ADVERTISEMENT

ದಾವಣಗೆರೆ ನಗರದಲ್ಲಿ ‘ರೈಡ್ ಫಾರ್ ಭಾರತ್‍ ಕೆ ವೀರ್’ ಬೈಕ್ ರ‍್ಯಾಲಿ

ಮೃತ ಸೈನಿಕರ ಕುಟುಂಬಕ್ಕೆ ನೆರವಾಗುವ ಉದ್ದೇಶ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 16:09 IST
Last Updated 24 ಡಿಸೆಂಬರ್ 2019, 16:09 IST
ವೀರಮರಣ ಹೊಂದಿದ ಸೈನಿಕರ ಕುಟುಂಬಕ್ಕೆ ಧನಸಹಾಯ ಹಾಗೂ ಯುವಕರಿಗೆ ಸದೃಢ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ‘ರೈಡ್ ಫಾರ್ ಭಾರತ್‍ಕೆ ವೀರ್’ ಬೈಕ್ ರ‍್ಯಾಲಿ ನಡೆಯಿತು
ವೀರಮರಣ ಹೊಂದಿದ ಸೈನಿಕರ ಕುಟುಂಬಕ್ಕೆ ಧನಸಹಾಯ ಹಾಗೂ ಯುವಕರಿಗೆ ಸದೃಢ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ‘ರೈಡ್ ಫಾರ್ ಭಾರತ್‍ಕೆ ವೀರ್’ ಬೈಕ್ ರ‍್ಯಾಲಿ ನಡೆಯಿತು   

ದಾವಣಗೆರೆ: ವೀರಮರಣ ಹೊಂದಿದ ಸೈನಿಕರ ಕುಟುಂಬಕ್ಕೆ ಧನಸಹಾಯ ಹಾಗೂ ಯುವಕರಿಗೆ ಸದೃಢ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆರಂಭವಾಗಿರುವ ‘ರೈಡ್ ಫಾರ್ ಭಾರತ್‍ಕೆ ವೀರ್’ ಬೈಕ್ ರ‍್ಯಾಲಿ ಮಂಗಳವಾರ ದಾವಣಗೆರೆಗೆ ಬಂದಿತು.

ರೋಟರಿ ಕ್ಲಬ್ ದಾವಣಗೆರೆ, ದಾವಣಗೆರೆ ದಕ್ಷಿಣ ಹಾಗೂ ವಿದ್ಯಾನಗರ, ರೋಟರಿ ಕ್ಲಬ್ ಮಿಡ್‌ಟೌನ್‌ಗಳು ಈ ರ‍್ಯಾಲಿಗೆ ಕೈಜೋಡಿಸಿದವು.

ಐಎಂಎ ಸಭಾಂಗಣದ ಎದುರಿನ ಸಿಲ್ವರ್ ಸ್ಕೈ ಅಪಾರ್ಟ್‌ಮೆಂಟ್ ಬಳಿ ಬೈಕ್‌ ರ‍್ಯಾಲಿಗೆ ಚಾಲನೆ ನೀಡಲಾಯಿತು. ಗುಂಡಿ ಸರ್ಕಲ್, ವಿದ್ಯಾರ್ಥಿ ಭವನ, ಜಯದೇವ ವೃತ್ತ, ರೇಲ್ವೆ ಸ್ಟೇಷನ್ ಹಾಗೂ ಪಿಬಿ ರಸ್ತೆ ಮುಖಾಂತರ ರಿಂಗ್ ರೋಡ್ ತಲುಪಿತು. ಲಕ್ಷ್ಮೀ ಫ್ಲೋರ್ ಮಿಲ್ ಹಾಗೂ ಶಾಮನೂರು ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿಯಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿತು.

ADVERTISEMENT

ಬೈಕ್‌ ರ‍್ಯಾಲಿಗೂ ಮುನ್ನ ತಂಡದ ನಾಯಕ ಡಾ.ಸುದರ್ಶನ್ ಸಿಂಗ್ ಮಾತನಾಡಿ, ‘ ಮುಂಬೈನ ಥಾಣೆಯಿಂದ ಡಿ.10ರಿಂದ ಮುಂಬೈನಿಂದ ಬೈಕ್ ರ‍್ಯಾಲಿ ಆರಂಭವಾಗಿದ್ದು, ಡಿ.26ಕ್ಕೆ ಥಾಣೆಯಲ್ಲಿ ರ‍್ಯಾಲಿ ಕೊನೆಗೊಳ್ಳಲಿದೆ. ರ‍್ಯಾಲಿಯಲ್ಲಿ ಸೈನಿಕರು, ವೈದ್ಯರು, ಐಟಿ ಉದ್ಯೋಗಿ, ಶಿಕ್ಷಕಿ, ವಕೀಲರು ವಿವಿಧ ವರ್ಗಗಳ 15 ಮಂದಿ ಪಾಲ್ಗೊಂಡಿದ್ದಾರೆ’ ಎಂದು ಹೇಳಿದರು.

‘ಗುಜರಾತ್, ಉದಯಪುರ, ಜೈಪುರ್, ನವದೆಹಲಿ, ಕೋಲ್ಕೊತ್ತಾ, ಚನ್ನೈ, ಬೆಂಗಳೂರು ಮೂಲಕ ದಾವಣಗೆರೆಗೆ ಬಂದಿದ್ದು, ಇಲ್ಲಿ ರ‍್ಯಾಲಿ ಹುಬ್ಬಳ್ಳಿ ಹಾಗೂ ಬೆಳಗಾಂ ಮೂಲಕ ಮುಂಬೈಗೆ ತಲುಪಲಿದೆ. ಪ್ರತಿದಿವಸ 450 ಕಿ.ಮೀ. ಸಂಚರಿಸಲಿದ್ದು, ರ‍್ಯಾಲಿಯು 6,120 ಕಿ.ಮೀ. ಸಂಚರಿಸಲಿದೆ. ಮೃತ ಸೈನಿಕರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಚಿತ್ರನಟ ಅಕ್ಷಯ್‌ಕುಮಾರ್ ಅವರು ವೆಬ್‌ಸೈಟ್ ಒಂದನ್ನು ಆರಂಭಿಸಿದ್ದು, ಸಲ್ಮಾನ್ ಖಾನ್ ಅವರು ಬೆಂಬಲಿಸಿದ್ದಾರೆ’ ಎಂದು ಹೇಳಿದರು.

ರ‍್ಯಾಲಿಯ ಸದಸ್ಯರಾದ ಶೋಮ, ರೋಟರಿ ಮಾಜಿ ಗವರ್ನರ್ ಆರ್‌. ನಾರಾಯಣಸ್ವಾಮಿ, ಉಪ ಗವರ್ನರ್ ಅಶೋಕ್‌ ರಾಯಭಾಗಿ, ರೋಟರಿ ಸಂಸ್ಥೆಯ ಅಧ್ಯಕ್ಷ ಗಜಾನನ ಭೂತೆ, ಇನ್ನರ್‌ವ್ಹೀಲ್ ಅಧ್ಯಕ್ಷೆ ವೈಶಾಲಿ ಜಾಧವ್, ಮಾಜಿ ಉಪ ಗವರ್ನರ್ ವಿಶ್ವಜಿತ್ ಜಾಧವ್ ಹಾಗೂ ಶ್ರೀಕಾಂತ್ ಬಗೇರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.