರುವ ರಸಗೊಬ್ಬರ, ಮಾರಾಟವಾದ ಪ್ರಮಾಣ ಮತ್ತು ದಾಸ್ತಾನು ಕುರಿತು ಮಾರಾಟಗಾರರನ್ನು ಪ್ರಶ್ನಿಸಿ ಮಾಹಿತಿ ಪಡೆದರು.
‘ತಾಲ್ಲೂಕಿಗೆ ಪೂರೈಕೆಯಾಗಿರುವ ಯೂರಿಯಾ ರಸಗೊಬ್ಬರವನ್ನು ಜಿಲ್ಲೆಯಿಂದ ಹೊರಗಡೆಗೆ ಕಳುಹಿಸುತ್ತಿರುವುದು ಕಂಡು ಬಂದಿದ್ದು, ಅದನ್ನು ನಿಲ್ಲಿಸಬೇಕು. ಜಿಲ್ಲೆಯ ರೈತರಿಗೆ ರಸಗೊಬ್ಬರದ ಕೊರತೆಯಾಗದಂತೆ ಕ್ರಮ ವಹಿಸಬೇಕು. ಹರಳು ರೂಪದ ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಬಳಕೆಯ ಅನುಕೂಲಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ವ್ಯಾಪಾರಿಗಳಿಗೆ ಸೂಚಿಸಿದರು.
ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಡಿ.ಎಂ., ಕೃಷಿ ಅಧಿಕಾರಿಗಳಾದ ಸಂಜೀವ್ ಕುಮಾರ್ ಆರ್., ಹುಣ್ಸಿಹಳ್ಳಿ ಚಂದ್ರಪ್ಪ, ಶ್ರೀನಿವಾಸ ಆರ್. ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.