ADVERTISEMENT

ದರ್ಗಾದ ಹುಂಡಿಗೆ ಬೆಂಕಿ: ಸುಡದ ನೋಟುಗಳ ಎಣಿಕೆ

ದಾವಣಗೆರೆ ಸಮೀಪದ ದೊಡ್ಡಬಾತಿಯಲ್ಲಿ ನಡೆದ ಘಟನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 3:06 IST
Last Updated 24 ಫೆಬ್ರುವರಿ 2021, 3:06 IST
ದಾವಣಗೆರೆ ದೊಡ್ಡಬಾತಿ ದರ್ಗಾದಲ್ಲಿ ಕಾಣಿಕೆ ಹುಂಡಿಗೆ ಮಂಗಳವಾರ ಬೆಂಕಿ ಬಿದ್ದಿದ್ದರಿಂದ ಸುಟ್ಟ ನೋಟುಗಳನ್ನು ಬೇರ್ಪಡಿಸಿ ಹಣ ಎಣಿಕೆ ಮಾಡಲಾಯಿತು.
ದಾವಣಗೆರೆ ದೊಡ್ಡಬಾತಿ ದರ್ಗಾದಲ್ಲಿ ಕಾಣಿಕೆ ಹುಂಡಿಗೆ ಮಂಗಳವಾರ ಬೆಂಕಿ ಬಿದ್ದಿದ್ದರಿಂದ ಸುಟ್ಟ ನೋಟುಗಳನ್ನು ಬೇರ್ಪಡಿಸಿ ಹಣ ಎಣಿಕೆ ಮಾಡಲಾಯಿತು.   

ದಾವಣಗೆರೆ: ದೊಡ್ಡಬಾತಿ ದರ್ಗಾದ ಕಾಣಿಕೆ ಹುಂಡಿಗೆ ಬೆಂಕಿ ಬಿದ್ದ ಕಾರಣ ಅಪಾರ ಪ್ರಮಾಣದಲ್ಲಿ ನೋಟುಗಳು ಸುಟ್ಟುಹೋಗಿವೆ. ಕೂಡಲೇ ದರ್ಗಾದಲ್ಲಿದ್ದವರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ವಕ್ಫ್‌ ಇಲಾಖೆಯಿಂದ ಈಗ ಎಣಿಕೆ ಕಾರ್ಯ ನಡೆಯುತ್ತಿದೆ.

ಬಾಲಕನೊಬ್ಬ ಗಂಧದ ಕಡ್ಡಿ ಹಚ್ಚಿದ ಬಳಿಕ ಎಲ್ಲಿ ಇಡುವುದು ಎಂದು ಗೊತ್ತಾಗದೇ ಹುಂಡಿಯೊಳಗೆ ಹಾಕಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಮಂಗಳವಾರ ಬೆಳಿಗ್ಗೆ ಕಾಣಿಕೆ ಹುಂಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಭಕ್ತರು ನೀರು ಹಾಕಿದರು. ಬಳಿಕ ವಕ್ಫ್‌ ಮಂಡಳಿ ಮತ್ತು ಗ್ರಾಮಾಂತರ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಮತ್ತು ವಕ್ಫ್‌ ಅಧಿಕಾರಿಗಳು ಬಂದ ಬಳಿಕ ಹುಂಡಿ ತೆರೆದಾಗ ಒಟ್ಟು ಹುಂಡಿಯ ಹಣದಲ್ಲಿ ಶೇ 5ರಷ್ಟು ನೋಟು ಸುಟ್ಟುಹೋಗಿವೆ. ಉಳಿದ ಹಣ ನೀರು ಬಿದ್ದು ಒದ್ದೆಯಾಗಿದೆ. ಬಳಿಕ ಎಣಿಕೆ ಕಾರ್ಯ ಆರಂಭಿಸಲಾಯಿತು. ವಕ್ಫ್‌ ಮಂಡಳಿ ಅಧಿಕಾರಿ, ಸಿಬ್ಬಂದಿ, ದರ್ಗಾದ ಸಿಬ್ಬಂದಿ ಸೇರಿಕೊಂಡು ನೋಟು ಬೇರ್ಪಡಿಸಿ ಎಣಿಸುತ್ತಿದ್ದಾರೆ. ಗ್ರಾಮಾಂತರ ಠಾಣೆಯ ‍ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ADVERTISEMENT

2016ರಿಂದ ಈ ಹುಂಡಿ ತೆರೆದಿರಲಿಲ್ಲ. ಸುಟ್ಟ ಹಣ ಬಿಟ್ಟು ಉಳಿದವುಗಳ ಎಣಿಕೆ ನಡೆಯುತ್ತಿದ್ದು, ಮಂಗಳವಾರ ರಾತ್ರಿಯಾಗುವ ಹೊತ್ತಿಗೆ ₹4 ಲಕ್ಷ ಎಣಿಕೆಯಾಗಿದೆ. ಇನ್ನೂ ಶೇ 70ರಷ್ಟು ಎಣಿಕೆ ನಡೆಯಲು ಬಾಕಿ ಇದೆ. ಹೀಗಾಗಿ ₹12 ಲಕ್ಷಕ್ಕಿಂತ ಅಧಿಕ ಹಣ ಇರಬಹುದು ಎಂದು ಜಿಲ್ಲಾ ವಕ್ಫ್‌ ಅಧಿಕಾರಿ ಸೈಯದ್ ಮೋಝಂ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.