ADVERTISEMENT

ಕಾಮಗಾರಿಗಳನ್ನು ಬೇಗ ಮುಗಿಸಿ: ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 14:54 IST
Last Updated 18 ಡಿಸೆಂಬರ್ 2019, 14:54 IST
ಜಿ.ಎಂ. ಸಿದ್ದೇಶ್ವರ
ಜಿ.ಎಂ. ಸಿದ್ದೇಶ್ವರ   

ದಾವಣಗೆರೆ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ₹ 25.54 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ 1.73 ಲಕ್ಷ ವೆಚ್ಚದ ಕೆಲಸಗಳು ಬಾಕಿ ಇವೆ. ಅವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಜಿ.ಎಂ ಸಿದ್ದೇಶ್ವರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

2016–17ನೇ ಸಾಲಿನ ಅನುದಾನದಲ್ಲಿ ಹರಿಹರ ತಾಲ್ಲೂಕು ಮೂಗಿನಗೊಂದಿ ಗ್ರಾಮದ ಬಸ್‌ ತಂಗುದಾಣ ಹಾಗೂ ಮಳಲಿ ಗ್ರಾಮದಲ್ಲಿ ಅಂಗನವಾಡಿ ನಿರ್ಮಾಣ ಕಾಮಗಾರಿ ಇನ್ನೂ ಮುಗಿದಿಲ್ಲ ಎಂದು ಸಂಸದರು ಬೇಸರ ವ್ಯಕ್ತಪಡಿಸಿದರು. 2 ತಿಂಗಳ ಒಳಗೆ ಮುಗಿಯಲಿದೆ ಎಂದು ಕೆಆರ್‌ಐಡಿಎಲ್‌ ಎಂಜಿನಿಯರ್‌ ಮಾಹಿತಿ ನೀಡಿದರು.

ADVERTISEMENT

‘ಕಳೆದ ಮೇ 31ರ ಒಳಗೆ ಮುಗಿಸುವುದಾಗಿ ಹಿಂದಿನ ಸಭೆಯಲ್ಲಿ ಹೇಳಿ ದಾರಿ ತಪ್ಪಿಸಿದ್ದೀರಿ. ಚುನಾವಣೆ ಇದ್ದ ಕಾರಣ ಮತ್ತೆ ಸಭೆ ಮಾಡಲಾಗಲಿಲ್ಲ. ಈಗ ಮತ್ತದೇ ಕಥೆ ಹೇಳುತ್ತಿದ್ದೀರಿ. ಪರ್ಸಂಟೇಜ್‌ ನಾನು ಪಡೆದಿದ್ದರೆ ಬೇಗ ಮುಗಿಸಿಬಿಡುತ್ತಿದ್ದೀರಿ ಅಲ್ವ. ಯಾಕೆಂದರೆ ಪರ್ಸಂಟೇಜ್‌ ಕೈಯಿಂದ ಹಾಕಿರುತ್ತೀರಿ. ಅದು ವಾಪಸ್ಸಾಗಬೇಕಲ್ಲ. ಪರ್ಸಂಟೇಜ್‌ ಪಡೆಯುವುದಿಲ್ಲ ಎಂದು ನಿರ್ಲಕ್ಷ್ಯ ಮಾಡುತ್ತಿದ್ದೀರಿ. ಸರ್ಕಾರದ ಹಣ ಖರ್ಚಾಗುತ್ತಿಲ್ಲ ಎಂದು ಅಧಿಕಾರಿ ವಿರುದ್ಧ ಹರಿಹಾಯ್ದರು.

2017–18ರ ಸಾಲಿನಲ್ಲಿ ಕೆಆರ್‌ಐಡಿಎಲ್‌ ಅಡಿಯಲ್ಲಿ 5 ಕಾಮಗಾರಿಗಳು, ನಿರ್ಮಿತಿ ಕೇಂದ್ರದ ಅಡಿಯಲ್ಲಿ 5 ಕಾಮಗಾರಿಗಳು ಬಾಕಿ ಉಳಿದಿವೆ. ಅವುಗಳನ್ನು ಎರಡು ತಿಂಗಳ ಒಳಗೆ ಮುಗಿಸಿ ಎಂದು ಸಿದ್ದೇಶ್ವರ ತಿಳಿಸಿದರು.

‘ಮೀಟಿಂಗ್‌ ಇದ್ದರಷ್ಟೇ ಸ್ವಲ್ಪ ಕೆಲಸ ಮಾಡುತ್ತೀರಿ. ಇಲ್ಲದಿದ್ದಾಗ ಸುಮ್ಮನಿದ್ದು ಬಿಡುತ್ತೀರಿ’ ಎಂದು ಸಂಸದರು, ‘ನನ್ನ ಹೆಸರು ಎದ್ದು ಕಾಣುವಂತೆ ಬೋರ್ಡ್‌ ಹಾಕಿ. ಅನುದಾನ ನಾನು ಕೊಟ್ಟರೂ ಸ್ಥಳೀಯರ ಹೆಸರು ದೊಡ್ಡಗಾಗಿ ಹಾಕುತ್ತೀರಿ’ ಎಂದು ಬೇಸರ ವ್ಯಕ್ತಪಡಿಸಿದರು.

ಮಾರ್ಚ್‌ ಒಳಗೆ ಎಲ್ಲ ಕಾಮಗಾರಿಗಳು ಮುಗಿಯಲಿದ್ದು, ಶೇ 100ರಷ್ಟು ಸಾಧನೆಯಾಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ ಜಿ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.