ADVERTISEMENT

ಪ್ರಚೋದನಾಕಾರಿ ಹೇಳಿಕೆ ಆರೋಪ: ಎಂ.ಪಿ.ರೇಣುಕಾಚಾರ್ಯ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:16 IST
Last Updated 30 ಆಗಸ್ಟ್ 2025, 7:16 IST
ಎಂ.ಪಿ.ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ   

ದಾವಣಗೆರೆ: ಗಣೇಶೋತ್ಸವ ವೇಳೆ ಡಿ.ಜೆ (ಡಿಸ್ಕ್ ಜಾಕಿ) ಬಳಕೆ ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಹಾಗೂ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಅವರ ಬೆಂಬಲಿಗರ ವಿರುದ್ಧ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

'ಯುವಕರು ಡಿ.ಜೆ. ಬಳಕೆ ನಿಷೇದಾಜ್ಞೆ ಉಲ್ಲಂಘಿಸಿ' ಎಂದು ಕರೆ ನೀಡಿದ್ದಲ್ಲದೆ, 'ತಾಕತ್ತಿದ್ದರೆ ಪೊಲೀಸರು, ಜಿಲ್ಲಾಡಳಿತ ಅದನ್ನು ತಡೆಯಲಿ' ಎಂದು ಸವಾಲು ಹಾಕಿದ್ದ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಪೊಲೀಸರು ಶುಕ್ರವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಣೇಶೋತ್ಸವ ಹಾಗೂ ಈದ್ ಮಿಲಾದ್ ಮುಗಿಯುವವರೆಗೂ ಜಿಲ್ಲೆಯಾದ್ಯಂತ ಡಿ.ಜೆ ಬಳಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಜಿಲ್ಲಾಧಿಕಾರಿಯ ಆದೇಶ ವಿರೋಧಿಸಿ ಎಂ‌.ಪಿ.ರೇಣುಕಾಚಾರ್ಯ ಅವರು ಕೆಲ ದಿನಗಳಿಂದ ನಿರಂತರವಾಗಿ ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಬೆಂಬಲಿಗರೊಂದಿಗೆ ಸೇರಿ ಹಲವು ಬಾರಿ ಪ್ರತಿಭಟನೆಯನ್ನೂ ನಡೆಸಿದ್ದರು.

ಸುಪ್ರೀಂ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಬೇರೆ ಧರ್ಮದವರು ಮೈಕ್ ನಲ್ಲಿ ಆಜಾನ್ ಕೂಗುವುದನ್ನೂ, ರಸ್ತೆ ಬಂದ್ ಮಾಡಿ ನಮಾಜ್ ಮಾಡುವುದನ್ನೂ ತಡೆಯಲಿ ಎಂದು ಸವಾಲು ಎಸೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.